4

ಸರ್ಕಾರ ಟೇಕಾಫ್ ಆಗಿಲ್ಲ: ಯಡಿಯೂರಪ್ಪ

Published:
Updated:

ಬೆಂಗಳೂರು: ರಾಜ್ಯ ಸರ್ಕಾರ ಟೇಕಾಫ್‌ ಆಗಿಲ್ಲ ಎಂಬುದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದರು.

‘ಯಾವುದೇ ಸರ್ಕಾರದ ಮುಂದಿನ ನಡೆಗೆ ರಾಜ್ಯಪಾಲರ ಭಾಷಣ ದಿಕ್ಸೂಚಿಯಾಗಿರುತ್ತದೆ. ಆದರೆ, ಇದರಲ್ಲಿ ದಿಕ್ಸೂಚಿಯೇ ಇಲ್ಲ. ಇದೊಂದು ಸುಳ್ಳು ಭರವಸೆಗಳ ಕಂತೆ’ ಎಂದು ಕಿಡಿಕಾರಿದರು.

‘ಕೇಂದ್ರ ಸರ್ಕಾರದ ಯೋಜನೆಗಳನ್ನು ತನ್ನದೇ ಯೋಜನೆ ಎಂದು ರಾಜ್ಯ ಸರ್ಕಾರ ಪ್ರಕಟಿಸಿದೆ. ಹಿಂದಿನ ಸರ್ಕಾರದ ಯಾವುದೇ ಯೋಜನೆಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ಮೈತ್ರಿ ಪಕ್ಷಗಳ ನಡುವೆ ಸಮನ್ವಯ ಇಲ್ಲ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ’ ಎಂದು ಅವರು ಪ್ರಶ್ನಿಸಿದರು.

‘ರಾಜ್ಯದಲ್ಲಿ ರೈತರ ಆತ್ಮಹತ್ಯೆ ದಿನೇದಿನೇ ಹೆಚ್ಚುತ್ತಿದೆ. ಆದರೆ, ರೈತರ ಸಾಲ ಮನ್ನಾದ ಬಗ್ಗೆ ಉಲ್ಲೇಖ ಇಲ್ಲ. ನೀರಾವರಿ ಯೋಜನೆಗಳ ಬಗ್ಗೆಯೂ ಚಕಾರ ಇಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಆ ಬಗ್ಗೆಯೂ ಮಾತನಾಡಿಲ್ಲ’ ಎಂದರು.

ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ ಎಂದು ಬಿಜೆಪಿಯ ಹಿರಿಯ ಸದಸ್ಯ ಜಗದೀಶ ಶೆಟ್ಟರ್‌ ಹೇಳಿದರು.

‘ಮಹದಾಯಿ ವಿವಾದದ ಬಗ್ಗೆ ಮೈತ್ರಿ ಸರ್ಕಾರದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕಿತ್ತು. ಆ ಬಗ್ಗೆ ಮಾತನಾಡಿಲ್ಲ’ ಎಂದರು.

‘ರೈತರ ಹಿತ ರಕ್ಷಣೆಗೆ ಆದ್ಯತೆ ನೀಡಬೇಕಿತ್ತು. ಈ ಕೆಲಸ ಆಗಿಲ್ಲ. ಇದೇ ಧೋರಣೆ ಮುಂದುವರಿಸಿದರೆ ಪಕ್ಷದಿಂದ ಹೋರಾಟ ನಡೆಸಲಾಗುತ್ತದೆ’ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.

‘ಸರ್ಕಾರ ಟೇಕಾಫ್‌ ಆಗಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಮೊದಲು ಅವರು ಟೇಕಾಫ್‌ ಆಗಲಿ. ಉಳಿದದ್ದು ಮತ್ತೆ ನೋಡೋಣ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದರು.

‘ರಾಜ್ಯದ ಜನರಿಗೆ ನೀಡಿರುವ ವಾಗ್ದಾನ ಈಡೇರಿಸಲು ಬದ್ಧರಾಗಿದ್ದೇವೆ. ಎಲ್ಲ ಸಚಿವರು ಜಿಲ್ಲಾ ಪ್ರವಾಸ ಮಾಡಿದ್ದಾರೆ. ನಮ್ಮ ಎಲ್ಲ ಯೋಜನೆಗಳ ಬಗ್ಗೆ ಬಜೆಟ್‌ನಲ್ಲಿ ಪ್ರಕಟಿಸುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !