ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಮೇಲೇನು ಪರಿಣಾಮ | ಯಡಿಯೂರಪ್ಪ ಸದ್ಯ ನಿರಾಳ: ಕಾಂಗ್ರೆಸ್‌, ಜೆಡಿಎಸ್‌ಗೆ ಬಲ

Last Updated 25 ಅಕ್ಟೋಬರ್ 2019, 1:58 IST
ಅಕ್ಷರ ಗಾತ್ರ

‘ಮೈತ್ರಿ’ ಸರ್ಕಾರ ರಚಿಸಿ ಲೋಕಸಭೆ ಚುನಾವಣೆಯಲ್ಲಿ ಕೈಸುಟ್ಟುಕೊಂಡಿದ್ದ ಕಾಂಗ್ರೆಸ್‌–ಜೆಡಿಎಸ್‌ ದಳಪತಿಗಳಿಗೆ ಎರಡು ರಾಜ್ಯಗಳ ಫಲಿತಾಂಶ ಉಮೇದು ತಂದಿದ್ದರೆ, ಯಾವಾಗ ಪದತ್ಯಾಗ ಮಾಡಬೇಕಾಗುತ್ತದೋ ಎಂಬ ತೂಗುಯ್ಯಾಲೆಯಲ್ಲೇ ದಿನದೂಡುತ್ತಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಅಲ್ಪಕಾಲದ ನಿರಾಳತೆಯನ್ನೂ ಕೊಟ್ಟಿದೆ.

ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ–ಅಮಿತ್ ಶಾ ಜೋಡಿಗೆ ಸಿಕ್ಕಿದ ಮಹಾವಿಜಯದಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಿತ್ತು. 17 ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ಮೈತ್ರಿ ಸರ್ಕಾರ ಪತನಗೊಂಡಿತ್ತು. ಇದರಿಂದ ಕಾಂಗ್ರೆಸ್‌–ಜೆಡಿಎಸ್‌ ನಾಯಕರ ಜಂಘಾಬಲವೇ ಉಡುಗಿಹೋಗಿತ್ತು.

ಆದರೆ, ಮಹಾರಾಷ್ಟ್ರ ಮತ್ತು ಹರಿಯಾಣದ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಹೊಸ ಶಕೆ ಆರಂಭಿಸಲು ಮುಂದಡಿಯಿಡುವ ಪ್ರೇರಣೆಯನ್ನು ಕಾಂಗ್ರೆಸ್–ಜೆಡಿಎಸ್‌ ನಾಯಕರಿಗೆ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ಮತದಾರರ ತರ್ಕ ಬೇರೆ; ರಾಜ್ಯ ರಾಜಕಾರಣದ ಮತ ಲೆಕ್ಕಾಚಾರವೇ ವಿಭಿನ್ನ ಎಂಬುದನ್ನು ಈ ಫಲಿತಾಂಶ ತೋರಿಸಿಕೊಟ್ಟಿದೆ. ಇಡೀ ದೇಶವನ್ನು ‘ಸಮ್ಮೋಹನ’ಗೊಳಿಸಿದ ‘ಮೋದಿ ಶಕ್ತಿ’ ವಿಧಾನಸಭೆ ಚುನಾವಣೆಯಲ್ಲಿ ಪರಿಣಾಮ ಬೀರದು ಎಂಬ ಸಂದೇಶವನ್ನು ಇದು ಸಾರಿದೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಿಜೆಪಿಯ ಚಿನ್ನದ ತಟ್ಟೆಯಲ್ಲಿರುವ ಮೃಷ್ಟಾನ್ನವಲ್ಲ. ಭಿನ್ನಭೇದವ ಮರೆತು ದುಡಿದರೆ ವಿರೋಧ ಪಕ್ಷಗಳ ಪಾಲಿಗೆ ಪರಮಾನ್ನವೂ ಆದೀತು ಎಂಬ ವಿಶ್ಲೇಷಣೆಗೂ ಕಾರಣವಾಗಿದೆ. ಕಾಂಗ್ರೆಸ್‌–ಜೆಡಿಎಸ್‌ ನಾಯಕರು ಮೈ ಕೊಡವಿ ನಿಂತು, ಪಕ್ಷಕ್ಕೆ ಕೈಕೊಟ್ಟು ಹೋದವರಿಗೆ ಪಾಠ ಕಲಿಸುವ ಕಸುವು ಒದಗಿಸಲಿದೆ. ಏಕೆಂದರೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಹಾಗೂ ಗುಜರಾತ್‌ನಲ್ಲಿ ಬಿಜೆಪಿ ಸೇರಿದ್ದ ಆರು ಜನರಲ್ಲಿ ಮೂವರು ಸೋಲು ಕಂಡಿದ್ದಾರೆ. ಇಂತಹದೇ ಫಲಿತಾಂಶ ನಮಗೂ ಸಿಗಲಿದೆ ಎಂಬ ವಿಶ್ವಾಸ ವಿರೋಧ ಪಕ್ಷದವರಲ್ಲಿ ಮೂಡಿದೆ.

ಎರಡು ರಾಜ್ಯಗಳಲ್ಲಿ ಭರ್ಜರಿ ವಿಜಯ ಸಿಕ್ಕರೆ ಯಡಿಯೂರಪ್ಪನವರನ್ನು ಪದಚ್ಯುತಿಗೊಳಿಸಬಹುದು ಎಂಬ ಮಾತು ಬಿಜೆಪಿಯಲ್ಲೇ ಹರಿದಾಡುತ್ತಿತ್ತು. ಆದರೆ, ಆ ರಾಜ್ಯಗಳಲ್ಲಿ ಸ್ಥಳೀಯ ನಾಯಕತ್ವ ಹಾಗೂ ಜಾತಿ ಆಧರಿಸಿ ಮತದಾನ ಆಗಿರುವುದರಿಂದ ಯಡಿಯೂರಪ್ಪನವರನ್ನು ಮುಟ್ಟಲು ಪಕ್ಷದ ವರಿಷ್ಠರು ಹೋಗಲಾರರು ಎಂಬ ಚರ್ಚೆಗೂ ಈ ಫಲಿತಾಂಶ ಕಾರಣವಾಗಿದೆ.

ಅನರ್ಹ ಶಾಸಕರಿಗೆ ದಿಗಿಲು

‘ಕಮಲ’ ಮುಡಿಯಲು ಮುಂದಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹರಾಗಿರುವವರಿಗೆ ಫಲಿತಾಂಶ ದಿಗಿಲು ಹುಟ್ಟಿಸಿದೆ.

17ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಡಿಸೆಂಬರ್ 5ಕ್ಕೆ ಉಪಚುನಾವಣೆ ನಿಗದಿಯಾಗಿದೆ. ಅನರ್ಹತೆ ಕುರಿತು ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಇನ್ನೂ ಮುಕ್ತಾಯದ ಹಂತಕ್ಕೆ ಬಂದಿಲ್ಲ; ಬರುವ ಲಕ್ಷಣವೂ ಕಾಣಿಸುತ್ತಿಲ್ಲ. ಬಾಡೂಟ, ಸೀರೆ ಹಂಚಿಕೆ ಮಾಡಿ ಮತದಾರರ ಓಲೈಸುತ್ತಿರುವ ಅನರ್ಹರು ಇನ್ನಷ್ಟು ಶಕ್ತಿ ವ್ಯಯಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT