ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥರ್ಮಲ್ ಇಮೇಜ್ ಮೂಲಕ ಸ್ತನ ಕ್ಯಾನ್ಸರ್ ಪತ್ತೆ

ರಾಜ್ಯದ ಆಸ್ಪತ್ರೆ, ನರ್ಸಿಂಗ್‌ ಹೋಂಗಳಲ್ಲಿ ಪರಿಚಯಿಸಲು ಕೇಂದ್ರ ಸರ್ಕಾರದ ಅನುಮತಿ
Last Updated 29 ಆಗಸ್ಟ್ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ಮ್ಯಾಮೋಗ್ರಫಿ ಮಾಡದೆಯೇ ಐದೇ ನಿಮಿಷದಲ್ಲಿ ಸ್ತನ ಕ್ಯಾನ್ಸರ್‌ ಪರೀಕ್ಷೆ ಮಾಡುವ ನೂತನ ವಿಧಾನ ಆವಿಷ್ಕಾರ ಮಾಡಲಾಗಿದೆ. 0.5ಸೆಂ.ಮೀ.ರಷ್ಟು ಕಿರು ಗಾತ್ರದ ಕ್ಯಾನ್ಸರ್‌ ಗಡ್ಡೆಯನ್ನೂ ಪತ್ತೆ ಮಾಡಬಹುದಾದ ಪರೀಕ್ಷೆಯನ್ನು ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪರಿಚಯಿಸಲಾಗುತ್ತಿದೆ.

35ರಿಂದ 65 ವರ್ಷದವರಲ್ಲಿ ಹೆಚ್ಚಾಗಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ತಡವಾಗಿ ಸ್ತನ ಕ್ಯಾನ್ಸರ್‌ ಗಡ್ಡೆ ಪತ್ತೆ ಹಾಗೂ ದುಬಾರಿ ಮ್ಯಾಮೋಗ್ರಫಿ ಪರೀಕ್ಷೆ ಕ್ಯಾನ್ಸರ್ ಪ್ರಕರಣಗಳ ನಿಯಂತ್ರಣಕ್ಕೆ ತೊಡಕಾಗಿದೆ. ಇದರಿಂದಾಗಿಯೇ ಸ್ತನ ಕ್ಯಾನ್ಸರ್‌ಗೆ ಒಳಪಟ್ಟ ಇಬ್ಬರಲ್ಲಿ ಒಬ್ಬರು ಚಿಕಿತ್ಸೆ ಫಲಿಸದೇ ಮೃತಪಡುತ್ತಿದ್ದಾರೆ. ಸುಲಭವಾಗಿ ಸ್ತನ ಕ್ಯಾನ್ಸರ್ ಪತ್ತೆ ಮಾಡುವ ವಿಧಾನವನ್ನು ‘ನಿರಾಮಯಿ’ ಸಂಸ್ಥೆ ಆವಿಷ್ಕಾರ ಮಾಡಿದ್ದು, ಕೇಂದ್ರ ಆರೋಗ್ಯ ಸಚಿವಾಲಯವು ಪರೀಕ್ಷೆಗೆ ಅನುಮೋದನೆ ನೀಡಿದೆ.

ಮ್ಯಾಮೋಗ್ರಫಿಗೆ ಪರ್ಯಾಯವಾದ ಈ ವಿಧಾನದಲ್ಲಿ ಥರ್ಮಲ್ ಇಮೇಜ್ ಸೆರೆಹಿಡಿಯಲಾಗುತ್ತದೆ. ಇಂತಹ 35 ಯಂತ್ರಗಳನ್ನು ಸಂಸ್ಥೆ ಸ್ವೀಡನ್‌ನಿಂದ ಆಮದು ಮಾಡಿಕೊಂಡಿದ್ದು, ಒಂದು ಯಂತ್ರಕ್ಕೆ ₹10 ಲಕ್ಷ ವೆಚ್ಚವಾಗುತ್ತದೆ. ದೇಹದಲ್ಲಿನ 4 ಲಕ್ಷ ಉಷ್ಣದ ಅಣುಗಳನ್ನು ಯಂತ್ರ ಗ್ರಹಿಸಲಿದ್ದು, ‘ನಿರಾಮಯಿ’ ತಂತ್ರಾಂಶ ದ ಮೂಲಕ ವಿಶ್ಲೇಷಣೆಗೆ ಒಳಪಡಿಸಿ ವರದಿ ನೀಡಲಿದೆ. ಈ ಎಲ್ಲ ಪ್ರಕ್ರಿಯೆಗೆ 15ನಿಮಿಷಗಳು ಸಾಕು.

ರಾಜ್ಯದ ವಿವಿಧ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ 10 ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 100 ಮಂದಿಯಲ್ಲಿ ಸರಾಸರಿ 4 ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿರುವುದು ಬೆಳಕಿಗೆ ಬಂದಿದೆ. ರಾಜ್ಯದ ಐಟಿ ಬಿಟಿ ಇಲಾಖೆಯ ಕರ್ನಾಟಕ ಸ್ಟಾರ್ಟಪ್‌ ಸೆಲ್‌ ಕೂಡಾ ಈ ಆವಿಷ್ಕಾರವನ್ನು ಗುರುತಿಸಿದ್ದು, ಮುಂದಿನ ಹಂತಕ್ಕೆ ಕೊಂಡೊಯ್ಯಲು ನೆರವಾಗಿದೆ.

ಅಗ್ಗದ ದರದಲ್ಲಿ ಪರೀಕ್ಷೆ: ‘ಕ್ಯಾನ್ಸರ್‌ ಗಡ್ಡೆ 2 ಸೆಂ.ಮೀ. ಆಗುವವರೆಗೂ ವ್ಯಕ್ತಿಯ ಅರಿವಿಗೆ ಬರುವುದಿಲ್ಲ. ಇದರಿಂದಾಗಿ ಪರೀಕ್ಷೆಗೆ ಒಳಪಡುವ ಹೊತ್ತಿಗೆ ಕ್ಯಾನ್ಸರ್ 3ನೇ ಹಂತ ತಲುಪಿರಲಿದೆ. ಆಗ, ಕಿಮೋಥೆರಪಿ ಮಾಡಿಸಿಕೊಳ್ಳಬೇಕಾಗುತ್ತದೆ. ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದಲ್ಲಿ ಚಿಕಿತ್ಸೆ ಸುಲಭ. ಹಾಗಾಗಿ ಉಷ್ಣತೆಯ ಮಾಪನದ ಮೂಲಕ ಪರೀಕ್ಷೆ ನಡೆಸುವ ವಿಧಾನ ಆವಿಷ್ಕಾರ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉಚಿತವಾಗಿ ಸ್ಕ್ರೀನಿಂಗ್ ಮಾಡಿ, ವರದಿ ನೀಡಲಾಗುವುದು’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೀತಾ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರ ಸರ್ಕಾರದಿಂದ ಪೇಟೆಂಟ್ ಪಡೆಯಲಾಗಿದ್ದು, ನೂತನ ಪರೀಕ್ಷಾ ವಿಧಾನದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗಿದೆ’ ಎಂದರು.

‘ಸ್ಪರ್ಶ ರಹಿತ ಪರೀಕ್ಷೆ’

ಸುಮಾರು ₹70 ಲಕ್ಷ ಬೆಲೆಬಾಳುವ ಮ್ಯಾಮೋಗ್ರಫಿ ಯಂತ್ರ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಿ ಮಾತ್ರ ಇದೆ. ಈ ದುಬಾರಿ ಯಂತ್ರ ಹಾಗೂ ‍‍‍ಪರೀಕ್ಷೆ ಬದಲು, ಥರ್ಮಲ್ ಇಮೇಜ್ ಪರೀಕ್ಷೆಯನ್ನು ದೇಶದ ಎಲ್ಲ ಆಸ್ಪತ್ರೆಗಳಲ್ಲಿ ಪರಿಚಯಿಸಲು ಕೇಂದ್ರ ಸರ್ಕಾರ ಒಲವು ತೋರಿದೆ.

‘ಆಸ್ಪತ್ರೆಗಳ ಚಿಕ್ಕ ಕೊಠಡಿಯಲ್ಲಿ ಯಂತ್ರ ಇರಿಸಲಾಗುತ್ತದೆ. ಆಸನದ ಮೇಲೆ ಮಹಿಳೆ ಕುಳಿತುಕೊಂಡ ಬಳಿಕ ದೇಹದ ಥರ್ಮಲ್ ಇಮೇಜ್ ಅನ್ನು ಯಂತ್ರ ಸೆರೆಹಿಡಿಯಲಿದೆ. ಇಲ್ಲಿ ಯಾವುದೇ ಸ್ಪರ್ಶ, ವೀಕ್ಷಣೆ ಹಾಗೂ ನೋವು ಇರುವುದಿಲ್ಲ’ ಎಂದು ಗೀತಾ ಹೇಳಿದರು.

***

* ₹2 ರಿಂದ 3ಸಾವಿರ – ಖಾಸಗಿ ಕ್ಯಾನ್ಸರ್ ಆಸ್ಪತ್ರೆಗಳಲ್ಲಿಮ್ಯಾಮೋಗ್ರಫಿ ಪರೀಕ್ಷಾ ಶುಲ್ಕ

* ₹ 200 –ಥರ್ಮಲ್ ಇಮೇಜ್ ಮೂಲಕ ಪರೀಕ್ಷೆಗೆ ತಗುಲುವ ಶುಲ್ಕ

* ₹ 1,000 –ಥರ್ಮಲ್ ಇಮೇಜ್ ಪರೀಕ್ಷೆ ಬಳಿಕ ಪೂರ್ಣ ಪ್ರಮಾಣದ ವರದಿಯ ಶುಲ್ಕ

***

ನೂತನ ಪರೀಕ್ಷಾ ವಿಧಾನ ಸಾಮಾನ್ಯ ಆಸ್ಪತ್ರೆಯಲ್ಲೂ ಲಭ್ಯವಾಗುವುದರಿಂದ ಸ್ತನ ಕ್ಯಾನ್ಸರ್ ಪತ್ತೆ ಸುಲಭವಾಗಲಿದೆ

–ಗೀತಾ ಮಂಜುನಾಥ್ , ನಿರಾಮಯಿ ಸಂಸ್ಥೆ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT