ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿರುದ್ಧದ ಸುದ್ದಿ ತಡೆಗೆ ಡೀಲ್!

ಎಐಸಿಸಿ ಕಾರ್ಯದರ್ಶಿ ಮಧು ಯಾಸ್ಕಿ ಗೌಡ್ ಆರೋಪ
Last Updated 31 ಮಾರ್ಚ್ 2018, 7:53 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಬಿಜೆಪಿ ವಿರುದ್ಧ ಸುದ್ದಿ ಪ್ರಕಟಿಸದಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ರಾಜ್ಯದ ಪ್ರಮುಖ ಮಾಧ್ಯಮಗಳೊಂದಿಗೆ ಕೋಟಿಗಟ್ಟಲೆ ಹಣದ ಡೀಲ್ ಮಾಡಿಕೊಂಡಿದ್ದಾರೆ’ ಎಂದು ಎಐಸಿಸಿ ಕಾರ್ಯದರ್ಶಿ ಮತ್ತು ವಕ್ತಾರ ಮಧು ಯಾಸ್ಕಿ ಗೌಡ್ ಆರೋಪಿಸಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಜಾವಡೇಕರ್, ಪ್ರಮುಖ ಪತ್ರಿಕೆಗಳು ಹಾಗೂ ಸುದ್ದಿ ವಾಹಿನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಎಷ್ಟು ಕೋಟಿ ಹಣ ಎನ್ನು‌ವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ’ ಎಂದು ಸ್ಪಷ್ಟಪಡಿಸಿದರು.

‘ಈಗಾಗಲೇ ಅಂತರ್ಜಾಲ ಪತ್ರಿಕೆ ‘ಕೋಬ್ರಾ ಪೋಸ್ಟ್’ ನಡೆಸಿದ ಸ್ಟಿಂಗ್ ಆಪರೇಷನ್‌ನಲ್ಲಿ ದೇಶದ ದೊಡ್ಡ ಪ್ರಸರಣದ 17 ಪ್ರಮುಖ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ಹಣಕ್ಕಾಗಿ ಕೋಮುವಾದದ ಸುದ್ದಿ ಪ್ರಕಟಿಸಲು ಮತ್ತು ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿಗಳನ್ನು ಬಿತ್ತರಿಸಲು ಒಪ್ಪಿಕೊಂಡಿರುವ ವಿಷಯ ಬಹಿರಂಗವಾಗಿದೆ’ ಎಂದು ಅವರು ಉಲ್ಲೇಖಿಸಿದರು. ‘ಮಾಧ್ಯಮಗಳು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿವೆ. ಸರ್ಕಾರದ ವಿರುದ್ಧದ ಕಾಂಗ್ರೆಸ್ ಧ್ವನಿ ಎತ್ತಿದರೂ ಅದಕ್ಕೆ ಮಾಧ್ಯಮಗಳು ಬೆಂಬಲ ನೀಡುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಹಾಗೂ ಹಲವು ಶೈಕ್ಷಣಿಕ ಸಂಸ್ಥೆಗಳು ನಾಶವಾದವು. ಎಲ್ಲದರಲ್ಲೂ ಸರ್ಕಾರ ಹಸ್ತಕ್ಷೇಪ ಮಾಡಿದ್ದೇ ಇದಕ್ಕೆ ಕಾರಣ ಎಂದು ದೂರಿದರು.‘ಇತ್ತೀಚೆಗೆ ಸಿಬಿಎಸ್‌ಇ ಪರೀಕ್ಷೆಯ 10ನೇ ತರಗತಿ ಗಣಿತ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಗೂ ಪ್ರಧಾನಿ ಮೋದಿ ನೇರ ಹೊಣೆಗಾರರು. ಏಕೆಂದರೆ,ಪ್ರಶ್ನೆಪತ್ರಿಕೆ ಸೋರಿಕೆಯಾದ ನಂತರವೂ ಸರ್ಕಾರ ಸೂಕ್ತ ತನಿಖೆಗೆ ಆದೇಶಿಸಲಿಲ್ಲ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ವಿರುದ್ಧವೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಮಕ್ಕಳಿಗೆ ಪರೀಕ್ಷೆ ಒತ್ತಡ ಹೇಗೆ ಎದುರಿಸಬೇಕು ಹೇಳಿಕೊಡುವ ಮೋದಿ ಅವರಿಗೆ, ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮಕ್ಕಳಿಗಾಗುವ ತೊಂದರೆ ಬಗ್ಗೆ ಚಿಂತಿಸಲೂ ಸಮಯವಿಲ್ಲ’ ಎಂದು ವ್ಯಂಗ್ಯವಾಡಿದರು.

ಕಿಡಿಗೇಡಿ ಮನಸ್ಥಿತಿಗೆ ಸಂಕೇತ: ಬಿಜೆಪಿ ದೇಶದಲ್ಲಿ ಕೋಮುವಾದ ಹಬ್ಬಿಸಲು ಮತ್ತು ರಾಹುಲ್‌ಗಾಂಧಿ ವಿರುದ್ಧ ಪ್ರಚಾರ ಮಾಡಲು ಮಾಧ್ಯಮಗಳ ಜೊತೆ ಬಿಜೆಪಿ ಡೀಲ್‌ ಮಾಡಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪ ಕಿಡಿಗೇಡಿ ಮನಸ್ಥಿತಿಗೆ ಸಂಕೇತ ಎಂದು ಬಿಜೆಪಿ ವಕ್ತಾರ ಎಸ್‌.ಸುರೇಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.‘ರಾಜ್ಯದಲ್ಲಿ ನಿರಂತರವಾಗಿ ಮಾಧ್ಯಮಗಳನ್ನು ‘ಮ್ಯಾನೇಜ್’ ಮಾಡುತ್ತಿರುವವರು ಯಾರು ಮತ್ತು ಯಾವ ಪಕ್ಷ ಎಂಬುದು ಎಲ್ಲರಿಗೂ ಗೊತ್ತು. ಮಾಧ್ಯಮಗಳೊಂದಿಗೆ ಬಿಜೆಪಿಗೆ ಉತ್ತಮ ಬಾಂಧವ್ಯವಿದೆ. ಮಾಧ್ಯಮಗಳನ್ನು ಮ್ಯಾನೇಜ್‌ ಮಾಡುವ ಜಾಯಮಾನ ನಮ್ಮದಲ್ಲ. ಅದು ಏನಿದ್ದರೂ ಕಾಂಗ್ರೆಸ್ ಸಂಸ್ಕೃತಿ’ ಎಂದು ಹೇಳಿದರು.ಪ್ರಕಾಶ್ ಜಾವಡೇಕರ್‌ 10–15 ವರ್ಷಗಳಿಂದ ರಾಷ್ಟ್ರೀಯ ವಕ್ತಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಂದಿಗೂ ಇಂತಹ  ಕಾರ್ಯಗಳಿಗೆ ಕೈ ಹಾಕುವವರಲ್ಲ ಎಂದೂ ಸುರೇಶ್‌ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT