ಬುಧವಾರ, ಜನವರಿ 29, 2020
27 °C

ನೆರೆ ಪರಿಹಾರ ಕೊಡಿ ಎಂದ ಬಿಎಸ್‌ವೈ: ವಿಷಯವನ್ನೇ ಪ್ರಸ್ತಾಪಿಸದ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕರ್ನಾಟಕ ನೆರೆಯಿಂದ ತತ್ತರಿಸಿದೆ. ₹30 ಸಾವಿರ ಕೋಟಿಗೂ ಮಿಗಿಲಾದ ನಷ್ಟವಾಗಿದೆ. ಆದರೆ ಸೂಕ್ತ ಪರಿಹಾರ ಬಂದಿಲ್ಲ. ಕೇಂದ್ರ ಸರ್ಕಾರ ಹೆಚ್ಚಿನ ಪರಿಹಾರ ಒದಗಿಸಬೇಕು,’ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ತುಮಕೂರಿನ ರೈತ ಸಮಾವೇಶದಲ್ಲಿ ಮೋದಿ ಸಮ್ಮುಖದಲ್ಲೇ ಒತ್ತಾಯಿಸಿದರು. 

ಗುರುವಾರ ತಮಕೂರಿನ ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ನಮಿಸಿ ನೇರವಾಗಿ ರೈತ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ಮೋದಿ ಎಂಟು ಮಂದಿ ರೈತರಿಗೆ ‘ಕೃಷಿ ಕರ್ಮಣ ಪ್ರಶಸ್ತಿ,’ ಪ್ರದಾನ ಮಾಡಿದರು. ನಂತರ ಪ್ರಸ್ತಾವಿಕವಾಗಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ನೆರೆ ಪರಿಹಾರಕ್ಕಾಗಿ ಒತ್ತಾಯಿಸಿದರು. 

‘ಆಹಾರ ಉತ್ಪಾದನೆ ದ್ವಿಗುಣಗೊಳಿಸಲು ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದಾರೆ. ರೈತರಿಗೆ ಪ್ರೋತ್ಸಾಹ ಧನ, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅದನ್ನು ಸಾಧಿಸಬೇಕು. ರಾಜ್ಯದ ನೀರಾವರಿಗೆ 50 ಸಾವಿರ ಕೋಟಿ ಅನುದಾನದ ಅಗತ್ಯವಿದೆ. ಅದನ್ನು ಪ್ರಧಾನಿ ಪೂರೈಸಬೇಕು,’ ಎಂದು ಮನವಿ ಮಾಡಿದರು. 

‘ರಾಜ್ಯದಲ್ಲಿ ನೆರೆ ಉಂಟಾಗಿ ಮನೆ, ಕೃಷಿ ಭೂಮಿ, ರಸ್ತೆಗಳೆಲ್ಲವೂ ಹಾಳಾಗಿವೆ. ₹30 ಸಾವಿರ ಕೋಟಿಗಷ್ಟು ನಷ್ಟ ಉಂಟಾಗಿದೆ. ಈ ವಿಚಾರವನ್ನು ಮೋದಿ ಅವರ ಗಮನಕ್ಕೆ ತರಲಾಗಿದೆ. ಹಲವು ಬಾರಿ ನಿಯೋಗ ತೆರಳಿ ನೆರೆ ಪರಿಹಾರ ಕೋರಲಾಗಿದೆ. ಆದರೆ, ಸಿಕ್ಕ ಪರಿಹಾರ ಕಡಿಮೆ. ಹೆಚ್ಚಿನ ಪ್ರಮಾಣದಲ್ಲಿ ನೆರೆ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು,’ ಎಂದು ಬಿಎಸ್‌ವೈ ಆಗ್ರಹಿಸಿದರು. 

ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಅರ್ಧ ಗಂಟೆಗೂ ಹೆಚ್ಚು ಕಾಲ ಭಾಷಣ ಮಾಡಿದರಾದರೂ, ನೆರೆ ಪರಿಹಾರದ ಕುರಿತು ಏನನ್ನೂ ಪ್ರಸ್ತಾಪಿಸಲಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು