ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಕಟ್ಟಿಹಾಕಲು ವರಿಷ್ಠರ ತಂತ್ರ

ಆಡಳಿತದಲ್ಲಿ ಕುಟುಂಬದ ಸದಸ್ಯರಿಗೆ ಪ್ರವೇಶ ನೀಡಬಾರದೆಂಬ ಕಟ್ಟುನಿಟ್ಟಿನ ಸೂಚನೆ ನೀಡಲು ತೀರ್ಮಾನ
Last Updated 1 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಕಟ್ಟಿ ಹಾಕಲು ಬಿಜೆಪಿ ವರಿಷ್ಠರು ನಾನಾ ತಂತ್ರಗಳನ್ನು ಹೆಣೆಯಲು ಆರಂಭಿಸಿದ್ದಾರೆ.

‘ಯಡಿಯೂರಪ್ಪ ಸರ್ಕಾರದ ಕೆಲಸಗಳಿಗಷ್ಟೇ ಸೀಮಿತರಾಗಬೇಕು. ಪಕ್ಷದ ವಿದ್ಯಮಾನಗಳಲ್ಲಿ ತಲೆ ತೂರಿಸಬಾರದು ಮತ್ತು ಆಡಳಿತದಲ್ಲಿ ಕುಟುಂಬದ ಸದಸ್ಯರಿಗೆ ಪ್ರವೇಶ ನೀಡಬಾರದು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲು ತೀರ್ಮಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಸರ್ಕಾರ ರಚನೆ ಆದ ಬಳಿಕ ಪುತ್ರ ವಿಜಯೇಂದ್ರ ಅವರು ಅಧಿಕಾರಿಗಳ ವರ್ಗಾವಣೆಯಲ್ಲಿ ಕೈ ಹಾಕಿದ್ದಾರೆ ಎಂಬುದಾಗಿ ಆರೋಪಗಳು ಕೇಳಿ ಬಂದಿದ್ದು, ಇದರಿಂದ ಸರ್ಕಾರ ಮತ್ತು ಪಕ್ಷ ಮುಜುಗರ ಅನುಭವಿಸಬೇಕಾಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರರಾವ್‌ ಅವರಿಗೆ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಯಾವುದೇ ವರ್ಗಾವಣೆ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಚಿವರು, ಶಾಸಕರು ಯಡಿಯೂರಪ್ಪನವರ ಬಳಿ ಕಡತ ತೆಗೆದುಕೊಂಡು ಹೋದರೆ, ‘ವಿಜಯೇಂದ್ರ ಅವರ ಬಳಿ ಹೋಗಿ’ ಎಂದು ಸೂಚಿಸುತ್ತಾರೆ. ಮುಖ್ಯಮಂತ್ರಿ ಮುಂದೆ ನಿಂತು ಪ್ರಶ್ನಿಸುವ ಬದಲಿಗೆ, ವಿಜಯೇಂದ್ರ ಎದುರು ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ನಮ್ಮದಾಗಿದೆ’ ಎಂದು ಶಾಸಕರು ಪಕ್ಷದ ನಾಯಕರ ಬಳಿ ಅಳಲು ತೋಡಿಕೊಂಡಿದ್ದಾರೆ.

ಸಂಧಾನ ಸಭೆ: ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಮಧ್ಯೆ ಅಂತರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಬ್ಬರೂ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಮುರುಳೀಧರ ರಾವ್‌ ಅವರು ಸದ್ಯವೇ ಸಂಧಾನ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಅಮಿತ್‌ ಶಾ ಪಕ್ಷದ ನೇತೃತ್ವದ ವಹಿಸಿದ ಬಳಿಕ ಅಧ್ಯಕ್ಷರು ಹಾಗೂ ವಕ್ತಾರರು ಬಿಟ್ಟು ಯಾರೊಬ್ಬರೂ ಮಾಧ್ಯಮದ ಮುಂದೆ ಮಾತನಾಡಬಾರದು ಎಂದು ಫರ್ಮಾನು ಹೊರಡಿಸಿದ್ದರು. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಸಚಿವರು ತಲೆಗೊಂದು ಹೇಳಿಕೆ ನೀಡುತ್ತಿರುವುದು, ತಮ್ಮ ಸ್ಥಾನದ ಗಾಂಭೀರ್ಯವನ್ನೂ ಮರೆತು ಮನಸ್ಸಿಗೆ ಬಂದಂತೆ ಮಾತನಾಡಲು ಆರಂಭಿಸಿದ್ದಾರೆ.

ಇದಕ್ಕೆ ಕಡಿವಾಣ ಹಾಕಲು ನಡ್ಡಾ ಅವರು ಮುರುಳೀಧರರಾವ್‌ಗೆ ಸೂಚನೆ ನೀಡಿದ್ದಾರೆ. ಈ ಸಂದೇಶ ಹೊತ್ತು ತರಲಿರುವ ರಾವ್‌, ಸಚಿವರು ಬಹಿರಂಗವಾಗಿ ಮಾತನಾಡುವುದನ್ನು ನಿಲ್ಲಿಸಿ ಇಲಾಖೆಗೆ ಸಂಬಂಧಿಸಿದ ಕೆಲಸಗಳತ್ತ ಹೆಚ್ಚಿನ ಗಮನ
ಹರಿಸಿ ಎಂದು ನಿರ್ದೇಶನ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಸರ್ಕಾರ ಮತ್ತು ಪಕ್ಷದಲ್ಲಿ ಅಧಿಕೃತ ವಕ್ತಾರರು ಮಾತ್ರ ಹೇಳಿಕೆಗಳನ್ನು ನೀಡಬೇಕು. ಉಳಿದ ಯಾವುದೇ ಸಚಿವರು ಮತ್ತು ಪಕ್ಷದ ಮುಖಂಡರು ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡಬಾರದೆಂದು ನಡ್ಡಾ ನಿರ್ದೇಶನ ನೀಡಿದ್ದಾರೆ.

ತಮ್ಮ ತಂದೆಯ ಬಗ್ಗೆ ಬರುವ ಟೀಕೆ ಟಿಪ್ಪಣಿಗಳಿಗೆ ವಿಜಯೇಂದ್ರ ಉತ್ತರ ನೀಡುತ್ತಿದ್ದಾರೆ. ಪಕ್ಷದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆ ಬಿಟ್ಟರೆ ಅವರು ಜನಪ್ರತಿನಿಧಿಯಲ್ಲ. ಎಲ್ಲ ಟೀಕೆಗಳಿಗೂ ಅವರು ಉತ್ತರ ನೀಡುವ ಅಗತ್ಯವಿಲ್ಲ. ಸ್ವತಃ ಯಡಿಯೂರಪ್ಪ ಅವರೇ ಅದಕ್ಕೆ ಉತ್ತರ ನೀಡಲು ಸಮರ್ಥರಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಕುಟುಂಬದ ಸದಸ್ಯರು ಸಮರ್ಥನೆಗೆ ನಿಲ್ಲುವ ಅಗತ್ಯವಿಲ್ಲ ಎಂದು ವರಿಷ್ಠರು ಸೂಚಿಸಲಿದ್ದಾರೆ.

‘ವಿರೋಧ ಪಕ್ಷ ಗುರಿ ಮಾಡಿರಬಹುದು’

ಬೆಂಗಳೂರು: ‘ಕೇಂದ್ರದ ನಾಯಕರು ವಿರೋಧ ಪಕ್ಷದವರನ್ನು ಗುರಿ ಮಾಡಿರಬಹುದೇ ಹೊರತು, ಯಡಿಯೂರಪ್ಪ ಅವರನ್ನಲ್ಲ’ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ್‌ ಹೇಳಿದರು.

ಬಸನಗೌಡ ಪಾಟೀಲ ಯತ್ನಾಳ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ‘ದೇಶದ ಬೇರೆ ರಾಜ್ಯಗಳಲ್ಲಿಯೂ ಪ್ರವಾಹ ಪರಿಸ್ಥಿತಿ ಇದೆ. ಎಲ್ಲ ರಾಜ್ಯಕ್ಕೂ ಒಂದೇ ಮಾನದಂಡ ಅನುಸರಿಸಿ, ಪರಿಹಾರ ಬಿಡುಗಡೆ ಮಾಡಲಾಗುತ್ತಿದೆ’ ಎಂದರು.

ಕೇಂದ್ರ ನಾಯಕರಿಂದ ಯಡಿಯೂರಪ್ಪ ಟಾರ್ಗೆಟ್‌

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ಕೇಂದ್ರ ನಾಯಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಯಡಿಯೂರಪ್ಪ ಅವರನ್ನು ಟಾರ್ಗೆಟ್‌ ಮಾಡುವ ಸಲುವಾಗಿ ರಾಜ್ಯಕ್ಕೆ ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆ ಮಾಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪಕ್ಷ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಎಂತಹ ಘಟಾನುಘಟಿ ನಾಯಕರನ್ನೇ ಜನರು ಮನೆಗೆ ಕಳುಹಿಸಿದ್ದಾರೆ ಎಂಬುದನ್ನು ಗಮನಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT