ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ : ಯಡಿಯೂರಪ್ಪ ಅವರೇ ನಮ್ಮ ಟೀಮ್ ಲೀಡರ್ : ನಳಿನ್‌ ಕುಮಾರ್ ಕಟೀಲ್

Last Updated 21 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕರಾವಳಿ ಬಿಜೆಪಿಯಲ್ಲಿನ ಅತೃಪ್ತಿಯ ಕಡಲಿನ ಉಬ್ಬರ ಈಗ ದಿಢೀರ್ ಇಳಿದಿದೆ. ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಭಿನ್ನ ಸ್ವರ ಹೊರಡಿಸುತ್ತಿದ್ದವರೆಲ್ಲ ಈಗ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಸಂಸದ ನಳಿನ್‌ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಿದ್ದಂತೆ ತುಳುನಾಡಿನ ತುಂಬೆಲ್ಲಾ ಈಗ ಹಾರ, ತುರಾಯಿಗಳ ಆರ್ಭಟ ಮೇಳೈಸಿವೆ. ಜೈಕಾರಗಳು ಮೊಳಗಿವೆ; ಹರ್ಷೋದ್ಗಾರ ಹೆಚ್ಚಾಗಿದೆ.

ಆರ್‌ಎಸ್‌ಎಸ್ ಸಿದ್ಧಾಂತದ ಕಟ್ಟಾ ಪ್ರತಿಪಾದಕರಾದ 53 ವಯಸ್ಸಿನ ನಳಿನ್, ಸುಳ್ಯ ತಾಲ್ಲೂಕಿನ ಪೆರುವಾಜೆ ಊರಿನವರು. ಮೂರನೇ ಬಾರಿ ಸಂಸದರಾದವರು. ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಅವರನ್ನು ಎರಡು ಬಾರಿ ಸೋಲಿಸಿ ಹೆಸರಾದವರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಸಂಭ್ರಮದ ಕ್ಷಣದ ಗಡಿಬಿಡಿಯಲ್ಲೇ ಅವರು ‘ಪ್ರಜಾವಾಣಿ’ಯ ಜತೆ ಮಾತಿಗೆ ಸಿಕ್ಕರು.

* ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷದ ಚುಕ್ಕಾಣಿ ಹಿಡಿದಿದ್ದೀರಿ? ಹೇಗೆ ನಿಭಾಯಿಸುತ್ತೀರಿ?

–ಪರಿಸ್ಥಿತಿಯ ಅರಿವಿದೆ. ನಾನು ಏಕಾಂಗಿ ಅಲ್ಲ; ಕೇಂದ್ರಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿದೆ. ನಮ್ಮೆಲ್ಲರ ಟೀಮ್‌ ಲೀಡರ್ ಯಡಿಯೂರಪ್ಪ. ಸರ್ಕಾರಕ್ಕೆ ಧಕ್ಕೆಯಾಗದಂತೆ, ಪಕ್ಷ ಸಂಘಟನೆ ಸದೃಢವಾಗುವಂತೆ ಅವರ ಮಾರ್ಗದರ್ಶನದಲ್ಲೇ ತಂತ್ರ ರೂಪಿಸುತ್ತೇವೆ. ಮುಂದೆ ಉಪ ಚುನಾವಣೆ ಎದುರಾಗಲಿದೆ. ಅಷ್ಟೂ ಕ್ಷೇತ್ರಗಳಲ್ಲಿ ಗೆಲ್ಲುವ ಸವಾಲೂ ಇದೆ. ನನಗೆ ವಿಶ್ವಾಸ ಇದೆ; ಇದರಲ್ಲಿ ಹಂರ್ಡ್ರೆಡ್‌ ಪರ್ಸೆಂಟ್‌ ಯಶಸ್ವಿಯಾಗುತ್ತೇವೆ.

* ನಳಿನ್‌ ಕುಮಾರ್ ಕಟೀಲ್ ದಕ್ಷಿಣ ಕನ್ನಡ, ಉಡುಪಿ ಭಾಗಗಳಲ್ಲಿ ಪರಿಚಿತರು; ಇಡೀ ರಾಜ್ಯದ ಸಂಘಟನೆ ಹೇಗೆ?

–ಯಾವುದೇ ಜವಾಬ್ದಾರಿ ಕೊಡುವವರೆಗೂ ಸೀಮಿತ ವ್ಯಾಪ್ತಿಯಲ್ಲೇ ಇರುತ್ತೇವೆ. ಒಮ್ಮೆ ಜವಾಬ್ದಾರಿ ಸಿಕ್ಕ ಮೇಲೆ ಪ್ರವಾಸ ಮಾಡಿ, ಸಂಘಟನೆ ಬಲಪಡಿಸುತ್ತೇನೆ. ಇದನ್ನು ನಾನು ಹುದ್ದೆ ಎಂದು ಭಾವಿಸಿಲ್ಲ; ಜವಾಬ್ದಾರಿ ಎಂದೇ ತಿಳಿದಿದ್ದೇನೆ. ಸಂಸದರಾಗಿದ್ದೂ ರಾಜ್ಯದಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿದ್ದವರು ನಮ್ಮಲ್ಲಿ ಹಿಂದೆ ಕೆಲವರು ಇದ್ದಾರೆ. ಅವರೆಲ್ಲರ ಸಲಹೆ–ಸೂಚನೆಗಳನ್ನು ಪಡೆದುಕೊಳ್ಳುತ್ತೇನೆ. ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಪಕ್ಷ ಸಂಘಟನೆ ಮಾಡುವೆ.

* ನೀವು ಯಡಿಯೂರಪ್ಪ ಆಯ್ಕೆನೋ ಅಥವಾ ಹೈಕಮಾಂಡ್‌ ಆಯ್ಕೆನೋ?

–ನಮ್ಮಲ್ಲಿ ಇಂತಹ ಆಯ್ಕೆಗಳನ್ನು ಮಾಡುವಾಗ ಸಂಘಟನೆಯ ಪ್ರಮುಖರು ಕುಳಿತು, ಚರ್ಚಿಸಿ ತೀರ್ಮಾನಿಸುತ್ತಾರೆ. ಅದರಲ್ಲಿ ಯಡಿಯೂರಪ್ಪ ಕೂಡ ಒಬ್ಬರು. ನಾನೇನೂ ದೊಡ್ಡ ಬುದ್ಧಿವಂತನಲ್ಲ; ಶಿಕ್ಷಣವಂತನೂ ಅಲ್ಲ, ಆರ್‌ಎಸ್‌ಎಸ್ ವಿಚಾರಧಾರೆಯಲ್ಲಿ ನಂಬಿಕೆ ಇಟ್ಟವನು. ಭಾರತ ಮಾತೆಯ ಗೌರವ ಹೆಚ್ಚಿಸುವ ಯಾವುದೇ ಕಾಯಕ ಕೊಟ್ಟರೂ ಅದನ್ನು ಚಾಚೂ ತಪ್ಪದೇ ಮಾಡುವವನು.

* ಸಚಿವ ಸಂಪುಟದಲ್ಲಿ ಬಹಳಷ್ಟು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ; ಕೆಲವು ಕಡೆ ಅಸಮಾಧಾನ, ಅತೃಪ್ತಿಗಳು ಸ್ಫೋಟಗೊಂಡಿವೆ?

–ಹೌದು, ಅಧಿಕಾರ ಸಿಗದಿದ್ದಾಗ ಬೇಸರ ಆಗುವುದು ರಾಜಕಾರಣದಲ್ಲಿ ಸಹಜ. ಇದು ಸಂದಿಗ್ಧ ಸ್ಥಿತಿ. ವರಿಷ್ಠರು ಈ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಎಲ್ಲರನ್ನೂ ಸಮಾಧಾನಪಡಿಸುತ್ತೇವೆ. ಶೀಘ್ರದಲ್ಲೇ ಎಲ್ಲವೂ ಸಮ ಸ್ಥಿತಿಗೆ ಬರುತ್ತವೆ.

* ರಾಜ್ಯದಲ್ಲಿ ನಿಮ್ಮ ಪಕ್ಷ ಈಗ ಅಧಿಕಾರದಲ್ಲಿದೆ. ಆದರೆ, ಕಳೆದ ಚುನಾವಣೆಯಲ್ಲಿ ಪಕ್ಷದ ಮತ ಹಂಚಿಕೆಯಲ್ಲಿ ಹೆಚ್ಚಿನ ಸಾಧನೆಯೇನೂ ಇಲ್ಲ?

–ಇದು ತಿಳಿದಿದೆ. ಕೆಲವು ಕಡೆಗಳಲ್ಲಿ ಪಕ್ಷವನ್ನು ಬಲ‍ಪಡಿಸುವ ಅಗತ್ಯವಿದೆ. ಹಾಗಾಗಿ, ಹೆಚ್ಚು, ಹೆಚ್ಚು ಕಾರ್ಯಕರ್ತರ ಪಡೆ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಹಿಂದೆಯೂ ನಡೆದಿತ್ತು; ಮುಂದೆಯೂ ನಡೆಯಲಿದೆ. ಪಕ್ಷದ ತತ್ವ, ಸಿದ್ಧಾಂತಗಳ ಬಗ್ಗೆ ಒಲವುಯುಳ್ಳ ಯುವಕರನ್ನು ಮತದಾರರನ್ನಾಗಿ ಪರಿವರ್ತಿಸುವ ಸವಾಲು ನಮ್ಮ ಮುಂದಿದೆ. ಪಕ್ಷದ ಸಂಘಟನೆ ಮಾಡಬೇಕು ಎನ್ನುವವರಿಗೆ ನಮ್ಮಲ್ಲಿ 50ಕ್ಕೂ ಹೆಚ್ಚು ವೇದಿಕೆಗಳಿವೆ. ಅಲ್ಲಿ ಪ್ರತಿಭೆ ನೋಡಿ ಅವಕಾಶ ನೀಡಲಾಗುತ್ತದೆ. ಉತ್ತಮ ಸಂಘಟನೆಯೇ ನಮ್ಮ ಗುರಿ.

ಮಂಗಳೂರು ಬಿಟ್ಟು ಬೇರೆ ಜಿಲ್ಲೆ ನಳಿನ್‌ಗೆ ಗೊತ್ತಿಲ್ಲ: ಯತ್ನಾಳ

ಬೆಂಗಳೂರು: ‘ಪಕ್ಷದ ರಾಜ್ಯ ಘಟಕದ ನೂತನ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಂಗಳೂರು ಬಿಟ್ಟು ಬೇರೆ ಜಿಲ್ಲೆಗಳನ್ನು ನೋಡೇ ಇಲ್ಲ. ಇನ್ನು ಮುಂದಾದರೂ ಬೇರೆ ಜಿಲ್ಲೆಗಳನ್ನು ನೋಡಲಿ ಮತ್ತು ಓಡಾಡಲಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಮುಖ್ಯಮಂತ್ರಿ ಗೃಹಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಟೀಲ್‌ ಅವರು ಬೇರೆ ಜಿಲ್ಲೆಗಳಲ್ಲಿ ಓಡಾಡಿರುವುದನ್ನು ನಾನು ನೋಡಿಯೇ ಇಲ್ಲ’ ಎಂದರು.

ಬೀದರ್‌, ಕಲಬುರ್ಗಿ, ವಿಜಯಪುರ ಮುಂತಾದ ಕಡೆಗಳಲ್ಲಿ ಪಕ್ಷ ಬಲಶಾಲಿಯಾಗಿದೆ. ಈ ಜಿಲ್ಲೆಗಳಲ್ಲಿ ಓಡಾಡಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ 10 ಕಾರ್ಯಕರ್ತರ ಹೆಸರು ಹೇಳುವಂತಿರಬೇಕು. ಅವರು ಶ್ರಮವಹಿಸಿ ಕೆಲಸಮಾಡಲಿ. ಅಧ್ಯಕ್ಷರಾಗಿ ಯಶಸ್ವಿಯಾಗಲಿ ಎಂದು ಹಾರೈಸಿದರು.

‘ಅಧ್ಯಕ್ಷರಾಗಿ ಎಲ್ಲ ಕಡೆಗೂ ಕಿವಿ ತೆರೆದುಕೊಂಡಿರಬೇಕು. ಒಂದು ಕಡೆ ಮಾತ್ರ ಕಿವಿ ತೆರೆದುಕೊಂಡು ಕೇಳಿಸಿಕೊಂಡರೆ ಸಾಲದು. ಎರಡೂ ಕಡೆಯೂ ಕಿವಿ ತೆರೆದುಕೊಂಡಿರಬೇಕು’ ಎಂದೂ ಯತ್ನಾಳ್ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT