ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ–ಜಿಗಜಿಣಗಿ ಬೆಂಬಲಿಗರ ಮಾರಾಮಾರಿ

ಯಡಿಯೂರಪ್ಪ ಯಾತ್ರೆಗೆ ವಿಜಯಪುರ ಜಿಲ್ಲೆಯಲ್ಲಿ ಮುಂದುವರಿದ ವಿರೋಧ
Last Updated 23 ಫೆಬ್ರುವರಿ 2019, 19:53 IST
ಅಕ್ಷರ ಗಾತ್ರ

ವಿಜಯಪುರ: ‘ಮೋದಿ ವಿಜಯ ಸಂಕಲ್ಪ ಯಾತ್ರೆ’ಯಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲಿಗರ ನಡುವೆ ಶನಿವಾರ ಇಲ್ಲಿ ಹೊಡೆದಾಟ ನಡೆಯಿತು.

ಈ ಮೂಲಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಯಾತ್ರೆಗೆ, ವಿಜಯಪುರ ಜಿಲ್ಲೆಯಲ್ಲಿ ಮತ್ತೊಮ್ಮೆ ಅಡ್ಡಿಯಾಯಿತು.

ಈ ಹಿಂದೆ ಯತ್ನಾಳ ಅವರ ಪರವಾಗಿ ಒತ್ತಾಯಗಳಿದ್ದರೆ, ಈ ಲೋಕಸಭಾ ಚುನಾವಣೆಯಲ್ಲಿ ಜಿಗಜಿಣಗಿ ಸ್ಪರ್ಧೆ ವಿರೋಧಿಸಿ ಸಮಾವೇಶಕ್ಕೆ ಅಡ್ಡಿ ಮಾಡುವ ಪ್ರಯತ್ನ ನಡೆಯಿತು. ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರವಷ್ಟೇ ಶಾಸಕ ಯತ್ನಾಳ, ಸಚಿವ ಜಿಗಜಿಣಗಿ ವಿರುದ್ಧ ಹರಿಹಾಯ್ದಿದ್ದರು. ಇದರ ಬೆನ್ನಿಗೆ ಶನಿವಾರ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಯಡಿಯೂರಪ್ಪ ಅವರಿಗೆ ನುಂಗಲಾರದ ತುತ್ತಾಗಿದೆ ಎನ್ನಲಾಗಿದೆ.

ಸಮಾವೇಶ ಸ್ಥಳದ ಸಮೀಪವೇ ಶಾಸಕ ಬಸನಗೌಡ ಬೆಂಬಲಿಗರು ‘ಅಭ್ಯರ್ಥಿ ಬದಲಿಸಿ, ಬಿಜೆಪಿ ಗೆಲ್ಲಿಸಿ’ ಎಂಬ ಘೋಷಣೆ ಕೂಗಿದರು. ಆಗ, ಇವರ ಬಳಿಯೇ ತೆರಳಿದ ಯಡಿಯೂರಪ್ಪ ಮನವಿ ಸ್ವೀಕರಿಸಲು ಮುಂದಾದರು. ಈ ಸಂದರ್ಭದಲ್ಲಿ ಜಿಗಜಿಣಗಿ ಬೆಂಬಲಿಗ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ಜತೆಗಿದ್ದರು. ಇದು ಯುವಕರ ಅಸಮಾಧಾನ ಹೆಚ್ಚಿಸಿತು. ಕೆಲವರು ಮಾಜಿ ಸಚಿವರನ್ನು ಪಕ್ಕಕ್ಕೆ ತಳ್ಳಲು ಮುಂದಾಗುತ್ತಿದ್ದಂತೆಯೇ, ಸ್ಥಳದಲ್ಲಿ ಜಮಾಯಿಸಿದ್ದ ಪಟ್ಟಣಶೆಟ್ಟಿ ಹಾಗೂ ಜಿಗಜಿಣಗಿ ಬೆಂಬಲಿಗರು ಥಳಿಸಿದರು ಎಂದುಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ವೇದಿಕೆಯಿಂದ ಇಳಿದು, ಘೋಷಣೆ ಕೂಗುತ್ತಿದ್ದ ಗುಂಪಿನ ಬಳಿಗೇ ತೆರಳಿ ಮನವಿ ಸ್ವೀಕರಿಸುವ ಅಗತ್ಯ ಯಡಿಯೂರಪ್ಪ ಅವರಿಗಿತ್ತೇ ಎಂದೂ ಜಿಲ್ಲಾ ಬಿಜೆಪಿಯಲ್ಲಿ ಚರ್ಚೆಯಾಗುತ್ತಿದೆ. ಥಳಿತಕ್ಕೊಳಗಾದವರು ದೂರು ದಾಖಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಮಾವೇಶಕ್ಕೆ ಯತ್ನಾಳ ಗೈರಾಗಿದ್ದರು.

ಹಿಂದೆಯೂ ಬಿಎಸ್‌ವೈಗೆ ಮುಜುಗರ..!

2018ರ ವಿಧಾನಸಭಾ ಚುನಾವಣಾ ಪೂರ್ವದಲ್ಲಿ, ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆ ವಿಜಯಪುರ ಜಿಲ್ಲೆಯಾದ್ಯಂತ ಸಂಚರಿಸಿದಾಗ, ‘ಯತ್ನಾಳ ಅವರನ್ನು ಬಿಜೆಪಿಗೆ ಮರು ಸೇರ್ಪಡೆ ಮಾಡಿಕೊಳ್ಳಬೇಕು. ನಗರ ವಿಧಾನಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಸಬೇಕು’ ಎಂದು ಆಗ್ರಹಿಸಿ ಅವರ ಬೆಂಬಲಿಗರು ಯಾತ್ರೆಯುದ್ದಕ್ಕೂ ಯಡಿಯೂರಪ್ಪ ಅವರನ್ನು ಕಾಡಿದ್ದರು.

ಇಂಡಿ ವಿಧಾನಸಭಾ ಕ್ಷೇತ್ರದ ಸಭೆಯಲ್ಲಿ, ಕಾರ್ಯಕರ್ತರ ನಡುವಿನ ಅಸಮಾಧಾನ ಆಸ್ಫೋಟಗೊಂಡು, ಯಡಿಯೂರಪ್ಪ ಮಾತನಾಡುತ್ತಿದ್ದ ಮೈಕ್‌ ಕಸಿದುಕೊಂಡು ಮುಜುಗರ ಸೃಷ್ಟಿಸಿದ್ದರು.

ಬಸನಗೌಡ ಪಾಟೀಲ ಯತ್ನಾಳ ಇದೀಗ ಬಿಜೆಪಿ ಶಾಸಕರು. ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಘಟನೆ, ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಮುಜುಗರಕ್ಕೀಡು ಮಾಡಿದೆ ಎಂಬ ಮಾತು ಕೇಳಿ ಬಂದಿವೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT