ಭಾನುವಾರ, ಏಪ್ರಿಲ್ 2, 2023
33 °C
ನಾಡಪ್ರಭುವಿನ 511ನೇ ಹುಟ್ಟುಹಬ್ಬದ ಸಡಗರ

ಕೆಂಪೇಗೌಡರ ಕಂಚಿನ ಪ್ರತಿಮೆಗೆ ನಾಳೆ ಅಡಿಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 511ನೇ ಜಯಂತಿಯನ್ನು ರಾಜ್ಯ ಸರ್ಕಾರ ಇದೇ 27ರಂದು ಸರಳವಾಗಿ ಆಚರಿಸಲಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದಲ್ಲಿ 23 ಎಕರೆ ವಿಶಾಲ ಪ್ರದೇಶದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ಸ್ಥಾಪಿಸುವ ಕಾಮಗಾರಿಗೂ ಈ ಸಂದರ್ಭದಲ್ಲಿ ಚಾಲನೆ ನೀಡಲಾಗುತ್ತದೆ.

ಬೆಳಿಗ್ಗೆ 10.30 ಗಂಟೆಗೆ ಈ ಕಾಮಗಾರಿಗೆ ಅಡಿಗಲ್ಲು ಹಾಕುವ ಸಮಾರಂಭ ಹಾಗೂ ಸೆಂಟ್ರಲ್ ಪಾರ್ಕ್ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಲಿದ್ದಾರೆ. ನಾಡಪ್ರಭುಗಳ ಪ್ರತಿಮೆಯ ಮಾದರಿಯನ್ನೂ ಅನಾವರಣ ಮಾಡಲಾಗುತ್ತದೆ. 2021ರ ಕೆಂಪೇಗೌಡ ಜಯಂತಿಯಂದು ಕಂಚಿನ ಪ್ರತಿಮೆಯನ್ನು ಹಾಗೂ ಸೆಂಟ್ರಲ್ ಪಾರ್ಕ್‌ ಅನ್ನು ಲೋಕಾರ್ಪಣೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಾಗಲೇ ಅಲ್ಲಿ ಅವರ ಬೃಹತ್ ಪ್ರತಿಮೆಯನ್ನು ಒಳಗೊಂಡ ಸ್ಮಾರಕ ರಚಿಸುವ ಪ್ರಸ್ತಾಪವೂ ಇತ್ತು. ಯಡಿಯೂರಪ್ಪ ಅವರು 2019-20ನೇ ಸಾಲಿನ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಮೀಸಲಿಟ್ಟಿದ್ದರು. ಈ ಯೋಜನೆಯನ್ನು ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯಗತಗೊಳಿಸಲಿದೆ. 

ಕೆಂಪೇಗೌಡರ ಸ್ಮರಣೆಗೆ ಹಲವು ಕಾರ್ಯಕ್ರಮಗಳು

* ಆವತಿ, ಯಲಹಂಕ, ಬೆಂಗಳೂರು, ಮಾಗಡಿ, ಶಿವಗಂಗೆ ಸೇರಿದಂತೆ ಕೆಂಪೇಗೌಡರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೆಯೋ ಆ ಎಲ್ಲ ಪ್ರದೇಶಗಳನ್ನು ಒಳಗೊಂಡ ಒಂದು ಸರ್ಕ್ಯೂಟ್ ರಚಿಸಿ ಆಮೂಲಾಗ್ರವಾಗಿ ಅಭಿವೃದ್ಧಿಪಡಿಸುವುದು.

* ಕೆಂಪೇಗೌಡರ ವೀರ ಸಮಾಧಿಯುಳ್ಳ ಮಾಗಡಿ ತಾಲ್ಲೂಕಿನ ಕೆಂಪಾಪುರವನ್ನು ಜಾಗತಿಕ ಮಟ್ಟದ ಐತಿಹಾಸಿಕ ಪ್ರವಾಸಿ ತಾಣವಾಗಿ ರೂಪಿಸುವುದು. ಇಡೀ ಗ್ರಾಮವನ್ನು ಅಭಿವೃದ್ಧಿಪಡಿಸುವುದು. ಸ್ಥಳೀಯರು ಬೆಳೆದ ಕೃಷಿ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವುದು.

* ಕೆಂಪಾಪುರ ಕೆರೆಯನ್ನು ಅಭಿವೃದ್ಧಿಪಡಿಸಿ ಸರ್ವಋತು ಪ್ರವಾಸಿತಾಣವನ್ನಾಗಿ ರೂಪಿಸುವುದು

ಕೆಂಪೇಗೌಡ ಸೆಂಟ್ರಲ್ ಪಾರ್ಕ್ ಹೇಗಿರಲಿದೆ?

* ಕೆಂಪೇಗೌಡರು ನಿರ್ಮಿಸಿದ ನಗರದ ಐತಿಹಾಸಿಕ ಹೆಜ್ಜೆ ಗುರುತುಗಳನ್ನು ಈಗಿನ ಜನರಿಗೆ ಪರಿಚಯಿಸುತ್ತದೆ.

* ಕೆಂಪೇಗೌಡರ ಸಾಧನೆಗಳ ಮೂಲಕ ಅವರ ಸಮಗ್ರ ಕಥೆಯನ್ನು ಹಾಗೂ ಬೆಂಗಳೂರಿನ ಇತಿಹಾಸವನ್ನೂ ಕಟ್ಟಿಕೊಡಲಿದೆ. 

*ಕೆಂಪೇಗೌಡರು ವ್ಯಾಪಾರ ವಾಣಿಜ್ಯ ಉದ್ದೇಶಕ್ಕಾಗಿ ಚಿಕ್ಕಪೇಟೆ, ಬಳೆಪೇಟೆ, ತಿಗಳರಪೇಟೆ, ಅರಳೇಪೇಟೆ, ರಾಗಿಪೇಟೆ ಸೇರಿದಂತೆ 64ಕ್ಕೂ ಹೆಚ್ಚು ಪೇಟೆಗಳನ್ನು ಸ್ಥಾಪಿಸಿದ್ದರು. ಈ ಪೇಟೆಗಳ ಸೊಗಡೂ ಇಲ್ಲಿರುತ್ತದೆ.

ಉದ್ಯಾನದ ವಿನ್ಯಾಸ ಹೇಗಿರಲಿದೆ?

ಸೆಂಟ್ರಲ್ ಪಾರ್ಕ್ ನಲ್ಲಿ 108 ಅಡಿ ಎತ್ತರ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲಾಗುತ್ತದೆ. ಅಲ್ಲಿ ವಿಶಾಲವಾದ ಪಾದಚಾರಿ ಮಾರ್ಗಗಳಿರುತ್ತವೆ. ಅವುಗಳನ್ನು ಕೆಂಪೇಗೌಡರ ಕಾಲದ ಪೇಟೆಗಳ ರಸ್ತೆಗಳಂತೆ ವಿನ್ಯಾಸ ಮಾಡಲಾಗುತ್ತದೆ. ಜತೆಗೆ ಕೆರೆಕಟ್ಟೆಗಳು, ಅವುಗಳನ್ನು ಒಂದಕ್ಕೊಂದು ಸೇರಿಸುವ ನಾಲೆಗಳನ್ನೂ ನಿರ್ಮಿಸಲಾಗುವುದು. ಅರಿಶಿಣ ಕುಂಕುಮವನ್ನು ಪ್ರತಿಬಿಂಬಿಸುವಂತೆ ಸುತ್ತ ಹೂದೋಟಗಳನ್ನು ನಿರ್ಮಿಸಲಾಗುವುದು.

ಕೆಂಪೇಗೌಡರ ಪ್ರತಿಮೆ ವೆಚ್ಚ ಕೆಐಎ ಸಂಸ್ಥೆ ಭರಿಸಲಿ

‘ಕೆಂಪೇಗೌಡರ ಬೃಹತ್‌ ಪ್ರತಿಮೆ ಸ್ಥಾಪಿಸುವ ಉದ್ದೇಶದಿಂದ ಬಜೆಟ್‌ನಲ್ಲಿ ಮೀಸಲಿಟ್ಟ ಹಣವನ್ನು ಸುಮನಹಳ್ಳಿಯಲ್ಲಿ ಐದು ಎಕರೆ ಜಮೀನಿನಲ್ಲಿ ಕೆಂಪೇಗೌಡ ಸ್ಮಾರಕ ಕೇಂದ್ರ, ವಸ್ತು ಸಂಗ್ರಹಾಲಯ, ಅಧ್ಯಯನ ಸಂಸ್ಥೆ ಮತ್ತು ಸಾಂಸ್ಕೃತಿಕ ಕೇಂದ್ರ ಆರಂಭಿಸಲು ಬಳಸಬೇಕು’ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರ ಕೆಂಪೇಗೌಡರ ಬೃಹತ್ ಪ್ರತಿಮೆ ಸ್ಥಾಪಿಸಲು ನಿರ್ಧರಿಸಿರುವುದು ಸಂತಸ ವಿಷಯ. ಆದರೆ, ಇದಕ್ಕೆ ಸರ್ಕಾರ ಹಣ ನೀಡುವ ಅಗತ್ಯ ಇಲ್ಲ ಅನಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

’ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಾಕಷ್ಟು ನೆರವು ಮತ್ತು ಅನುಕೂಲಗಳನ್ನು ಮಾಡಿಕೊಟ್ಟಿದೆ. ಹೀಗಾಗಿ, ಪ್ರತಿಮೆ ಸ್ಥಾಪಿಸಲು ಅಗತ್ಯವಿರುವ ಹಣವನ್ನು ಕೆಐಎ ಸಂಸ್ಥೆಯೇ ಭರಿಸಬೇಕು. ಈ ಬೇಡಿಕೆಯನ್ನು ತಕ್ಷಣ ಪರಿಗಣಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಪತ್ರದಲ್ಲಿ ಶಿವಕುಮಾರ್ ಆಗ್ರಹಿಸಿದ್ದಾರೆ.

ಐತಿಹಾಸಿಕ ಉದ್ಯಾನದ ರೂಪ

‘ಈ ಪ್ರತಿಮೆ ಸಾಂಕೇತಿಕವಾಗಿರದೆ, ಅವರ ಇತಿಹಾಸ, ಪರಂಪರೆಯನ್ನು ಸಾರುವ ಐತಿಹಾಸಿಕ ಉದ್ಯಾನದ ರೂಪ ಪಡೆಯಲಿದೆ. ದೃಶ್ಯರೂಪದ ಧ್ವನಿ ಬೆಳಕಿನ ಕಾರ್ಯಕ್ರಮಗಳನ್ನೂ ಇಲ್ಲಿ ರೂಪಿಸಲಾಗುವುದು. ನಗರದಲ್ಲಿ ಅನೇಕ ಉದ್ಯಾನಗಳನ್ನು ನಿರ್ಮಿಸಿದ್ದ ಮಹಾಚೇತನಕ್ಕೆ ನಮನ ಸಲ್ಲಿಸುವ ರೀತಿಯಲ್ಲಿ ಈ ಉದ್ಯಾನ ನಿರ್ಮಾಣವಾಗಲಿದೆ’ ಎಂದು ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು. 

‘ಕೆಂಪೇಗೌಡರು ನಗರ ನಿರ್ಮಾತೃವಾಗಿ ಮಾತ್ರವಲ್ಲ, ಆಡಳಿಗಾರರಾಗಿ, ಜನಪರ ಪಾಳೆಯಗಾರರಾಗಿ ಅದೆಷ್ಟೋ ಸ್ಮರಣೀಯ ಕೆಲಸಗಳನ್ನು ಮಾಡಿದ್ದಾರೆ. ಜತೆಗೆ, ಅವರು ನಮ್ಮ ಬೆಂಗಳೂರಿನ ಅಸ್ಮಿತೆ, ನಮ್ಮ ಸ್ಫೂರ್ತಿ. ಅವರು ಹಾಕಿಕೊಟ್ಟ ಅಭಿವೃದ್ಧಿ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಮುಂದಿನ ತಲೆಮಾರುಗಳಿಗೆ ಪರಿಚಯಿಸಿ ಅವರ ಸಾಧನೆಗಳನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಐಡೆಕ್ ತಜ್ಞರು ಈ ನಿಟ್ಟಿನಲ್ಲಿ ಅಧ್ಯಯನಶೀಲರಾಗಿದ್ದಾರೆ. ಅವರು ವರದಿ ಕೊಟ್ಟ ನಂತರ ಸಮಗ್ರ ಯೋಜನೆಯನ್ನು ರೂಪಿಸಿ ಜಾರಿಗೆ ತರಲಾಗುವುದು’ ಎಂದರು.

ಆಂಧ್ರ, ತಮಿಳುನಾಡಿಗೂ ವ್ಯಾಪಿಸಿತ್ತು ಕೆಂಪೇಗೌಡರ ಆಳ್ವಿಕೆ

ಕೆಂಪೇಗೌಡರು ಕೋಟೆ, ಗೋಪುರ, ಕೆರೆಗಳನ್ನು ಕಟ್ಟಿದ ದೊರೆ ಮಾತ್ರವಲ್ಲ. ಅವರ ಆಡಳಿತ ಬೆಂಗಳೂರಿನಾಚೆಗೂ ವ್ಯಾಪಿಸಿತ್ತು. ಬೆಂಗಳೂರನ್ನು ವ್ಯಾವಹಾರಿಕ ಕೇಂದ್ರವನ್ನಾಗಿ ಬೆಳೆಸುವಲ್ಲಿಯೂ ಅವರ ಕೊಡುಗೆ ಮಹತ್ತರವಾದುದು. ಇತಿಹಾಸದ ಪುಟಗಳಲ್ಲಿ ಇದಕ್ಕೆ ಸಾಕಷ್ಟು ಪುರಾವೆಗಳೂ ಲಭ್ಯ ಎನ್ನುತ್ತಾರೆ ಇತಿಹಾಸಕಾರರು.

‘ಕೆಂಪೇಗೌಡರು ಕರ್ನಾಟಕದ ಜೊತೆ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಹಲವಾರು ಪ್ರದೇಶಗಳನ್ನು ಒಳಗೊಂಡ ವಿಶಾಲ ಸಾಮ್ರಾಜ್ಯವನ್ನು ಆಳಿದ ದೊರೆ. ಹೊಸೂರು ಬಳಿ ಅಂಕುಶಗಿರಿ ಎಂಬಲ್ಲಿ 900 ಎಕರೆ ಜಮೀನನ್ನು ಆಗಿನ ಬ್ರಿಟಿಷ್‌ ಸರ್ಕಾರ ಕೆಂಪೇಗೌಡರ ವಂಶಜರಿಗೆ ನೀಡಿದ ಬಗ್ಗೆ ಮದ್ರಾಸ್‌ ಪ್ರಾಂತ್ಯದ 1805ರ ರಾಜ್ಯಪತ್ರದಲ್ಲಿ ದಾಖಲೆಗಳಿವೆ. ಈ ಪ್ರದೇಶವೀಗ ಸಂರಕ್ಷಿತ ಅರಣ್ಯವಾಗಿದೆ’ ಎನ್ನುತ್ತಾರೆ ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ.

‘ಅಂಕುಶಗಿರಿಯಲ್ಲಿ ಕೆಂಪೇಗೌಡರ ವಂಶಜರ ಅರಮನೆ ಪಾಳುಬಿದ್ದ ಸ್ಥಿತಿಯಲ್ಲಿದೆ. ಅವರ ಮರಿಮೊಮ್ಮಗ ಮುಮ್ಮಡಿ ಕೆಂಪವೀರಪ್ಪಗೌಡ ಕಟ್ಟಿಸಿದ ತಿಮ್ಮರಾಯಸ್ವಾಮಿ ದೇವಸ್ಥಾನವೂ ಇದೆ. ಭಾರತೀಯ ಪುರಾತತ್ವ ಇಲಾಖೆಯೂ ಸಮ್ಮತಿ ಪಡೆದು, ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಈ ಅರಮನೆಯ ಜೀರ್ಣೋದ್ಧಾರ ಮಾಡಬಹುದು’ ಎಂದು ಅವರು ಸಲಹೆ ನೀಡಿದರು.

‘ನಾಡಪ್ರಭು ಕೆಂಪೇಗೌಡರ ವಿಗ್ರಹ ಸ್ಥಾಪಿಸುವುದರಿಂದ ಅವರ ಬಗ್ಗೆ ಜನರು ಹೆಚ್ಚು ತಿಳಿದುಕೊಳ್ಳುವುದಕ್ಕೆ ಅವಕಾಶ ಸಿಗಲಿದೆ. ಇದು ಪ್ರವಾಸಿ ಕೇಂದ್ರವಾಗಿಯೂ ಭವಿಷ್ಯದಲ್ಲಿ ಜನರನ್ನು ಸೆಳೆಯಬಹುದು. ಜೊತೆಗೆ ಅವರ ಆಡಳಿತಕ್ಕೆ ಸಂಬಂಧಿಸಿ ವಿಚಾರಗಳ ಬಗ್ಗೆ ಇತಿಹಾಸತಜ್ಞರನ್ನು ಬಳಸಿಕೊಂಡು ಆಳ ಅಧ್ಯಯನವನ್ನೂ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

***

27ರಂದು ನಾಡಪ್ರಭು ಕೆಂಪೇಗೌಡರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಅವರ ಹಾದಿಯಲ್ಲಿ ಸಾಗೋಣ. ಅವರ ಹೆಸರನ್ನು ಚಿರಸ್ಥಾಯಿಗೊಳಿಸೋಣ.

-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

***

ವಿಮಾನ ನಿಲ್ದಾಣದ ಬಳಿ 23 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡ ಸೆಂಟ್ರಲ್‌ ಪಾರ್ಕ್ ಮುಂದಿನ ತಲೆಮಾರಿಗೆ ಆದರ್ಶಪ್ರಾಯವಾಗಿ ಪಾರಂಪರಿಕ ರೀತಿಯಲ್ಲಿ ನಿರ್ಮಾಣಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿತ್ತು. ನಮ್ಮ ಆಶಯಕ್ಕೆ ಪೂರಕವಾಗಿ ಈ ಮಹತ್ಕಾರ್ಯ ಸಾಕಾರಗೊಳ್ಳುತ್ತಿದೆ.

-ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು