ಶನಿವಾರ, ಜನವರಿ 18, 2020
25 °C

‘ಅರ್ಹ’ರಿಗಷ್ಟೇ ಮಂತ್ರಿಗಿರಿ : ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದವರಿಗಷ್ಟೇ ಸಚಿವ ಸ್ಥಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ನೀಡಿರುವ ಹೇಳಿಕೆ, ಬಿಜೆಪಿಯಲ್ಲಿ ಆಂತರಿಕ ಗೊಂದಲಕ್ಕೆ ಕಾರಣವಾಗಿದೆ.

ಚುನಾವಣೆಗೆ ಮುನ್ನ ಯಡಿಯೂರಪ್ಪ ಎಲ್ಲ 17 (ಅನರ್ಹ) ಶಾಸಕರಿಗೂ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ಸೋತಿರುವ ಎಂ.ಟಿ.ಬಿ.ನಾಗರಾಜ್‌ ಮತ್ತು ಎಚ್‌.ವಿಶ್ವನಾಥ್‌ ಅವರಿಗೂ ಸಚಿವ ಸ್ಥಾನ ನೀಡಬೇಕೆಂದು ಈಗ ‘ಅರ್ಹ’ಗೊಂಡಿರುವ ಶಾಸಕರು ಪಟ್ಟು ಬಿಗಿಗೊಳಿಸಿದ್ದು, ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧರಾಗಿರಬೇಕು ಎಂಬ ಬೇಡಿಕೆ ಮಂಡಿಸಿದ್ದಾರೆ.

‘ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಒತ್ತಡವಿಲ್ಲ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲರೂ ಸಚಿವರಾಗುತ್ತಾರೆ. ಜತೆಗೆ ಒಂದಿ ಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂಬ ಚಿಂತನೆಯೂ ಇದೆ. ಈ ಬಗ್ಗೆ ಹೈಕ ಮಾಂಡ್‌ ಜತೆ ಚರ್ಚೆ ನಡೆಸಿ, ಸಚಿವರ ಪಟ್ಟಿ ಅಂತಿಮ ಮಾಡುತ್ತೇವೆ. ಮಾಧ್ಯಮಗಳಲ್ಲಿ ಬರುವ ಊಹಾಪೋಹದ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಅವರು ಹೇಳಿದರು.

ಬಿಜೆಪಿ ಮೂಲಗಳ ಪ್ರಕಾರ, ಸಂಪುಟ ವಿಸ್ತರಣೆ ಸಂಕ್ರಾಂತಿ ಬಳಿಕ ಆಗಬಹುದು ಎಂದು ಹೇಳಿವೆ.

ತಿಂಗಳ ಕೊನೆಗೆ ಸಂಪುಟ ವಿಸ್ತರಣೆ

ಇದೇ ತಿಂಗಳ 21 ಅಥವಾ 22 ರಂದು ದೆಹಲಿಗೆ ಹೋಗಲಿದ್ದು, ಅಲ್ಲಿ ವರಿಷ್ಠರ ಜತೆ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮಾತುಕತೆ ನಡೆಸುತ್ತೇನೆ. ಅವರ ಅಭಿಪ್ರಾಯ ಪಡೆದು ಡಿಸೆಂಬರ್‌ ತಿಂಗಳ ಕೊನೆಯಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಿಳಿಸಿದರು.

***

ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಈ ಸಂಬಂಧ ಅವರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ
-ನಳಿನ್‌ ಕುಮಾರ್‌ ಕಟೀಲ್‌ ಅಧ್ಯಕ್ಷ, ರಾಜ್ಯ ಬಿಜೆಪಿ ಘಟಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು