‘ನಮ್ಮ ವಿರುದ್ಧ ಡೈರಿ ಇದ್ದರೆ ಬಿಡುಗಡೆ ಮಾಡಿ’

7
ಡಿಕೆಶಿಗೆ ಬಿಎಸ್‌ವೈ ಸವಾಲು

‘ನಮ್ಮ ವಿರುದ್ಧ ಡೈರಿ ಇದ್ದರೆ ಬಿಡುಗಡೆ ಮಾಡಿ’

Published:
Updated:
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೇಂದ್ರ ಬಿಜೆಪಿ ಸರ್ಕಾರದ ನಾಲ್ಕು ವರ್ಷದ ಸಾಧನೆಗಳ ಕುರಿತಾದ ಪುಸ್ತಕ ಬಿಡುಗಡೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ವಿಧಾನಪರಿಷತ್‌ ಸದಸ್ಯ ಎನ್. ರವಿಕುಮಾರ್ ಮತ್ತು ರಾಜ್ಯ ಬಿಜೆಪಿ ಸಹ ವಕ್ತಾರ ಎ.ಎಚ್.ಆನಂದ ಇದ್ದರು.- ಪ್ರಜಾವಾಣಿ ಚಿತ್ರ

 ಬೆಂಗಳೂರು: ‘ನಿಮ್ಮ ಬಳಿ ನಮ್ಮ ಕುರಿತ ಯಾವುದೇ ಡೈರಿ ಸೇರಿದಂತೆ ಏನಿದೆಯೊ ಅದನ್ನು ಬಿಡುಗಡೆ ಮಾಡಿ, ಆ ಬಗ್ಗೆ ಯಾವುದೇ ತನಿಖಾ ಸಂಸ್ಥೆಯಿಂದ ಬೇಕಾದರೂ ತನಿಖೆ ನಡೆಸಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

 ‘ಬಿಜೆಪಿ ನಾಯಕರ ಡೈರಿ ನನ್ನ ಬಳಿ ಇದೆ, ಸೂಕ್ತ ಸಮಯದಲ್ಲಿ ಬಹಿರಂಗ ಮಾಡುತ್ತೇನೆ’ ಎಂಬುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಇತ್ತೀಚಿಗೆ  ಹೇಳಿಕೆ ನೀಡಿದ್ದರು. ಅದಕ್ಕೆ ಯಡಿಯೂರಪ್ಪ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದರು.

‘ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇದೆ. ಎಸಿಬಿ, ಸಿಒಡಿ, ಲೋಕಾಯುಕ್ತವೂ ನಿಮ್ಮ ಕೈಯಲ್ಲೇ ಇದೆ. ಕುಂಟು ನೆಪ ಹೇಳದೆ ತನಿಖೆ ಮಾಡಿಸಿ. ಇದರಿಂದ ಅನಗತ್ಯ ಕಲ್ಪನೆ ಮಾಡಿಕೊಳ್ಳುವುದು ತಪ್ಪುತ್ತದೆ’ ಎಂದೂ ಅವರು ಹೇಳಿದರು.

 ಕಾವೇರಿ ವಿಚಾರದಲ್ಲಿ ಅನ್ಯಾಯ ಆಗಬಾರದು: ಕಾವೇರಿ ನದಿ ನೀರಿನ ವಿಚಾರದಲ್ಲಿ ಸರ್ಕಾರದ ಜತೆ ಇದ್ದೇವೆ. ರಾಜ್ಯದ ರೈತರಿಗೆ ಅನ್ಯಾಯ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಯಡಿಯೂರಪ್ಪ ತಿಳಿಸಿದರು.

ಕಾವೇರಿ ನಿರ್ವಹಣಾ ಮಂಡಳಿ ಬಗ್ಗೆ ಎಚ್ಚರಿಕೆ ವಹಿಸಲು ಹಿಂದಿನ ಮತ್ತು ಈಗಿನ ಸರ್ಕಾರಗಳು ಸೋತಿವೆ. ನಿರ್ವಹಣಾ ಮಂಡಳಿಗೆ ರಾಜ್ಯದ ಅಧಿಕಾರಿಯೊಬ್ಬರ ಹೆಸರು ಕೊಡಲು ವಿಳಂಬ ಮಾಡುತ್ತಿರುವುದು ಏಕೆ. ಈಗಲಾದರೂ ಹೆಸರು ಕೊಡಿ ಎಂದು ಆಗ್ರಹಿಸಿದರು.

‘ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಪಕ್ಷದ ಪ್ರಣಾಳಿಕೆಯಲ್ಲಿ ಅನೇಕ ಭರವಸೆಗಳನ್ನು ನೀಡಿದ್ದರು. 37 ಸ್ಥಾನಗಳನ್ನೂ ಗೆದ್ದಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಭರವಸೆ ಈಡೇರಿಸುವುದಾಗಿ ಹೇಳಿದ್ದರು. ಜನರೂ ಅದಕ್ಕಾಗಿ ಕಾಯುತ್ತಿದ್ದಾರೆ. ನಾವೂ 15 ದಿನಗಳಿಂದ ಏನೂ ಮಾತನಾಡದೇ ಸುಮ್ಮನೇ ಕಾದು ಕುಳಿತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ನಮ್ಮದು ಸಮ್ಮಿಶ್ರ ಸರ್ಕಾರ. ಕಾಂಗ್ರೆಸ್‌ ಜತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಿದೆ. ಕಾಂಗ್ರೆಸ್ ಮುಲಾಜಿನಲ್ಲಿದ್ದೇವೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಜನರನ್ನು ಅಪಮಾನ ಮಾಡುತ್ತಿದ್ದಾರೆ’ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಶುದ್ಧ ನಡೆ ಸೂಕ್ತ ವಿಕಾಸ: ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆಗಳನ್ನು ಬಿಂಬಿಸುವ ‘ಶುದ್ಧ ನಡೆ ಸೂಕ್ತ ವಿಕಾಸ’ ಕೈಪಿಡಿಯನ್ನು ಯಡಿಯೂರಪ್ಪ ಬಿಡುಗಡೆಗೊಳಿಸಿದರು.

ಈ ಕೈಪಿಡಿಯನ್ನು ಪಕ್ಷದ ಕಾರ್ಯಕರ್ತರು ಮನೆ–ಮನೆಗಳಿಗೂ ತಲುಪಿಸಲಿದ್ದಾರೆ. ಯುಪಿಎ ಅವಧಿಯ ಹತ್ತು ವರ್ಷ ಭ್ರಷ್ಟಾಚಾರ, ಹಗರಣಗಳು, ಆರ್ಥಿಕ ಕುಸಿತ ಮತ್ತು ನಿರಾಶದಾಯಕ ವಾತಾವರಣದಿಂದ ಕೂಡಿತ್ತು. ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ ಎಂದು ಅವರು ಹೇಳಿದರು.

ಈಗ ದೇಶದ ಆರ್ಥಿಕ ಸ್ಥಿತಿ ಸದೃಢಗೊಂಡಿದೆ. ವಿದೇಶಾಂಗ ನೀತಿಗೆ ಮನ್ನಣೆ ಸಿಕ್ಕಿದೆ. ಜಗತ್ತಿನಲ್ಲಿ ಭಾರತದ ಗೌರವವೂ ಹೆಚ್ಚಾಗಿದೆ ಎಂದೂ ಅವರು ಹೇಳಿದರು.

 

 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !