ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಲ್‌ನಲ್ಲಿ ಹುದ್ದೆಯ ವೇತನಕ್ಕೆ ತಕ್ಕಂತೆ ಲಂಚ ನಿಗದಿ: ಸಂಭಾಷಣೆ ವೈರಲ್‌

Last Updated 5 ಮಾರ್ಚ್ 2020, 5:52 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಲ್ಲಿ (ಚಾಮುಲ್‌) 72 ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿರುವ ಬೆನ್ನಲ್ಲೇ, ಒಕ್ಕೂಟದ ನಿರ್ದೇಶಕರೊಬ್ಬರು ಹಾಗೂ ರೈತ ಮುಖಂಡರೊಬ್ಬರ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆ ಬಹಿರಂಗಗೊಂಡಿದೆ.

‘ಪ್ರಜಾವಾಣಿ’ಗೆ ಆಡಿಯೊ ತುಣುಕು ಲಭ್ಯವಾಗಿದ್ದು, ಅದರಲ್ಲಿ ಹಿಂದಿನ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಸಾ.ರಾ.ಮಹೇಶ್‌ ಹಾಗೂ ಸಹಕಾರ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪುರ ಅವರ ಹೆಸರುಗಳೂ ಪ್ರಸ್ತಾಪವಾಗಿವೆ. 72 ಹುದ್ದೆಗಳ ನೇಮಕಾತಿಗೆ ಸರ್ಕಾರದ ಒಪ್ಪಿಗೆ ಪಡೆಯಲು ಸಚಿವರಿಗೆ ₹2 ಕೋಟಿವರೆಗೆ ಹಣ ನೀಡಲಾಗಿದೆ ಎಂದು ನಿರ್ದೇಶಕರು ಹೇಳುವುದು ಸಂಭಾಷಣೆಯಲ್ಲಿ ಇದೆ.

ಚಾಮುಲ್‌ ನಿರ್ದೇಶಕರಲ್ಲಿ ಒಬ್ಬರಾದ ಕಿನಕಳ್ಳಿ ಮಾದಪ್ಪ ಹಾಗೂ ಯಳಂದೂರಿನ ರೈತ ಮುಖಂಡ ಗೋವಿಂದರಾಜು ಅವರ ನಡುವೆ ನಡೆದಿರುವ ಸಂಭಾಷಣೆ ತುಣುಕು ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ಯು ಗೋವಿಂದರಾಜು ಅವರನ್ನು ಸಂಪರ್ಕಿಸಿದಾಗ, ಕಿನಕಳ್ಳಿ ಮಾದಪ್ಪ ಅವರೊಡನೆ ದೂರ ವಾಣಿಯಲ್ಲಿ ಮಾತನಾಡಿದ್ದನ್ನು ದೃಢ ಪಡಿಸಿದರು. ಮಾದಪ್ಪ ಅವರು, ‘ಆಡಿಯೊ ಬಗ್ಗೆ ನನಗೇನೂ ಗೊತ್ತಿಲ್ಲ. ನಾಳೆ ಕರೆ ಮಾಡಿ’ ಎಂದು ಹೇಳಿ ಕರೆ ಕಡಿತಗೊಳಿಸಿದರು.

ಸಂಭಾಷಣೆಯಲ್ಲಿ ಏನಿದೆ?: ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ಈ ಸಂಭಾಷಣೆ ನಡೆದಿದೆ ಎಂದು ಹೇಳಲಾಗುತ್ತಿದೆ. ‘ನೇಮಕಾತಿಗೆ ಸರ್ಕಾರದ ಒಪ್ಪಿಗೆ ಪಡೆಯಲು ಚಾಮುಲ್‌ ಅಧ್ಯಕ್ಷರು ಸಚಿವರಾದ ಸಾ.ರಾ.ಮಹೇಶ್‌ ಹಾಗೂ ಬಂಡೆಪ್ಪ ಕಾಶಂಪುರ ಅವರಿಗೆ ₹ 2 ಕೋಟಿ ನೀಡಿದ್ದಾರೆ. ಒಂದೊಂದು ಹುದ್ದೆಗೆ ₹ 5 ಲಕ್ಷ, ₹ 10 ಲಕ್ಷ, ₹ 15 ಲಕ್ಷ... ಹೀಗೆ ಕೊಡಲಾಗಿದೆ. ಮೇಲ್ಮಟ್ಟದಲ್ಲಿ ₹ 2 ಕೋಟಿ ನೀಡಲಾಗಿದೆ. ಅದನ್ನು ಯಾರು ಕೊಡುತ್ತಾರೆ?’ ಎಂದು ನಿರ್ದೇಶಕ ಹೇಳುತ್ತಿರುವುದು ಆಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT