ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಟಿ ಪಟ್ಟಿಗೆ ಸೇರ್ಪಡೆ: ಮೀನುಗಾರ ಸಮುದಾಯಕ್ಕೆ ಸಿಎಂ ಯಡಿಯೂರಪ್ಪ ಭರವಸೆ

Last Updated 14 ಡಿಸೆಂಬರ್ 2019, 21:44 IST
ಅಕ್ಷರ ಗಾತ್ರ

ಬೆಂಗಳೂರು:ಮೀನುಗಾರ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್‌ಟಿ) ಪಟ್ಟಿಗೆ ಸೇರಿಸುವ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.

ರಾಷ್ಟ್ರೀಯ ಮೀನುಗಾರರ ಸಂಘ ಶನಿವಾರ ಆಯೋಜಿಸಿದ್ದ ‘ರಾಷ್ಟ್ರೀಯ ಮೀನುಗಾರರ ಸ್ವಾಭಿಮಾನಿ ವಿಕಾಸ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಮೀನುಗಾರಿಕೆಯಲ್ಲಿ ರಾಜ್ಯ 9ನೇ ಸ್ಥಾನದಲ್ಲಿದೆ. ಆದರೆ, ಮೀನುಗಾರರು ಬಡತನದಲ್ಲೇ ಇದ್ದಾರೆ. ಎಸ್‌ಟಿ ಪಟ್ಟಿಗೆ ಸೇರಿಸುವ ಸಂಬಂಧ ಈ ಹಿಂದೆಯೇ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ’ ಎಂದು ತಿಳಿಸಿದರು.

‘ಮೀನುಗಾರರ ಹಿತ ಕಾಪಾಡಲು ಸರ್ಕಾರ ಸದಾ ಬದ್ಧವಾಗಿದೆ. ಅಧಿಕಾರಕ್ಕೆ ಬಂದ ಕೂಡಲೇ ಮೀನುಗಾರರ ಸಾಲ ಮನ್ನಾ ಮಾಡಿದ್ದೇವೆ’ ಎಂದು ಅವರು ಹೇಳಿದರು.

ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣರಾವ್ ಮಾತನಾಡಿ, ‘ಅಂಬಿಗರ ಸಮುದಾಯ ಯಾರಿಗೂ ಕೈಕೊಟ್ಟಿಲ್ಲ. ನೀವು ಮುಖ್ಯಮಂತ್ರಿ ಆಗಬೇಕೆಂದೇ ಉತ್ತಮ ಫಲಿತಾಂಶ ಕೊಟ್ಟಿದ್ದಾರೆ. ನಂಬಿದವರನ್ನು ಯಡಿಯೂರಪ್ಪ ಕೈಬಿಡಲ್ಲ ಎಂಬ ಮಾತಿದೆ. ಈಗ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ನಿಮ್ಮದೇ ಸರ್ಕಾರವಿದ್ದು, ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಿ’ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಇಬ್ಬರಿಗೆ ಸಚಿವ ಸ್ಥಾನ ನೀಡಿ
‘ನಮ್ಮ ಸಮುದಾಯದ ಶಾಸಕ ಲಾಲಾಜಿ ಆರ್‌. ಮೆಂಡನ್ ಮತ್ತು ವಿಧಾನ ಪರಿಷತ್ತಿನ ಸದಸ್ಯ ಎನ್. ರವಿಕುಮಾರ್ ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಸಂಘ ಮನವಿ ಮಾಡಿತು.

ಯಡಿಯೂರಪ್ಪ ಅವರಿಗೆ ಮನವಿ ಪತ್ರ ನೀಡಿ, ‘ಕೆರೆ, ಸರೋವರ, ಅಣೆಕಟ್ಟುಗಳಲ್ಲಿ ಮೀನು ಹಿಡಿಯುವ ಹಕ್ಕನ್ನು ಶೇ 90ರಷ್ಟು ಮೀನುಗಾರರಿಗೇ ನೀಡಬೇಕು ಎಂಬ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಸಮರ್ಥ ವಕೀಲರನ್ನು ನೇಮಿಸಿ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿತು.

‘ಕೂಡಲ ಸಂಗಮದ ಮಾದರಿಯಲ್ಲಿ ಅಂಬಿಗರ ಚೌಡಯ್ಯ ಗುರುಪೀಠ ಮತ್ತು ಗದ್ದುಗೆ ಅಭಿವೃದ್ಧಿ ಮಾಡಬೇಕು. ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಅನುದಾನ ಮೀಸಲಿಡಬೇಕು. ಗಂಗಾಪರಮೇಶ್ವರಿ ದೇವಾಲಯ ಜೀರ್ಣೋದ್ಧಾರ ಮತ್ತು ಸಂಘದ ವಿದ್ಯಾರ್ಥಿ ನಿಲಯ ಅಭಿವೃದ್ಧಿಗೆ ₹25 ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಕೋರಿತು.

ವಿಧಾನ ಪರಿಷತ್ತಿನ ಸದಸ್ಯ ಎನ್. ರವಿಕುಮಾರ್, ನಟಿ ಭಾವನಾ, ಮೀನುಗಾರರ ಸಂಘದ ಮುಖಂಡ ಡಾ.ಎಂ.ಪಿ. ಪೂರ್ಣಾನಂದ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT