ಮಂಗಳವಾರ, ನವೆಂಬರ್ 19, 2019
28 °C

ಸುಳ್ಳು ಸಾಕ್ಷ್ಯ: ನಳಿನ್ ಕುಮಾರ್ ಕಟೀಲ್‌ ಟೀಕೆ

Published:
Updated:
Prajavani

ಬೆಂಗಳೂರು: ಅನರ್ಹ ಶಾಸಕರ ಕುರಿತಂತೆ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರ ಆಡಿಯೊವನ್ನು ಸಾಕ್ಷ್ಯ ಎಂಬುದಾಗಿ ಮಾಡಿಕೊಂಡು ಸರ್ಕಾರದ ವಜಾಕ್ಕೆ ಒತ್ತಾಯ ಮಾಡಿರುವ ಕಾಂಗ್ರೆಸ್‌ ವರ್ತನೆಯನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಟೀಕಿಸಿದ್ದಾರೆ.

‘ಅನರ್ಹ ಶಾಸಕರ ವಿಚಾರ ಸುಪ್ರೀಂ ಕೋರ್ಟ್‌ನ ಮುಂದೆ ಇದೆ. ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವ ತಂತ್ರವಾಗಿದೆ. ಕಾಂಗ್ರೆಸ್‌ ಈ ಮೂಲಕ ಗೊಂದಲ ಸೃಷ್ಟಿಸುತ್ತಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಇಂತಹ ಸುಳ್ಳು ಹೇಳಿಕೆಗಳು ಕಾಂಗ್ರೆಸ್ ನಾಯಕರುಗಳ ಬೌದ್ಧಿಕ  ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ಅವರ ಈ ಹಿಂದಿನ ಚಾಳಿಯನ್ನು ಮುಂದುವರಿಸಿದ್ದಾರೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ದೂರು ಹಾಸ್ಯಾಸ್ಪದ: ನಕಲಿ ಧ್ವನಿಸುರುಳಿ ಸೃಷ್ಟಿಸಿ, ಜನತೆಯಲ್ಲಿ ಗೊಂದಲ ಮೂಡಿಸುವುದು ಕಾಂಗ್ರೆಸ್‌ಗೆ ಕರಗತವಾಗಿದ್ದು, ಸರ್ಕಾರ ವಜಾಗೊಳಿಸಬೇಕು ಎಂದು ಒತ್ತಾಯಿಸುವುದು ಹಾಸ್ಯಾಸ್ಪದ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)