ಶನಿವಾರ, ಜನವರಿ 18, 2020
26 °C
ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಸಿಎಎ ಸಮರ್ಥಿಸಿಕೊಂಡ ಉಪಮುಖ್ಯಮಂತ್ರಿ

1.09 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ಭಾನುವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಥಮ ಪದವಿಯಲ್ಲಿ ಓದುತ್ತಿರುವ ಎಲ್ಲ 1.09 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಲಾಗಿದ್ದು, ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಸಮರ್ಥನೆಗೂ ಇದೇ ವೇದಿಕೆಯನ್ನು ಬಳಸಲಾಯಿತು.

ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಸಿಎಎ, ಕಾಶ್ಮೀರದ ವಿಶೇಷ ಸ್ಥಾನಮಾನ ತೆರವು ವಿಷಯಗಳನ್ನು ಪ್ರಸ್ತಾಪಿಸಿದರು.

‘ಎಲ್ಲರನ್ನೂ ಅಣ್ಣ ತಮ್ಮಂದಿರಂತೆ ಕಾಣುವುದು ಎಷ್ಟು ಮುಖ್ಯವೋ, ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಸಿಎಎ, ಸಂವಿಧಾನದ 370ನೇ ವಿಧಿ ರದ್ದು ಮೊದಲಾದ ವಿಷಯಗಳ ಮೂಲ ಏನು ಮತ್ತು ಪರಿಹಾರ ಏನು ಅನ್ನುವುದನ್ನು ವಿಶ್ಲೇಷಿಸುವುದಕ್ಕೆ ವಿವೇಕಾನಂದರು ನಮಗೆ ತುಂಬಾ ಸಹಾಯಕವಾಗುತ್ತಾರೆ’ ಎಂದು ಹೇಳಿದರು.

‘ಸಂವಿಧಾನದಲ್ಲಿ ಬಹುಸಂಖ್ಯಾತ ರಿಗಿಂತ ಅಲ್ಪಸಂಖ್ಯಾತರಿಗೆ ಹೆಚ್ಚಿನ ಹಕ್ಕುಗಳನ್ನು ನೀಡಿರುವ ದೇಶ ಇದ್ದರೆ ಅದು ಭಾರತ ಮಾತ್ರ. ರಾಜಕೀಯ ಕಾರಣಗಳಿಗಾಗಿ ಇವರ ನಡುವೆ ಅಡೆತಡೆ ತರುವುದು ಖಂಡನೀಯ. ಇಂತಹ ವಿಚಾರಗಳು ಸ್ವಾಮಿ ವಿವೇಕಾನಂದರ ಆದರ್ಶಕ್ಕೆ ವಿರುದ್ಧವಾದುದು’ ಎಂದು ಅಭಿಪ್ರಾಯಪಟ್ಟರು.

ವಿದೇಶಿ ವ್ಯಾಮೋಹ ಬೇಡ: ಯುವಜನತೆ ವಿದೇಶಿ ವ್ಯಾಮೋಹದಿಂದ ಹೊರಬರಬೇಕು, ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋದರೂ ಎರಡು ವರ್ಷದಲ್ಲಿ ಮರಳಿ ದೇಶಕ್ಕೆ ಬಂದು ಇಲ್ಲಿ ಸೇವೆ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಲಹೆ ನೀಡಿದರು. 

ಯುವ ಸಬಲೀಕರಣ ಕೇಂದ್ರ ಉದ್ಘಾಟನೆ: ಮುಖ್ಯಮಂತ್ರಿ ಅವರು ಯುವ ಸಬಲೀಕರಣ ಕೇಂದ್ರಗಳನ್ನು ಸಹ ಉದ್ಘಾಟಿಸಿದರು. ಪ್ರತಿ ಜಿಲ್ಲೆಯಲ್ಲಿ ಒಂದರಂತೆ ಈ ಕೇಂದ್ರ ತಲೆ ಎತ್ತಲಿದ್ದು, ಯುವಜತೆಗೆ ಕೌಶಲ, ಉದ್ಯೋಗ ಮಾಹಿತಿ ಸಹಿತ ಹಲವಾರು ಉಪಯುಕ್ತ ಸೇವೆಗಳನ್ನು ಈ ಕೇಂದ್ರಗಳು ನೀಡಲಿವೆ. ಇದರ ಸೌಲಭ್ಯವನ್ನು ಸರ್ಕಾರಿ ಮಾತ್ರವಲ್ಲ ಇತರ ಎಲ್ಲಾ ಕಾಲೇಜು ವಿದ್ಯಾರ್ಥಿಗಳೂ ಪಡೆಯಬಹುದಾಗಿದೆ. 

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೇದಾ ಕೃಷ್ಣಮೂರ್ತಿ (ಮಹಿಳಾ ಕ್ರಿಕೆಟ್‌), ವಿವೇಕಾನಂದ ಹಲ್ಲೇಕೆರೆ (ಬೌನ್ಸ್‌ ದ್ವಿಚಕ್ರ ವಾಹನ ಸಂಸ್ಥಾಪಕ), ರಾಧಾ ವೆಂಕಟೇಶ್‌ (ಅಂಗವಿಕಲ ಕ್ರೀಡಾಪಟು), ಪ್ರಣವ್‌ ವಿಠಲಪತಿ (ಸಾಫ್ಟ್‌ವೇರ್‌ ಅಭಿವೃದ್ಧಿ), ಅಶ್ವಿನಿ ಕುಮಾರ್ ಭಟ್‌ (ಅಘನಾಶಿನಿ ಸಾಕ್ಷ್ಯಚಿತ್ರ ನಿರ್ಮಾಣ) ಅವರನ್ನು ಗೌರವಿಸಲಾಯಿತು.

ವರ್ಷಕ್ಕೆ 2,500 ಮಂದಿಗೆ ಉಚಿತ ಕೌಶಲ ಅಭಿವೃದ್ಧಿ ತರಬೇತಿ ನೀಡುವ ಸಲುವಾಗಿ ಐಸಿಐಸಿಐ ಪ್ರತಿಷ್ಠಾನದ ಜತೆಗೆ ಹಾಗೂ ಸಿಸ್ಕೊ ಮೆಂಟರ್‌ ಟುಗೆದರ್ ಯೋಜನೆಯಡಿಯಲ್ಲಿ ಸಿಸ್ಕೊ ಸಂಸ್ಥೆಯ ಜತೆಗೆ ಸರ್ಕಾರ ಒಪ್ಪಂದ ಮಾಡಿಕೊಂಡಿತು.

ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ಮಂಗಲನಾಥಾನಂದಜಿ ಮಹಾರಾಜ್‌, ಬೆಂಗಳೂರಿನ ಮೂರೂ ವಿಶ್ವವಿದ್ಯಾಲಯಗಳ ಕುಲಪತಿಗಳಾದ ಪ್ರೊ.ಕೆ.ಆರ್.ವೇಣುಗೋಪಾಲ್‌, ಪ್ರೊ.ಎಸ್‌.ಜಾಫೆಟ್‌, ಪ್ರೊ.ಟಿ.ಡಿ.
ಕೆಂಪರಾಜು, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಖತ್ರಿ, ಆಯುಕ್ತ ಅನಿರುದ್ಧ ಶ್ರವಣ್‌, ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಚ್.ಯು.ತಳವಾರ್ ಇದ್ದರು. 

****

₹ 300 ಕೋಟಿ -ಉಚಿತ ಲ್ಯಾಪ್‌ಟಾಪ್‌ ವಿತರಣೆಗೆ ವೆಚ್ಚ

 ₹ 28 ಸಾವಿರ- ಪ್ರತಿ ಲ್ಯಾಪ್‌ಟಾಪ್‌ನ ದರ

1,09,916-ರಾಜ್ಯದಾದ್ಯಂತ ಲ್ಯಾಪ್‌ಟಾಪ್‌ ಪಡೆಯಲಿರುವ ವಿದ್ಯಾರ್ಥಿಗಳು

45 -ದಿನದೊಳಗೆ ವಿದ್ಯಾರ್ಥಿಗಳ ಕೈಗೆ ಲ್ಯಾಪ್‌ಟಾಪ್‌ 

*****

ಲಿಂಬೆಹಣ್ಣು ಮಾರುತ್ತಿದ್ದ ನಾನು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ

-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ವಯಸ್ಸಿಗೆ ಬಂದ ಕೂಡಲೇ ಮದುವೆಯಾದರೆ ಏನರ್ಥವಿದೆ, ನನ್ನನ್ನೇ ನೋಡಿ, ಸಾಧನೆ ಮಾಡಬೇಕಿರುವುದು ಈ ಹಂತದಲ್ಲೇ

-ವೇದಾ ಕೃಷ್ಣಮೂರ್ತಿ ಭಾರತ ಮಹಿಳಾ ಕ್ರಿಕೆಟ್‌ ತಂಡದ ಸದಸ್ಯೆ

ನಮಗೆ ಮುಂದೆ ಹೇಳಿಕೊಳ್ಳಲು ಕತೆ ಬೇಡವೇ, ಸೋಲು ಉತ್ತಮ ಕತೆಯನ್ನು ಒದಗಿಸುತ್ತದೆ, ಬಾಗಿಲು ಒಂದು ದಿನ ತೆರೆಯುತ್ತದೆ
-ವಿವೇಕಾನಂದ ಹಲ್ಲೇಕೆರೆ ಬೌನ್ಸ್‌ ದ್ವಿಚಕ್ರ ವಾಹನ ವ್ಯವಸ್ಥೆಯ ಸಂಸ್ಥಾಪಕ

ಬಿಎ ಓದುವಾಗ ಮದುವೆಗೆ ಒ‌ತ್ತಾಯಿಸಿದ್ದರು. ಮೊದಲ ಬಾರಿ ಕುಟುಂಬದ ವಿರುದ್ಧದ ನನ್ನ ಛಲ ಗೆದ್ದಿತು, ಐಎಎಸ್‌ ಪಾಸಾದೆ
-ಡಾ.ಜಿ.ಕಲ್ಪನಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಯುವಸಬಲೀಕರಣ ಇಲಾಖೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು