ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಸಾವಿರ ಮೂಲೆ ನಿವೇಶನ ಹರಾಜು: ಬಿಎಸ್‌ವೈ

ಬಿಗಡಾಯಿಸಿದ ಆರ್ಥಿಕ ಸಂಕಷ್ಟ l ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾದ ಸರ್ಕಾರ
Last Updated 13 ಏಪ್ರಿಲ್ 2020, 21:22 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಬಿಗಡಾಯಿಸಿದ್ದು, ಸಂಪನ್ಮೂಲ ಸಂಗ್ರಹಕ್ಕಾಗಿ ಬಿಡಿಎ ಬಡಾವಣೆಗಳಲ್ಲಿರುವ 12 ಸಾವಿರ ಮೂಲೆ ನಿವೇಶನಗಳನ್ನು ಹರಾಜು ಹಾಕಲು ಸರ್ಕಾರ ಮುಂದಾಗಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸಂಪನ್ಮೂಲ ಸಂಗ್ರಹಕ್ಕೆ ಇನ್ನೂ ಹಲವು ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಸಭೆಯ ಬಳಿಕ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಬಿಡಿಎ ಮೂಲೆ ನಿವೇಶನಗಳನ್ನು ಮಾರಾಟ ಮಾಡುವುದರಿಂದ ಸುಮಾರು ₹15 ಸಾವಿರ ಕೋಟಿ ಆದಾಯ ಒದಗುವ ಸಾಧ್ಯತೆ ಇದೆ. ಅಲ್ಲದೆ, ರಾಜ್ಯದ ಇತರ ನಗರಗಳಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರಗಳ ಮೂಲೆ ನಿವೇಶನಗಳು ಮತ್ತು ಖಾಲಿ ನಿವೇಶನಗಳನ್ನೂ ಹರಾಜು ಹಾಕಲು ತೀರ್ಮಾನಿಸಲಾಗಿದೆ ಎಂದರು.

ಅನಧಿಕೃತ ಕಟ್ಟಡಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರಯತ್ನಿಸಲಾಗುವುದು. ಇಂತಹ ಪ್ರಕರಣಗಳು ಇತ್ಯರ್ಥವಾದರೆ, ನಾಗರಿಕರಿಗೂ ಅನುಕೂಲವಾಗುತ್ತದೆ ಮತ್ತು ಬೊಕ್ಕಸಕ್ಕೂ ಹೆಚ್ಚಿನ ಆದಾಯ ಸಿಗುತ್ತದೆ ಎಂದು ಅವರು ಹೇಳಿದರು.

ಖಾಸಗಿ ಮತ್ತು ಸಹಕಾರಿ ಸಂಘಗಳ ಬಡಾವಣೆ ನಿರ್ಮಾಣ ಹಾಗೂ ನಿವೇಶನಕ್ಕೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಅನುಮತಿಗೆ ಕಾಯುತ್ತಿರುವ ನೂರಾರು ವಸತಿ ನಿರ್ಮಾಣ ಸೊಸೈಟಿಗಳಿಗೆ ಅನುಮತಿ ನೀಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಗೆ ತರಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗಿದೆ. ಇದಕ್ಕಾಗಿ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಇಂದಿನ ಸಭೆಯಲ್ಲಿ ಹಲವು ಸಲಹೆ ಸೂಚನೆಗಳು ಬಂದವು ಅವುಗಳನ್ನು ಜಾರಿಗೊಳಿಸಲಾಗುತ್ತದೆ ಎಂದರು.

ಅಲ್ಲದೆ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ₹1 ಸಾವಿರ ಕೋಟಿಗಳನ್ನು ವೈದ್ಯಕೀಯ ಕಾಲೇಜುಗಳ ಮೂಲಸೌಲಭ್ಯ ಅಭಿವೃದ್ಧಿಗೆ ಬಳಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಉಚಿತ ಹಾಲು ವಿತರಣೆ ಇನ್ನೂ ಒಂದು ವಾರ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.

‘ಆದಾಯವೇ ನಿಂತು ಹೋಗಿದೆ’

‘ಲಾಕ್‌ಡೌನ್‌ನಿಂದಾಗಿ ಸರ್ಕಾರಕ್ಕೆ ಆದಾಯದ ಎಲ್ಲ ಮಾರ್ಗಗಳೂ ಬಂದ್‌ ಆಗಿವೆ. ಎಲ್ಲ ಚಟುವಟಿಕೆಗಳು ಸ್ತಬ್ಧವಾಗಿರುವುದರಿಂದ ಅಬಕಾರಿ, ಮೋಟಾರು ವಾಹನಗಳ ತೆರಿಗೆ, ವಾಣಿಜ್ಯ ತೆರಿಗೆಯಿಂದ ಆದಾಯ ಬರುವುದು ಸಂಪೂರ್ಣ ನಿಂತು ಹೋಗಿದೆ’ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

‘ಕೋವಿಡ್‌ನಿಂದ ಕೇಂದ್ರ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಹಣಕಾಸಿನ ಪರಿಸ್ಥಿತಿ ಸರಿ ಇಲ್ಲದಿರುವುದನ್ನು ಮುಚ್ಚುಮರೆ ಮಾಡುವ ಪ್ರಶ್ನೆ ಇಲ್ಲ. ನಮ್ಮ ಇತಿ ಮಿತಿಯಲ್ಲಿ ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳಲ್ಲಿ ಆದ್ಯತೆಯನ್ನು ಪರಿಗಣಿಸಿ ಜಾರಿ ಮಾಡುತ್ತೇವೆ’.

‘ಲಾಕ್‌ಡೌನ್‌ನಿಂದ ಎಷ್ಟು ನಷ್ಟ ಆಗಿದೆ ಎಂಬುದನ್ನು ಅಂದಾಜು ಹಾಕಿಲ್ಲ. ನಮಗೆ ಬರಬೇಕಾಗಿರುವ ಯಾವುದೇ ಆದಾಯ ಬರುತ್ತಿಲ್ಲ. ಇದು ಕರ್ನಾಟಕ ಮಾತ್ರ ಅಲ್ಲ. ಇಡೀ ದೇಶದ ಸ್ಥಿತಿ. ನಮ್ಮ ಹಣಕಾಸಿನ ಇತಿ ಮಿತಿಯಲ್ಲಿ ಕೊರೊನಾ ವಿರುದ್ಧ ಹೋರಾಡಬೇಕಾಗಿದೆ’ ಎಂದಿದ್ದಾರೆ.

ಕಬ್ಬು ಬೆಳೆಗಾರರಿಗೆ ₹2,834 ಕೋಟಿ ಪಾವತಿಗೆ ಸೂಚನೆ

ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾಗಿರುವ ₹2,834 ಕೋಟಿಯನ್ನು ಕೂಡಲೇ ಪಾವತಿಸಲು ಸೂಚಿಸಲಾಗಿದೆ. ಒಂದು ವೇಳೆ ಕಾರ್ಖಾನೆಗಳ ಮಾಲೀಕರು ಸರ್ಕಾರದ ಆದೇಶವನ್ನು ಪಾಲಿಸದೇ ಇದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಉತ್ತರ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಿಂದ ಭತ್ತದ ಬೆಳೆ ನಾಶವಾಗಿರುವುದರಿಂದ ರೈತರಿಗೆ ಪರಿಹಾರ ನೀಡಲು ₹45 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT