ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನವಿಲ್ಲದೇ ಬಿಎಸ್‌ಎನ್‌ಎಲ್‌ನ ಗುತ್ತಿಗೆ ನೌಕರರ ಪರದಾಟ

ಬಿಎಸ್‌ಎನ್‌ಎಲ್‌ ಕಾರ್ಪೊರೇಟ್ ಕಚೇರಿಯಿಂದ ನಾಲ್ಕು ತಿಂಗಳಿನಿಂದ ಬಿಡುಗಡೆಯಾಗದ ಹಣ
Last Updated 11 ಜನವರಿ 2019, 19:31 IST
ಅಕ್ಷರ ಗಾತ್ರ

ಕಾರವಾರ:ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನ ಗುತ್ತಿಗೆ ಆಧಾರಿತ ನೌಕರರಿಗೆ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಜಿಲ್ಲೆಯೊಂದರಲ್ಲೇ 300ಕ್ಕೂ ಅಧಿಕ ನೌಕರರು ತೊಂದರೆಗೆ ಒಳಗಾಗಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಗುತ್ತಿಗೆ ನೌಕರರೊಬ್ಬರು, ‘ನಮಗೆ ಸೆ.15ರಂದು ಕೊನೆಯ ಬಾರಿಗೆ ವೇತನ ನೀಡಲಾಗಿದೆ. ಅದಾದ ನಂತರ ಒಂದು ಪೈಸೆಯೂ ಬಂದಿಲ್ಲ. ಲಕ್ಷಾಂತರ ಮಂದಿ ನೌಕರರು ತಮ್ಮ ದೈನಂದಿನ ಖರ್ಚಿಗೆ ಹಣ ಹೊಂದಿಸಲು ಪರದಾಡುತ್ತಿದ್ದಾರೆ. ದೂರ ಸಂಪರ್ಕ ಇಲಾಖೆ ಸಚಿವಾಲಯವು ಕೂಡಲೇ ಮಧ್ಯಪ್ರವೇಶಿಸಿ ವೇತನ ಕೊಡಿಸಬೇಕು’ ಎಂದು ಒತ್ತಾಯಿಸಿದರು.

ಸಂಬಳ ಕೊಟ್ಟರೆ ಕೆಲಸ:‘ಒಂದು ಅಂದಾಜಿನ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುತ್ತಿಗೆ ನೌಕರರಿಗೆ ಒಂದು ತಿಂಗಳಿಗೆ ಸುಮಾರು ₹ 34 ಲಕ್ಷ ಪಾವತಿಯಾಗಬೇಕು. ಯಾವ್ಯಾವುದೋ ವಿಚಾರಗಳಿಗೆ ಅನಗತ್ಯ ಖರ್ಚು ಮಾಡುವ ಸರ್ಕಾರ, ಕಾರ್ಮಿಕರಿಗೆ ಕೋಟ್ಯಂತರ ರೂಪಾಯಿ ವೇತನ ಬಾಕಿಯಿಟ್ಟಿರುವುದು ನಾಚಿಕೆಗೇಡು. ವೇತನ ಸಿಗುವವರೆಗೂ ನಾವು ಕೆಲಸಕ್ಕೆ ಹಾಜರಾಗದಿರಲು ಚಿಂತನೆ ನಡೆಸಿದ್ದೇವೆ’ ಎಂದರು.

ಬಿಎಸ್‌ಎನ್‌ಎಲ್‌ನ ದೂರವಾಣಿ ವಿನಿಮಯ ಕೇಂದ್ರಗಳಲ್ಲಿ ರಾತ್ರಿ ಪಾಳಿ ಕೆಲಸ ನಿರ್ವಹಿಸುವವರಲ್ಲಿ ಬಹುತೇಕರು ಗುತ್ತಿಗೆ ನೌಕರರು. ವೇತನ ಸಿಗದ ಕಾರಣ ಬೇಸತ್ತು ಈಗಾಗಲೇ ಹಲವರು ಕೆಲಸ ಬಿಟ್ಟಿದ್ದಾರೆ. ಒಂದುವೇಳೆ, ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಲಕ್ಷಾಂತರ ಗ್ರಾಹಕರಿಗೆ ತೊಂದರೆಯಾಗಬಹುದು. ಮಲೆನಾಡಿನಂತಹ ಪ್ರದೇಶಗಳಲ್ಲಿ ಭಾರಿ ಸಮಸ್ಯೆಯಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸುತ್ತಾರೆ.

ಜಿಪಿಎಫ್ ಸಿಕ್ಕಿಲ್ಲ: ಬಿಎಸ್‌ಎನ್‌ಎಲ್‌ನ ಕಾಯಂ ಸಿಬ್ಬಂದಿಯವೈದ್ಯಕೀಯ ಭತ್ಯೆ, ವಾಹನ ಭತ್ಯೆ ಕೂಡ ಬಂದಿಲ್ಲ. ನೌಕರರ ಸಾಮಾನ್ಯ ಭವಿಷ್ಯ ನಿಧಿಯನ್ನೂ (ಜಿಪಿಎಫ್) ಸಂಸ್ಥೆ ನಾಲ್ಕು ತಿಂಗಳಿನಿಂದ ಪಾವತಿಸಿಲ್ಲ ಎಂದು ಸಿಬ್ಬಂದಿಯೊಬ್ಬರು ಆರೋಪಿಸಿದರು.

‘ಕೇಂದ್ರ ಕಚೇರಿಯಿಂದಲೇ ಹಣ ಬಂದಿಲ್ಲ’: ‘ಗುತ್ತಿಗೆ ನೌಕರರನ್ನು ಎಚ್‌ಕೆಎಲ್ (ಹೌಸ್‌ ಕೀಪಿಂಗ್ ಲೇಬರ್ಸ್) ಸಂಸ್ಥೆಯ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಬಿಎಸ್‌ಎನ್‌ಎಲ್‌ನ ದೆಹಲಿಯ ಕಾರ್ಪೊರೇಟ್‌ ಕಚೇರಿಯಿಂದಲೇ ಕರ್ನಾಟಕ ವೃತ್ತಕ್ಕೆ ಹಣ ಮಂಜೂರಾಗಿಲ್ಲ. ಹಾಗಾಗಿ ಗುತ್ತಿಗೆದಾರರಿಗೆ ಪಾವತಿಯಾಗದೇ ನೌಕರರಿಗೂ ಬಾಕಿಯಾಗಿದೆ. ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ’ ಎಂದು ಸಂಸ್ಥೆಯ ಆಡಳಿತ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಠೇವಣಿ ಮರು ಪಾವತಿಸಿಲ್ಲ’:ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿ ಸಂಪರ್ಕವನ್ನು ರದ್ದು ಮಾಡಿಸಿಕೊಂಡವರಿಗೆ ನಿಯಮದ ಪ್ರಕಾರ ಠೇವಣಿಯನ್ನು ಮರು ಪಾವತಿಸಬೇಕು. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ತಿಂಗಳ ಅವಧಿಯಲ್ಲಿ ಸುಮಾರು ₹ 20 ಲಕ್ಷ ಪಾವತಿಸಬೇಕಿದೆ. ಈ ಮೂಲಕ ಸರ್ಕಾರವೇ ತನ್ನ ನಿಯಮವನ್ನು ಉಲ್ಲಂಘಿಸುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT