ಶನಿವಾರ, ನವೆಂಬರ್ 23, 2019
18 °C

ಅಂತರಾಳದ ವಾಸ್ತವ ವೈರಲ್ ಆಗಬಾರದಿತ್ತು: ಸಚಿವ ವಿ.ಸೋಮಣ್ಣ

Published:
Updated:

ಮೈಸೂರು: ‘ಬಿಜೆಪಿಯ ಆಂತರಿಕ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೊಂಡ ಅಂತರಾಳದ ನೋವಿನ ಮಾತುಗಳು, ಆಡಿಯೊ ಸ್ವರೂಪದಲ್ಲಿ ವೈರಲ್ ಆಗಿದ್ದು ದುರಾದೃಷ್ಟ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ ಇಲ್ಲಿ ತಿಳಿಸಿದರು.

‘ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕರು. ಇದರಲ್ಲಿ ಎರಡು ಮಾತಿಲ್ಲ. ಶಿಸ್ತಿನ ಪಕ್ಷದ ಸಭೆಯ ಆಡಿಯೊ ವೈರಲ್ ಆಗಿರುವ ಬಗ್ಗೆ ವರಿಷ್ಠರು ಸೂಕ್ತ ಕ್ರಮ ಜರುಗಿಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ರಾಜೀನಾಮೆ ಸಲ್ಲಿಸಿದ ಶಾಸಕರು ಅನರ್ಹರಲ್ಲ. ಕಾಂಗ್ರೆಸ್‌, ಜೆಡಿಎಸ್‌ನೊಳಗಿನ ಕೆಟ್ಟ ವಾತಾವರಣದಿಂದ ಮನನೊಂದು ರಾಜೀನಾಮೆ ನೀಡಿದವರು. ಇವರಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೊಂಡಿದೆ. ಇವರಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಹಿರಿಯ ಶಾಸಕ ಉಮೇಶ ಕತ್ತಿ ಸೇರಿದಂತೆ ಇನ್ನಿತರರು ನೀಡುವ ಯಾವೊಂದು ಹೇಳಿಕೆಗೆ ಮನ್ನಣೆ ನೀಡುವ ಅಗತ್ಯವಿಲ್ಲ. ಅವೆಲ್ಲವೂ ಗೌಣ. ಯಡಿಯೂರಪ್ಪ, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ’ ಎಂದು ಸೋಮಣ್ಣ ಹೇಳಿದರು.

‘ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆಗಳು ಕೈಲಾಗದವರು ಮೈಪರಚಿಕೊಂಡರು ಎಂಬಂತಾಗಿವೆ. ಅವರ ಆಡಳಿತ ಬರಗಾಲದ್ದು. ನಮ್ಮದು ಸುಭಿಕ್ಷೆ. 100 ದಿನದಲ್ಲಿ ಅವರೇನು ಮಾಡಿದ್ದರು ? ಒಂದೆರೆಡು ತಿಂಗಳಲ್ಲಿ ಸರ್ಕಾರ ಜನ ಮೆಚ್ಚುಗೆ ಪಡೆಯಲಿದೆ. ಕಾಂಗ್ರೆಸ್‌ನವರನ್ನು ಮೆಚ್ಚಿಸಲಿಕ್ಕಾಗಿಯೇ ಟೀಕೆ ಮಾಡೋದನ್ನು ಇನ್ನಾದರೂ ಬಿಡಲಿ’ ಎಂದು ತಿರುಗೇಟು ನೀಡಿದರು.

‘ನೆರೆ ಪೀಡಿತ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಭಾನುವಾರದಿಂದ (ನ.3) ಪ್ರವಾಸ ಕೈಗೊಳ್ಳುವೆ. ಸಂತ್ರಸ್ತರಿಗೆ ಸೂರು ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಈ ಪ್ರವಾಸ ಹಮ್ಮಿಕೊಂಡಿರುವೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)