‘ಮಠಾಧೀಶರ ಧರಣಿಯಲ್ಲಿ ಬಿಎಸ್‌ವೈ ಭಾಗವಹಿಸಿದ್ದು ತಪ್ಪು’

7

‘ಮಠಾಧೀಶರ ಧರಣಿಯಲ್ಲಿ ಬಿಎಸ್‌ವೈ ಭಾಗವಹಿಸಿದ್ದು ತಪ್ಪು’

Published:
Updated:

ಬೆಳಗಾವಿ: ‘ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಮಠಾಧೀಶರು ಪ್ರತಿಭಟನೆ ನಡೆಸಿದ್ದು ತಪ್ಪು. ಅದಕ್ಕಿಂತ ದೊಡ್ಡ ತಪ್ಪು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅದರಲ್ಲಿ ಭಾಗವಹಿಸಿದ್ದು’ ಎಂದು ನೀರಾವರಿ ಮಾಜಿ ಸಚಿವ ಮಲ್ಹಾರಿಗೌಡ ಪಾಟೀಲ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಹಲವು ಮಹನೀಯರು, ಮಠಾಧೀಶರು ಮಾಡಿದ ಹೋರಾಟದ ಫಲವಾಗಿ ಅಖಂಡ ಕರ್ನಾಟಕ ರೂಪುಗೊಂಡಿದೆ. ಆದರೆ, ಇಂದು ಕೆಲವು ಮುಖಂಡರು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಗುಲ್ಲೆಬ್ಬಿಸಿ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

‘ಈ ಭಾಗಕ್ಕೆ ಅನ್ಯಾಯವಾಗಿಲ್ಲ. ಅನ್ಯಾಯವಾಗಿದ್ದರೆ ಅಂಕಿ ಅಂಶ ಸಮೇತ ಸಾಬೀತುಪಡಿಸಬೇಕು. ಹಾಗೊಂದು ವೇಳೆ ಅನ್ಯಾಯವಾಗಿದ್ದರೆ ಯಡಿಯೂರಪ್ಪ ಅವರು ಸದನದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬಹುದಿತ್ತು. ಅವರು ವಿರೋಧ ಪಕ್ಷದ ನಾಯಕರಾಗಿದ್ದು ಅವರಿಗೆ ಅವರದ್ದೇ ಆದ ಜವಾಬ್ದಾರಿಗಳಿವೆ. ಸದನದಲ್ಲಿ ಅವರ ಮಾತಿಗೆ ಸಾಕಷ್ಟು ಬೆಲೆಯಿರುತ್ತದೆ. ಅಲ್ಲಿ ಅವರು ತಮ್ಮ ಕಳಕಳಿಯನ್ನು ತೋರ್ಪಡಿಸಬಹುದಿತ್ತು. ಇಲ್ಲಿಗೆ ಬರುವ ಅವಶ್ಯಕತೆ ಇರಲಿಲ್ಲ’ ಎಂದು ಟೀಕಿಸಿದರು.

ಅಪ್ಪ– ಮಗ ರಾಜ್ಯವನ್ನು ಒಡೆಯುತ್ತಿದ್ದಾರೆ ಎಂದು ಆರೋಪಿಸಿರುವ ಯಡಿಯೂರಪ್ಪ ಅವರು ಮಾಡಿದ್ದು ಏನು? ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಪ್ರತ್ಯೇಕ ರಾಜ್ಯಕ್ಕೆ ಬೆಂಬಲ ನೀಡಿದಂತಾಗಲಿಲ್ಲವೇ? ಎಂದು ಪ್ರಶ್ನಿಸಿದರು.

ದುರ್ದೈವದ ಸಂಗತಿ: ಕರ್ನಾಟಕವನ್ನು ಇಬ್ಭಾಗ ಮಾಡಬೇಕೆನ್ನುವ ಕೂಗು ಎದ್ದಿರುವುದು ದುರ್ದೈವದ ಸಂಗತಿ. ಇಂತಹ ಮಾತುಗಳನ್ನು ಆಡುತ್ತಿರುವವರು ಯಾವುದೇ ಪಕ್ಷದವರಾಗಿರಬಹುದು ಅದು ಸರಿಯಲ್ಲ. ಅನ್ಯಾಯವಾಗಿದ್ದರೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು, ಸರಿಪಡಿಸಬೇಕು. ಹೊರತು, ಮಠಾಧೀಶರನ್ನು ಕರೆದುಕೊಂಡು ಬೀದಿಗಿಳಿಯುವುದಾಗಲೀ, ಪ್ರತ್ಯೇಕ ಧ್ವಜ ಹಾರಿಸುವುದಾಗಲೀ ಒಳ್ಳೆಯದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ಹಣ ಏಲ್ಲಿದೆ?: ನಮ್ಮ ರಾಜ್ಯದಲ್ಲಿ ಅತಿ ಹೆಚ್ಚಿನ ತೆರಿಗೆ ಬೆಂಗಳೂರಿನಿಂದ ಸಂಗ್ರಹವಾಗುತ್ತದೆ. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯವಾದರೆ, ಅಭಿವೃದ್ಧಿಗೆ ಹಣ ಏಲ್ಲಿಂದ ತರುತ್ತೀರಿ? ಜನರ ಮೇಲೆ ಎಷ್ಟೂ ಅಂತ ತೆರಿಗೆ ಹಾಕುತ್ತೀರಿ? ಪ್ರತ್ಯೇಕವಾದ ನಂತರ ತೆಲಂಗಾಣ– ಆಂಧ್ರಪ್ರದೇಶ ರಾಜ್ಯಗಳ ಸ್ಥಿತಿ ಏನಾಗಿದೆ ಎನ್ನುವುದನ್ನು ಕಣ್ತೆರೆದು ನೋಡಿ ಎಂದು ಹೇಳಿದರು.

ಪ್ರತ್ಯೇಕ ರಾಜ್ಯದ ಹೋರಾಟದಿಂದ ಹಿಂದಕ್ಕೆ ಸರಿಯುವಂತೆ ಶಾಸಕ ಉಮೇಶ ಕತ್ತಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ಸುವರ್ಣ ವಿಧಾನಸೌಧ ಕಟ್ಟಿಸಿದ್ದೇ ತಪ್ಪು: ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಇಲ್ಲಿ ಸುವರ್ಣ ವಿಧಾನಸೌಧ ಕಟ್ಟಿಸಿದ್ದೇ ತಪ್ಪು. ಇದರಿಂದ ಯಾರಿಗೂ ಉಪಯೋಗವಾಗುತ್ತಿಲ್ಲ. ಯಾವ ಕಚೇರಿಯೂ ಅಲ್ಲಿ ಸ್ಥಳಾಂತರವಾಗಿಲ್ಲ. ಕಟ್ಟಡವನ್ನು ಬಳಕೆ ಮಾಡಿಕೊಳ್ಳಬೇಕು ಎನ್ನುವ ಮನಸ್ಸಿದ್ದರೆ ತಕ್ಷಣ ವಿವಿಧ ಇಲಾಖೆಗಳ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಬೇಕು ಎಂದು ಮನವಿ ಮಾಡಿದರು. 

 

 

 

 

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !