ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರ ಜನರ ಪಾಲಿಗೆ ಸತ್ತಿದೆ: ಯಡಿಯೂರಪ್ಪ

ಬರಪರಿಹಾರ ಕಾಮಗಾರಿಗೆ ಹಣ ಬಿಡುಗಡೆ ಆಗಿಲ್ಲ– ಆಕ್ರೋಶ
Last Updated 24 ಜನವರಿ 2019, 20:15 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದರೂ ಸರ್ಕಾರ ಪರಿಹಾರ ಕಾಮಗಾರಿಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಸರ್ಕಾರ ಇದ್ದರೂ ಜನರ ಪಾಲಿಗೆ ಸತ್ತಂತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ‍್ಪ ಹರಿಹಾಯ್ದರು.‌

ತಾಲ್ಲೂಕಿನ ಬದನಗುಪ್ಪೆ, ಮುತ್ತಿಗೆ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಕುಡಿಯುವ ನೀರಿನ ಉದ್ದೇಶಕ್ಕಾಗಿ ಬರ ನಿರ್ವಹಣೆ ಕಾರ್ಯಪಡೆಗೆ ತಲಾ ₹50 ಲಕ್ಷ ಬಿಡುಗಡೆ ಆಗಿರುವುದು ಹೊರತುಪಡಿಸಿ ಬೇರೆ ಹಣ ಬಿಡುಗಡೆಯಾಗಿಲ್ಲ. ಈ ವೇಳೆಗಾಗಲೇ ಬರ ಎದುರಿಸಲು ಸಿದ್ಧತೆಗಳು ಆಗಬೇಕಿತ್ತು. ಆದರೆ, ಏನೂ ಆಗಿಲ್ಲ’ ಎಂದು ಆರೋಪಿಸಿದರು.

‘ಬಿಜೆಪಿಯ 4 ತಂಡಗಳು ಬರಪೀಡಿತ ಪ್ರದೇಶಗಳಿಗೆ ಭೇಟಿನೀಡಿ ಅಧ್ಯಯನ ನಡೆಸುತ್ತಿವೆ. ನಾನು 8–10 ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ಇನ್ನು 10ರಿಂದ 12 ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಲಿದ್ದೇವೆ. ಬರಪೀಡಿತ ಸ್ಥಳಗಳಲ್ಲಿ ಕಂಡಿದ್ದನ್ನು ವರದಿ ರೂಪದಲ್ಲಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗುವುದು’ ಎಂದು ಹೇಳಿದರು.

ಸಾಲಮನ್ನಾ ಆಗಿಲ್ಲ: ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲ ಇನ್ನೂ ಮನ್ನಾ ಆಗಿಲ್ಲ. ಸಹಕಾರ ಸಂಘ‌ಗಳಲ್ಲಿ ರೈತರು ಮಾಡಿರುವ ಸಾಲಮನ್ನಾದ ಪ್ರಯೋಜನ ಎಲ್ಲರಿಗೂ ಸಿಕ್ಕಿಲ್ಲ’ ಎಂದು ದೂರಿದರು.

ಸುಳ್ವಾಡಿ ದುರಂತ ನಡೆದ ಸ್ಥಳಕ್ಕೆ ವಿರೋಧಪಕ್ಷದ ನಾಯಕರು ಸೇರಿದಂತೆ ಬಿಜೆಪಿ ಮುಖಂಡರುಭೇಟಿ ನೀಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸಂತ್ರಸ್ತರು ಚಿಕಿತ್ಸೆ ಪಡೆಯುತ್ತಿದ್ದ ಮೈಸೂರಿನ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇವೆ. ಪಕ್ಷದ ವತಿಯಿಂದ ನೆರವು ನೀಡಿದ್ದೇವೆ’ ಎಂದರು.

‘ಈ ವಿಚಾರವನ್ನು ಪ್ರಧಾನಿ ಗಮನಕ್ಕೆ ತಂದು ಮೃತಪಟ್ಟವರ ಕುಟುಂಬಗಳಿಗೆ ₹ 2 ಲಕ್ಷ, ಗಾಯಾಳುಗಳಿಗೆ ₹50 ಸಾವಿರ ಪರಿಹಾರ ಬಿಡುಗಡೆ ಆಗುವಂತೆ ಮಾಡಿದ್ದೇವೆ’ ಎಂದು ತಿಳಿಸಿದರು.

* ಸರ್ಕಾರದ ಯಾವೊಬ್ಬ ಸಚಿವರೂ ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿಲ್ಲ. ಸರ್ಕಾರಕ್ಕೆ ಯಾವುದರಲ್ಲೂ ಆಸಕ್ತಿ ಇಲ್ಲ. ಕುಂಭಕರ್ಣ ನಿದ್ದೆಯಲ್ಲಿದೆ
-ಬಿ.ಎಸ್‌.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT