ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ– ಸಭಾಧ್ಜಕ್ಷರ ಮಧ್ಯೆ ಮಾತಿನ ಸಮರ!

Last Updated 13 ಡಿಸೆಂಬರ್ 2018, 20:06 IST
ಅಕ್ಷರ ಗಾತ್ರ

ಬೆಳಗಾವಿ: ಬರ ಕುರಿತ ಚರ್ಚೆಗೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂಬ ವಿಷಯ ಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಮಧ್ಯೆ ಮಾತಿನ ಚಕಮಕಿಗೆ ವಸ್ತುವಾಯಿತು.

ಬರ ಕುರಿತ ಚರ್ಚೆ ವೇಳೆ ಸಚಿವರಿಲ್ಲ ಎಂಬ ಕಾರಣಕ್ಕೆ ಗುರುವಾರ ಮಧ್ಯಾಹ್ನ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದರು. ಅರ್ಧಕ್ಕೆ ನಿಂತಿದ್ದ ಚರ್ಚೆಯನ್ನು ಮಧ್ಯಾಹ್ನದ ಬಳಿಕವೂ ಮುಂದುವರಿಸಲು ಸಭಾಧ್ಯಕ್ಷರು ಅವಕಾಶ ನೀಡಲು ನಿರಾಕರಿಸಿದ್ದು ಯಡಿಯೂರಪ್ಪ ಅವರನ್ನು ಕೆರಳಿಸಿತ್ತು.

ಮಧ್ಯಾಹ್ನದ ಬಳಿ ಕಲಾಪ ಆರಂಭವಾದಾಗ ಪೀಠದಲ್ಲಿ ಉಪ ಸಭಾಧ್ಯಕ್ಷ ಎಂ. ಕೃಷ್ಣಾ ರೆಡ್ಡಿ ಇದ್ದರು. ‘ಬರ ಬಗ್ಗೆ ಈಗಾಗಲೇ ಸುದೀರ್ಘ ಚರ್ಚೆಯಾಗಿದೆ. ಇತರ ವಿಷಯಗಳ ಕುರಿತೂ ಚರ್ಚಿಸಬೇಕಿದೆ’ ಎಂದು ರೆಡ್ಡಿ ಹೇಳಿದರು. ಆಗ ಯಡಿಯೂರಪ್ಪ, ‘ಮೂರು ಗಂಟೆಗೆ ಆರಂಭವಾಗಬೇಕಿದ್ದ ಕಲಾಪ ಒಂದು ಗಂಟೆ ವಿಳಂಬವಾಗಿ ಆರಂಭವಾಗಲು ಆಡಳಿತ ಪಕ್ಷದವರು ಕಾರಣ. ಕಲಾಪ ನಡೆಸಲು ಆಸಕ್ತಿ ಇಲ್ಲದಿದ್ದರೆ ಮುಂದೂಡಿ’ ಎಂದು ಏರುಧ್ವನಿಯಲ್ಲಿ ಹೇಳಿದರು.

‘ಬರ ಮೇಲಿನ ಚರ್ಚೆಗೆ ನಾಳೆ (ಶುಕ್ರವಾರ) ಉತ್ತರ ನೀಡುವುದಾದರೆ ಚರ್ಚೆ ಮುಂದುವರಿಸಿ. ನಮ್ಮ ಪಕ್ಷದಿಂದ ಇನ್ನೂ 7–8 ಶಾಸಕರು ಮಾತನಾಡಲು ಬಾಕಿ ಇದ್ದಾರೆ’ ಎಂದರು. ಅದಕ್ಕೆ ಕೃಷ್ಣಾ ರೆಡ್ಡಿ ಒಪ್ಪದಿದ್ದಾಗ, ಯಡಿಯೂರಪ್ಪ ಮತ್ತಷ್ಟು ಕೋಪಗೊಂಡರು. ಅಷ್ಟರಲ್ಲಿ ಸಭಾಧ್ಯಕ್ಷ ರಮೇಶಕುಮಾರ್‌ ಬಂದರು.

ಮಾತು ಮುಂದುವರಿಸಿದ ಯಡಿಯೂರಪ್ಪ, ‘ಮೂರು ದಿನಗಳಿಂದ ಕಲಾಪದಲ್ಲಿ ಭಾಗವಹಿಸುತ್ತಿದ್ದೇವೆ. ಆದರೆ, ಆಡಳಿತ ಪಕ್ಷದ ಸದಸ್ಯರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕಲಾಪ ವಿಳಂಬವಾಗಿ ಆರಂಭವಾಗಲು ಅವರೇ ಕಾರಣ’ ಎಂದು ಮತ್ತೆ ಕಿಡಿಕಾರಿದರು.

‘ಮುಖ್ಯಮಂತ್ರಿ ಜೊತೆ ಚರ್ಚಿಸಲು ನಾನು ತೆರಳಿದ್ದೆ. ಹೀಗಾಗಿ ಕಲಾಪ ಆರಂಭಿಸಲು ವಿಳಂಬವಾಯಿತು. ಬೇರೆ ವಿಷಯಗಳನ್ನೂ ಚರ್ಚೆಗೆ ಎತ್ತಿಕೊಳ್ಳಬೇಕಾಗಿದೆ. ಹೀಗಾಗಿ ಸಹಕರಿಸಬೇಕು’ ಎಂದು ಸಭಾಧ್ಯಕ್ಷರು ಮನವಿ ಮಾಡಿದರು.

‘ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವುದು ನಮ್ಮ ಉದ್ದೇಶವಲ್ಲ. ನಾವು ಬಂದಾಗ ಸದನದಲ್ಲಿ ಸಚಿವರು, ಅಧಿಕಾರಿಗಳು ಯಾರೂ ಇರಲಿಲ್ಲ’ ಎಂದು ಯಡಿಯೂರಪ್ಪ ಹೇಳಿದಾಗ, ಮೊದಲ ಒಂದು ಗಂಟೆ ಬರ ಕುರಿತು ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿ ಸಭಾಧ್ಯಕ್ಷರು ಪರಿಸ್ಥಿತಿ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT