ಕೆಲವೇ ದಿನಗಳಲ್ಲಿ ಶುಭ ಸುದ್ದಿ: ಬಿಎಸ್‌ವೈ ಅಭಯ

7
30 ಶಾಸಕರ ಜತೆಗೆ ಸಭೆ ನಡೆಸಿದ ಯಡಿಯೂರಪ್ಪ

ಕೆಲವೇ ದಿನಗಳಲ್ಲಿ ಶುಭ ಸುದ್ದಿ: ಬಿಎಸ್‌ವೈ ಅಭಯ

Published:
Updated:

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯ ಕಸರತ್ತು ಮುಂದುವರಿಸಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು, ಮುಂದಿನ ನಡೆಯ ಕುರಿತು ತಮ್ಮ ಪಕ್ಷದ 30ಕ್ಕೂ ಅಧಿಕ ಶಾಸಕರ ಜತೆಗೆ ಬುಧವಾರ ಸಮಾಲೋಚನೆ ನಡೆಸಿದರು.

ಡಾಲರ್ಸ್‌ ಕಾಲೊನಿಯ ನಿವಾಸದಲ್ಲಿ ಬುಧವಾರ ನಡೆದ ಸಭೆಯಲ್ಲಿ ಯಡಿಯೂರಪ್ಪ, ‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಒಡ್ಡುವ ಆಮಿಷಗಳಿಗೆ ಯಾವುದೇ ಕಾರಣಕ್ಕೂ ಬಲಿಯಾಗಬೇಡಿ. ತಾಳ್ಮೆಯಿಂದ ಕಾಯಿರಿ. ಗಣೇಶ ಹಬ್ಬ ಮುಗಿಯಲಿ. ಕೆಲವೇ ದಿನಗಳಲ್ಲಿ ಶುಭ ಸುದ್ದಿ ಕೊಡುತ್ತೇನೆ’ ಎಂದು ಶಾಸಕರಿಗೆ ಆತ್ಮವಿಶ್ವಾಸ ತುಂಬಿದರು.

‘ನಮ್ಮ ಶಾಸಕರನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಸೆಳೆಯುವ ಯತ್ನ ನಡೆಸಬಹುದು. ಸಚಿವ ಸ್ಥಾನ ಹಾಗೂ ಕ್ಷೇತ್ರಕ್ಕೆ ಅನುದಾನ ನೀಡುವ ಆಮಿಷ ಒಡ್ಡಬಹುದು. ಇದಕ್ಕೆ ನೀವೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ಪಕ್ಷದ 104 ಶಾಸಕರೂ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದೂ ತಾಕೀತು ಮಾಡಿದರು.

ಶಾಸಕರ ಮೇಲೆ ನಿಗಾ ಇಡುವ ಹೊಣೆಯನ್ನು ಹಿರಿಯ ಶಾಸಕರಾದ ಆರ್‌.ಅಶೋಕ, ಉಮೇಶ ಕತ್ತಿ, ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಿದ್ದಾರೆ ಎಂದು ಗೊತ್ತಾಗಿದೆ.  ನಮ್ಮ ಪಕ್ಷದ ಶಾಸಕರು ಕೈ ಬುಟ್ಟಿಗೆ ಹಾರದಂತೆ ತಡೆಯಲು ಎಲ್ಲರನ್ನೂ ರೆಸಾರ್ಟ್‌ಗೆ ಕರೆದೊಯ್ಯುವುದು ಉತ್ತಮ ಎಂದು ಶಾಸಕರೊಬ್ಬರು ಸಲಹೆ ನೀಡಿದರು. ‘ಇಂತಹ ಉಸಾಬರಿಯೇ ಬೇಡ. ಇದರಿಂದ ಪಕ್ಷಕ್ಕೆ ಕೆಟ್ಟ ಹೆಸರು ಬರಲಿದೆ’ ಎಂದ ಯಡಿಯೂರಪ್ಪ ಆ ಪ್ರಸ್ತಾಪವನ್ನು ತಳ್ಳಿ ಹಾಕಿದರು.

ಜಾರಕಿಹೊಳಿ ಸಹೋದರರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ ಶಾಸಕರು, ‘ಇಷ್ಟು ದಿನ ಅವರ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದೇವೆ. ಈಗ ಅವರ ಜತೆಗೂಡಿ ರಾಜಕಾರಣ ಮಾಡುವುದು ಕಷ್ಟ’ ಎಂದು ಯಡಿಯೂರಪ್ಪ ಅವರ ಬಳಿ ನೋವು ತೋಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !