ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರೊಂದಿಗೆ ಸಂಸದರ ವಾಗ್ವಾದ, ತಳ್ಳಾಟ

ನಗರ ಪೊಲೀಸ್ ಠಾಣೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
Last Updated 29 ಮೇ 2018, 13:34 IST
ಅಕ್ಷರ ಗಾತ್ರ

ಕೊಪ್ಪಳ: ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆ ಸೋಮವಾರ ಪೊಲೀಸರೊಂದಿಗೆ ವಾಗ್ವಾದ, ತಳ್ಳಾಟಕ್ಕೆ ಕಾರಣವಾಯಿತು.

ಗಡಿಯಾರ ಕಂಬದಿಂದ ಮೆರವಣಿಗೆ ಹೊರಟಿದ್ದ ಮುಖಂಡರನ್ನು ತಡೆದ ಪೊಲೀಸರು, ರ‍್ಯಾಲಿಗೆ ಅನುಮತಿ ಪಡೆದಿಲ್ಲ ಎಂದು ಆಕ್ಷೇಪಿಸಿ ಮೆರವಣಿಗೆಗೆ ತಡೆಯೊಡ್ಡಿದರು.

ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಅಲ್ಲಿ ಸಂಸದ ಸಂಗಣ್ಣ ಕರಡಿ ಅವರನ್ನು ಪೊಲೀಸರು ಹೊರಗೆ ತಳ್ಳಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.

ಕುಪಿತಗೊಂಡ ಸಂಸದ ಸಂಗಣ್ಣ ಕರಡಿ ಡಿವೈಎಸ್‌ಪಿ ಎಸ್‌.ಎಂ.ಸಂದಿಗವಾಡ ಅವರನ್ನು ಹಿಡಿದುಕೊಂಡು  ಎಳೆದಾಡಿದರು. ಸ್ಥಳೀಯ ಶಾಸಕರ ನಿರ್ದೇಶನದಂತೆ ಪೊಲೀಸ್ ಸಿಬ್ಬಂದಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಸುಮಾರು ಅರ್ಧ ಗಂಟೆಗಳ ಕಾಲ ವಾಗ್ವಾದ ನಡೆಯಿತು. ಇದೇ ರೀತಿ ಪ್ರತಿಭಟನೆ ನಡೆಸಿದರೆ, ದೂರು ದಾಖಲಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದರು.

ನಂತರ ಠಾಣೆಯ ಆವರಣದಲ್ಲಿ ಪ್ರತಿಭಟನೆಗೆ ಕುಳಿತರು. ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಪೊಲೀಸರು ಗದ್ದಲವನ್ನು ನಿಯಂತ್ರಣಕ್ಕೆ ತಂದರು. ಅಲ್ಲದೆ ಧ್ವನಿವರ್ಧಕ ಮತ್ತು ಅಟೊವನ್ನು ಮರಳಿ ನೀಡಿದ್ದರಿಂದ ಜೈಕಾರ ಕೂಗೂತ್ತಾ ಠಾಣೆಯಿಂದ ಕಾರ್ಯಕರ್ತರು ಹೊರ ನಡೆದರು. ನಂತರ ರ‍್ಯಾಲಿ ಮುಂದುವರಿಸಿದರು.

'ನಮ್ಮ ಹೋರಾಟವನ್ನು ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಂಡ ಸರ್ಕಾರ ರೈತರ ಬೇಡಿಕೆ ಈಡೇರಿಸಲು ಮೀನಮೇಷ ಎಣಿಸುತ್ತಿದೆ. ಶಾಂತಿಯುತ ಹೋರಾಟ ತಡೆಯಲು ಯತ್ನಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ಪೊಲೀಸರ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT