ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕದಲ್ಲಿ ದಿನ ಕಳೆದ ಯಡಿಯೂರಪ್ಪ

Last Updated 25 ಜುಲೈ 2019, 19:28 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ರಚನೆ ಸಂಬಂಧ ಪಕ್ಷದ ವರಿಷ್ಠರಿಂದ ಯಾವುದೇ ಸೂಚನೆ ಗುರುವಾರ ಸಂಜೆವರೆಗೆ ಬಾರದ ಕಾರಣ, ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೂ ಆಗಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಇಡೀ ದಿನ ಆತಂಕದಿಂದ ಕಳೆದರು.

ಸರ್ಕಾರ ಪತನವಾದ ಬಳಿಕ ಅಭಿಮಾನಿಗಳು, ಹಿತೈಷಿಗಳು, ಬಂಧು ವರ್ಗದವರು ಯಡಿಯೂರಪ್ಪ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಶುಭಾಶಯಗಳನ್ನು ಕೋರಿದರು.

ಬುಧವಾರ ಸಂಜೆಯವರೆಗೆ ಸರ್ಕಾರ ರಚನೆ ಸಂಬಂಧ ಯಾವುದೇ ಮಾಹಿತಿ ಬಾರದ ಕಾರಣ, ಯಡಿಯೂರಪ್ಪ ಅವರು, ಜಗದೀಶ್ ಶೆಟ್ಟರ್‌ ನೇತೃತ್ವದಲ್ಲಿ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಲು ನಿಯೋಗವನ್ನು ಕಳಿಸಿದರು.

ಆದರೆ ಗುರುವಾರ ಬೆಳಿಗ್ಗೆ ಶಾ ಅವರ ಜತೆಗೆ ಹೆಚ್ಚಿನ ಮಾತುಕತೆ ನಡೆಸಲು ಸಾಧ್ಯವಾಗಲಿಲ್ಲ. ಸಂಜೆ ಚರ್ಚೆ ನಡೆಸುವುದಾಗಿ ಹೇಳಿದ್ದರಿಂದ ಯಡಿಯೂರಪ್ಪ ಅವರು ಮಂಕಾಗಿದ್ದರು. ಗುರುವಾರವೂ ಅವರ ನಿವಾಸ ಧವಳಗಿರಿಗೆ ಅಲ್ಪಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಭೇಟಿ ಮಾಡಿದರು.

ಜಗದೀಶ ಶೆಟ್ಟರ್‌, ಮಾಧುಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ದೆಹಲಿಯಿಂದ ಮಾಹಿತಿಗಳನ್ನು ಪಡೆಯುತ್ತಿದ್ದ ಯಡಿಯೂರಪ್ಪ ಮನೆಯಿಂದ ಹೊರಗೆ ಬರಲಿಲ್ಲ.

ಬುಧವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರನ್ನು ಭೇಟಿ ಮಾಡಿದ ಯಡಿಯೂರಪ್ಪ ಅವರು, ಈ ಬಾರಿ ಮುಖ್ಯಮಂತ್ರಿ ಆಗಲು ಅವಕಾಶ ನೀಡಬೇಕು, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂಬುದಾಗಿ ಮನವಿ ಮಾಡಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT