ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟ, ಗೊಂದಲದ ಸರಮಾಲೆ

ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ 100 ದಿನ
Last Updated 1 ನವೆಂಬರ್ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ಅತಿವೃಷ್ಟಿ ಕಾಲಿಟ್ಟ ಸಂದರ್ಭದಲ್ಲೇ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ಅವರು 100 ದಿನಗಳ ಆಡಳಿತವನ್ನು ಸಂಕಷ್ಟದಲ್ಲೇ ಪೂರೈಸಿದ್ದು, ನೆರೆ ಪೀಡಿತ ಪ್ರದೇಶದ ದಾರುಣ ಸ್ಥಿತಿ ನಿಭಾಯಿಸುವುದರಲ್ಲೇ ಹೆಚ್ಚಿನ ಸಮಯ ಕಳೆದಿದ್ದಾರೆ.

ವರಿಷ್ಠರ ಅಸಹಕಾರದಿಂದಾಗಿ ಪಕ್ಷ ಮತ್ತು ಆಡಳಿತದಲ್ಲೂ ಯಡಿಯೂರಪ್ಪ ಹಿಡಿತ ಕಳೆದುಕೊಳ್ಳುವಂತಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅಧಿಕಾರ ಅವರ ಪಾಲಿಗೆ ಕೈಗೆಟುಕದ ದ್ರಾಕ್ಷಿಯಾಗಿತ್ತು. ಆದರೆ, ಛಲ ಬಿಡದ ಯಡಿಯೂರಪ್ಪ ‘ಆಪರೇಷನ್‌ ಕಮಲ’ದ ಮೂಲಕ ಅಧಿಕಾರ ದಕ್ಕಿಸಿಕೊಳ್ಳಲು ನಿರಂತರ ಪ್ರಯತ್ನ ಮುಂದುವರಿಸಿದ್ದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಒಟ್ಟು 17 ಶಾಸಕರು ರಾಜೀನಾಮೆ ನೀಡುವ ಮೂಲಕ ಅವರ ಆಸೆ ಕೈಗೂಡಿತು.

ಯಡಿಯೂರಪ್ಪ ಸ್ವಪ್ರಯತ್ನದಿಂದ ಸರ್ಕಾರ ರಚನೆ ಮಾಡಿದರೂ ವರಿಷ್ಠರು ಸರ್ಕಾರದಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರು ಹೊಸ ಸರ್ಕಾರ
ವನ್ನು ಅಭಿನಂದಿಸಲೂ ಇಲ್ಲ. ‘ಅನಾಥ ಪ್ರಜ್ಞೆ’ಯಲ್ಲೇ ಸರ್ಕಾರವನ್ನು ಮುಂದುವರಿಸಿಕೊಂಡು ಬರಬೇಕಾಗಿದೆ ಎಂಬುದು ಸಿ.ಎಂ ಆಪ್ತರ ಅಳಲು.

ಕೇಂದ್ರ– ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಹಣದ ಹೊಳೆ ಹರಿಸಬಹುದು ಎಂದು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆ ಹುಸಿಯಾಗಿದೆ. ಅಭಿವೃದ್ಧಿ ಇರಲಿ, ನೆರೆ ಪೀಡಿತ ಪ್ರದೇಶಗಳಿಗೆ ಹೆಚ್ಚಿನ ಪರಿಹಾರ ತರಲು ಸಾಧ್ಯವಾಗಿಲ್ಲ. ಇದು ಮುಖ್ಯವಾಗಿ ವಿರೋಧ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿದೆ.

ನೆರೆ ಪರಿಹಾರಕ್ಕೆ ಹಣ ಹೊಂದಿಸಲು ತಿಣುಕಾಡುತ್ತಿದ್ದು, ಕೇಂದ್ರ ನೆರವಿನ ಹಸ್ತ ಚಾಚಲಿಲ್ಲ. ನೆರೆಯಿಂದಾದ ನಷ್ಟ ಪ್ರಮಾಣ ₹38,000 ಕೋಟಿ ಆಗಿದ್ದರೂ, ಸಿಕ್ಕಿದ್ದು ₹1,200 ಕೋಟಿ (ಮಧ್ಯಂತರ ಪರಿಹಾರ) ಮಾತ್ರ. ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನಿಗದಿ ಮಾಡಿ, ಅದಕ್ಕೆ ಹಣ ಹೊಂದಿಸಲು ಪರದಾಡುವ ಸ್ಥಿತಿ ಬಂದಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೇಕಾಬಿಟ್ಟಿ ವರ್ಗಾವಣೆ ಆಗಿದ್ದು, ಬೇರೇನೂ ಸಾಧನೆ ಮಾಡಿಲ್ಲ. ಮೈತ್ರಿ ಸರ್ಕಾರದಲ್ಲಿ ಎಚ್‌.ಡಿ.ರೇವಣ್ಣ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವರ್ಗಾವಣೆ ಮಾಡಿದ್ದರು. ಈ ಸರ್ಕಾರದಲ್ಲೂ ಅಗತ್ಯಕ್ಕಿಂತ ಹೆಚ್ಚು ವರ್ಗಾವಣೆ ಮತ್ತು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂಬ ಆರೋಪವೂ ವಿರೋಧ ಪಕ್ಷಗಳಿಂದ ಕೇಳಿ ಬಂದಿದೆ.

‘ಸಂಭ್ರಮಾಚರಣೆ ಇಲ್ಲ’

100 ದಿನಗಳು ತುಂಬಿರುವ ಹಿನ್ನೆಲೆಯಲ್ಲಿ ಶನಿವಾರ ಯಾವುದೇ ಸಂಭ್ರಮಾಚರಣೆ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಸಂಕಷ್ಟದ ಸ್ಥಿತಿ ಇದೆ. ಸಂಭ್ರಮದ ಅಗತ್ಯವಿಲ್ಲ. ಮಾಡಬೇಕಾದ ಕೆಲಸ ಬಹಳಷ್ಟಿದೆ. ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ಉದ್ದೇಶಕ್ಕೆ ಹೆಚ್ಚಿನ ಸಮಯ ಮೀಸಲಿಡಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT