ಶ್ರವಣ ಸಮಸ್ಯೆ ಜಾಗೃತಿ ಕಾರ್ಯದಲ್ಲಿ ಬ್ರೆಟ್‌ ಲೀ

7

ಶ್ರವಣ ಸಮಸ್ಯೆ ಜಾಗೃತಿ ಕಾರ್ಯದಲ್ಲಿ ಬ್ರೆಟ್‌ ಲೀ

Published:
Updated:
Deccan Herald

ಬೆಂಗಳೂರು: ಕುರ್ಚಿಗಿ ಒರಗೆ ತನ್ನದೇ ಲೋಕದಲ್ಲಿದ್ದ ಹುಡುಗನನ್ನು ಸೊಗಸಾದ ನಗುವಿನೊಂದಿಗೆ ಮಾತಿಗೆಳೆಯುವ ಪ್ರಯತ್ನ ಮಾಡುತ್ತಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್‌ ಲೀ. ವಿಶ್ವ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರು ತನ್ನ ಪಕ್ಕದಲ್ಲಿಯೇ ಕುಳಿತು ತನ್ನ ಮಾತನ್ನು ಕೇಳಲು ಪ್ರಯತ್ನಿಸುತ್ತಿರುವ ಬಗ್ಗೆ ಆ ಹುಡುಗನಿಗೆ ಯಾವ ಗೊಡವೆಗಳಿಲ್ಲ, ತಾನೂ ಅಷ್ಟೇ ಸೊಗಸಾಗಿ ನಗುತ್ತಾ ಕುಳಿತ.

ಹುಟ್ಟಿನಿಂದಲೇ ಶ್ರವಣ ದೋಷದಿಂದ ಹೊರಗಿನ ಯಾವುದೇ ಶಬ್ದವನ್ನು ಕೇಳಿಸಿಕೊಂಡಿರದಿದ್ದ ಹುಡುಗ ತನ್ಮಯ್‌ಗೆ ಈಗ; ’ಸರಿಯಾಗಿ ಕೂತ್ಕೊ’ ಎಂದು ಅಮ್ಮ ಹೇಳುವ ಪಿಸು ನುಡಿಯೂ ಸ್ಪಷ್ಟವಾಗಿ ಕೇಳುತ್ತಿದೆ. ಶ್ರವಣಕ್ಕೆ ಸಂಬಂಧಿಸಿದ ಸಮಸ್ಯೆ ಇರುವ ಸೂಚನೆ ಸಿಕ್ಕ ಕೂಡಲೇ ತಜ್ಞ ವೈದ್ಯರನ್ನು ಭೇಟಿ ಮಾಡಿ ಎಂದು ಜಾಗೃತಿ ಮೂಡಿಸುವ ಮಾತುಗಳನ್ನು ಬ್ರೆಟ್‌ ಲೀ, ತನ್ಮಯ್‌ನನ್ನು ಪಕ್ಕದಲ್ಲಿ ಕೂರಿಸಿಕೊಂಡು ಹೇಳುತ್ತಿದ್ದರು. 

(ಬಾಲಕ ತನ್ಮಯ್‌ಗೆ ಸಹಿ ಮಾಡಿದ ಪುಟಾಣಿ ಬ್ಯಾಟ್‌ ಕಾಣಿಕೆ ನೀಡಿದ ಬ್ರೆಟ್‌ ಲೀ)

ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳನ್ನು ಸುತ್ತುತ್ತಾ ಬ್ರೆಟ್‌ ಲೀ ಶ್ರವಣ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸದ್ಯ ಕಾಕ್ಲಿಯರ್‌ ಇಂಡಿಯಾದ ಪ್ರಚಾರ ರಾಯಭಾರಿಯಾಗಿ ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ವಿಶ್ವದಲ್ಲಿ ಶ್ರವಣ ದೋಷ ಹೊಂದಿರುವ 3.40 ಕೋಟಿ ಮಕ್ಕಳ್ಳಿದ್ದಾರೆ, ಈ ಎಲ್ಲರಿಗೂ ಸರಿಯಾದ ಚಿಕಿತ್ಸೆ ಸಿಗಬೇಕು. ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ತಿಳಿಸುವ ವ್ಯವಸ್ಥೆ ಆಗಬೇಕಿದೆ. ಅದಕ್ಕಾಗಿ ಸರ್ಕಾರಗಳೊಂದಿಗೂ ಮಾತು ಕತೆ ನಡೆಸಿರುವುದಾಗಿ ಹೇಳಿದರು. 

ಸೋಮವಾರ ಬ್ರೆಟ್‌ ಲೀ ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ಗೆ ಭೇಟಿ ನೀಡಿ, ಅವರು ಹಮ್ಮಿಕೊಂಡಿರುವ ಜಾಗೃತಿ ಅಭಿಯಾನದ ಕುರಿತು ಮಾತನಾಡಿದರು. 

‌’ಶ್ರವಣ ಸಮಸ್ಯೆ ಇರುವ ಯಾವುದೇ ಮಗುವಿಗೆ ಮಿದುಳಿನ ಬೆಳವಣಿಗೆ ಮೇಲೂ ಪರಿಣಾಮವಾಗುತ್ತದೆ. ವ್ಯಾಯಾಮದ ಮೂಲಕ ದೇಹದ ಆರೋಗ್ಯ ಕಾಪಾಡುವಂತೆ ಮಿದುಳಿಗೆ ಶಬ್ದಗಳ ಮೂಲಕ ಆರೋಗ್ಯ ಮತ್ತು ಬೆಳವಣಿಗೆ ಸಾಧ್ಯವಾಗುತ್ತದೆ. ಮಗುವಿಗೆ ಕೇಳಿಸಿಕೊಳ್ಳುವುದರಲ್ಲಿ ತೊಂದರೆ ಇರುವುದು ಗಮನಕ್ಕೆ ಬರುತ್ತಿದ್ದಂತೆ ತಜ್ಞ ವೈದ್ಯರನ್ನು ಭೇಟಿ ಮಾಡಿ, ಮಗುವಿನ ಭವಿಷ್ಯ ಸುಂದರಗೊಳಿಸಲು ಪಯತ್ನಿಸಬೇಕಿದೆ’ ಎಂದರು. 

ಒಂದು ಮಗುವಿನ ಶ್ರವಣ ಸಮಸ್ಯೆ ಬಗೆಹರಿಯಲು 5–6 ವರ್ಷಗಳೇ ಬೇಕಾಗುತ್ತದೆ. ಶಸ್ತ್ರ ಚಿಕಿತ್ಸೆ ಮಾಡಿ ಕೇಳುವ ಸಾಧನವನ್ನು ಅಳವಡಿಸುವ ಮುನ್ನ ಮಗುವನ್ನು ಚಿಕಿತ್ಸೆಗೆ ತೆರೆದುಕೊಳ್ಳಲು ಪಾಲಕರಿಂದಲೂ ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. ಕರ್ನಾಟಕದಲ್ಲಿ ಈಗಾಗಲೇ 80 ಮಕ್ಕಳಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಕೇಳುವ ಸಾಧನವನ್ನು ಅಳವಡಿಸಿರುವುದಾಗಿ ವೈದ್ಯ ಶಂಕರ್‌ ಮಡಿಕೇರಿ ಮಾಹಿತಿ ನೀಡಿದರು. 

’ಮುಂಜಾನೆ ಏಳುವಾಗ ಕೇಳುವ ಸಾಧನವನ್ನು ಕಿವಿಗೆ ಇಡುತ್ತಿದ್ದಂತೆ ಮಗನ ಮುಖದಲ್ಲಿ ದೊಡ್ಡ ನಗು ಮೂಡುತ್ತದೆ. ಹೊರಗಿನ ಶಬ್ದಗಳನ್ನು ಆಲಿಸುತ್ತ ಅತ್ಯಂತ ಖುಷಿಯಿಂದ ಮುಂದಿನ ಕೆಲಸಗಳಲ್ಲಿ ತೊಡಗುತ್ತಾನೆ’ ಎನ್ನುತ್ತಾರೆ ತನ್ಮಯ್‌ ತಾಯಿ ಸುಗುಣ. ನರಗಳಿಗೆ ಶಬ್ದಗಳ ಸಂದೇಶ ನೀಡಲು ಅನುವಾಗುವ ಕಾಗ್ನಿಟಿವ್‌ ಇಂಪ್ಲಾಂಟ್‌ ಚಿಕಿತ್ಸೆಗೆ ತನ್ಮಯ್‌ ಒಳಗಾಗಿದ್ದಾನೆ. ಪತ್ರಿಕಾ ವಿತರಕರಾಗಿ ಕಾರ್ಯನಿರ್ವಹಿಸುತ್ತಿರುವ ತನ್ಮಯ್‌ ತಂದೆ, ಹಲವರ ನೆರವಿನೊಂದಿಗೆ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. 

ಬ್ರೆಟ್‌ ಲೀ ಮೆಚ್ಚಿನ ಹಾಡು ಮುಕ್ಕಾಬುಲಾ 

ಕ್ರಿಕೆಟ್‌, ಸಮಾಜಮುಖಿ ಕಾರ್ಯಗಳ ಜತೆಗೆ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಬ್ರೆಟ್‌ ಲೀ, ಎ.ಆರ್‌.ರೆಹಮಾನ್‌ ಸಂಗೀತ ನಿರ್ದೇಶನದ ’ಮುಕ್ಕಾಲ ಮುಕ್ಕಾಬುಲಾ..’ ಹಾಡು ಹೆಚ್ಚು ಪ್ರಿಯ ಎಂದರು. 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !