‘ಒಂದು ಮತಕ್ಕೂ ಮಹತ್ವ ಇದೆ’

ಶುಕ್ರವಾರ, ಏಪ್ರಿಲ್ 19, 2019
30 °C

‘ಒಂದು ಮತಕ್ಕೂ ಮಹತ್ವ ಇದೆ’

Published:
Updated:
Prajavani

ಬೆಂಗಳೂರು: ಪ್ರತಿ ಮತಕ್ಕೂ ಅಭ್ಯರ್ಥಿಯನ್ನು ಗೆಲ್ಲಿಸುವ ಮತ್ತು ಸೋಲಿಸುವ ಶಕ್ತಿ ಇದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಹೇಳಿದರು.

ಬಿ ಪ್ಯಾಕ್ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ‘ಮತದಾನದ ಹೆಚ್ಚಳಕ್ಕೆ ಆಯೋಗದ ನೂತನ ವಿಧಾನಗಳು’ ಎಂಬ ಸಂವಾದದಲ್ಲಿ ಅವರು ಮಾತನಾಡಿದರು.

‘ನಾನೊಬ್ಬ ಮತದಾನ ಮಾಡದಿದ್ದರೆ ಏನೂ ಆಗುವುದಿಲ್ಲ ಎಂದುಕೊಳ್ಳುವುದು ತಪ್ಪು. ಕ್ರಿಕೆಟ್ ಆಟದಲ್ಲಿ ಒಂದು ರನ್‌ ಎಷ್ಟು ಮುಖ್ಯವೋ ಚುನಾವಣೆಯಲ್ಲಿ ಒಂದು ಮತವೂ ಮುಖ್ಯ’ ಎಂದರು.

ಮತದಾನದ ಬಗ್ಗೆ ಗ್ರಾಮೀಣ ಪ್ರದೇಶದ ಜನರಲ್ಲಿ ಇರುವ ಆಸಕ್ತಿ ನಗರ ಪ್ರದೇಶದಲ್ಲಿ ಇಲ್ಲದಿರುವುದು ವಿಪರ್ಯಾಸ. ಎಲ್ಲರೂ ಕೆಟ್ಟವರು ಎಂದು ಸುಮ್ಮನಾಗದೆ ಇರುವವರಲ್ಲಿ ಒಳ್ಳೆಯವರನ್ನು ಹುಡುಕುವುದು ಸೂಕ್ತ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವೆಲ್ಲರೂ ಸೇರಿ ಉಳಿಸಿಕೊಳ್ಳಬೇಕು. ಅದಕ್ಕಾಗಿ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಜೈನ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಂದೀಪ್ ಶಾಸ್ತ್ರಿ ಮಾತನಾಡಿ, ‘ಸ್ಪರ್ಧಿಸಿರುವ ಅಭ್ಯರ್ಥಿಗಳ್ಯಾರು ಒಳ್ಳೆಯವರಲ್ಲ. ಹೀಗಾಗಿ ಮತದಾನ ಮಾಡುವುದಿಲ್ಲ ಎಂದು ಹೇಳುವ ಹಲವು ಯುವಕರನ್ನು ನೋಡಿದ್ದೇನೆ. ಆದರೆ, ಅಭ್ಯರ್ಥಿಗಳು ಯಾರು ಎಂಬುದನ್ನೇ ಅವರು ತಿಳಿದುಕೊಂಡಿರುವುದಿಲ್ಲ. ರಾಜಕಾರಣಿಗಳೆಂದರೆ ಕೆಟ್ಟವರು ಎಂಬ ಅಭಿಪ್ರಾಯ ಬೆಳೆಯುತ್ತಿರುವುದು ಮತದಾನ ಪ್ರಮಾಣ ಕಡಿಮೆಯಾಗಲು ಕಾರಣ’ ಎಂದರು.

‘ಮತದಾನದ ಪ್ರಮಾಣವನ್ನು ಹೆಚ್ಚಿಸಲು ಇನ್ನಷ್ಟು ತಂತ್ರಜ್ಞಾನವನ್ನು ಬೆಳೆಸಿಕೊಳ್ಳಲು ಸಾಧ್ಯವೇ ಎಂಬುದರ ಬಗ್ಗೆ ಆಲೋಚನೆ ಮಾಡಬೇಕಿದೆ. ಮತದಾನ ಪದ್ಧತಿ ಸರಳವಾಗಬೇಕಿದೆ’ ಎಂದು ರಂಗಕರ್ಮಿ ಪ್ರಕಾಶ್ ಬೆಳವಾಡಿ ಅಭಿಪ್ರಾಯಪಟ್ಟರು.

ಬಿ ಪ್ಯಾಕ್‌ ಸಂಸ್ಥೆಯ ಮ್ಯಾನೇಜಿಂಗ್‌ ಟ್ರಸ್ಟಿ ರೇವತಿ ಅಶೋಕ್ ಮಾತನಾಡಿ, 2018ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಶೇ 54ರಷ್ಟು ಮಾತ್ರ ಮತದಾನವಾಗಿದೆ. ಈ ಪ್ರಮಾಣ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಾಗಬೇಕಿದೆ. ಸಾಫ್ಟ್‌ವೇರ್ ಕಂಪನಿಗಳ ಉದ್ಯೋಗಿಗಳು ಮತದಾನದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !