ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕರ ಮಕ್ಕಳ ಚಿನ್ನದ ಸಾಧನೆ

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಂದ ಘಟಿಕೋತ್ಸವದಲ್ಲಿ ಸನ್ಮಾನ
Last Updated 20 ಏಪ್ರಿಲ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ವೆಂಕಟರೆಡ್ಡಿ ಅವರ ಮಗಳು ಕೆ.ವಿ. ವಿನುತಾ ಹಾಗೂ ಆಟೋ ಚಾಲಕ ಸಿ.ಎನ್.ರಾಜು ಅವರ ಮಗಳು ಆರ್‌. ವರಲಕ್ಷ್ಮಿ ವಿದ್ಯಾರ್ಜನೆಯಲ್ಲಿ ಚಿನ್ನದ ಪದಕ ಗಳಿಸಿ ಮಾದರಿಯಾಗಿದ್ದಾರೆ.

ಈ ಸಾಧಕರಿಗೆ ಏ. 22ರಂದು ನಡೆಯುವ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಪದಕ ಪ್ರದಾನ ಮಾಡಲಿದ್ದಾರೆ.

ವಿನುತಾ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಕೊಂಡವಳಹಳ್ಳಿಯವರು. ತಂದೆ ವೆಂಕಟರೆಡ್ಡಿ ಕೆಎಸ್‌ಆರ್‌ಟಿಸಿ ಚಾಲಕರು. ತಾಯಿ ಗೃಹಿಣಿ. ದ್ವಿತೀಯ ಪಿ.ಯು. ವಿದ್ಯಾರ್ಹತೆಯ ಪೋಷಕರಿಗೆ, ಮಗಳಿಗೆ ಉನ್ನತ ಶಿಕ್ಷಣ ಕೊಡಿಸುವ ಕನಸಿತ್ತು. ವಿನುತಾ ಅವರಿಗೆ ವಿಜ್ಞಾನದ ಓದಿನಲ್ಲಿ ಆಸಕ್ತಿ ಇತ್ತು. ರಸಾಯನ ವಿಜ್ಞಾನದ ಸ್ನಾತಕೋತ್ತರ ಪದವಿಯಲ್ಲಿ ಅವರು 6 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಗಳಿಸಿದ್ದಾರೆ.

ಪಿ.ಯುವರೆಗೆ ಗುಡಿಬಂಡೆಯಲ್ಲಿ ಓದಿದ ವಿನುತಾ, ಬಾಗೇಪಲ್ಲಿಯಲ್ಲಿ ಬಿ.ಎಸ್ಸಿ. ಮುಗಿಸಿದರು. ಎಂ.ಎಸ್ಸಿ. ಅಧ್ಯಯನಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯ ಸೇರಿದರು. ವಿ.ವಿ.ಯ ವಸತಿನಿಲಯ ಆಸರೆಯಾಯಿತು.

‘400 ಜನರಿರುವ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಉಪರಾಷ್ಟ್ರಪತಿಗಳಿಂದ ಸನ್ಮಾನಿತಳಾಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ’ ಎಂದು ವಿನುತಾ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

ಸದ್ಯ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (ಎನ್‌ಇಟಿ) ತಯಾರಿ ಮಾಡಿಕೊಳ್ಳುತ್ತಿರುವ ವಿನುತಾ ಅವರಿಗೆ ಆರ್ಗನಿಕ್‌ ಕೆಮೆಸ್ಟ್ರಿಯ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಇದೆ.

ಆಟೋ ಚಾಲಕರ ಮಗಳ ಸಾಧನೆ: ಬ್ಯಾಟರಾಯನಪುರದ ನಿವಾಸಿ, ಆಟೋ ಚಾಲಕ ಸಿ.ಎನ್‌. ರಾಜು ತಮ್ಮ ದಿನದ ದುಡಿಮೆಯಲ್ಲಿ ಇಬ್ಬರ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಕೊರತೆ ಬಾರದಂತೆ ನೋಡಿಕೊಂಡರು. ಅಪ್ಪ–ಅಮ್ಮ–ಅಜ್ಜಿಯ ಪ್ರೋತ್ಸಾಹದಿಂದಲೇ ದೊಡ್ಡಮಗಳು ಆರ್‌.ವರಲಕ್ಷ್ಮಿ ಈಗ ಬಿ.ಎಸ್ಸಿಯಲ್ಲಿ 4 ಚಿನ್ನದ ಪದಕ ಮತ್ತು 4 ನಗದು ಬಹುಮಾನಗಳಿಗೆ ಭಾಜನರಾಗಿದ್ದಾರೆ.

ರಾಜು ಅವರ ಪತ್ನಿ ಶಶಿಕಲಾ ಸಹ ಮಕ್ಕಳ ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ ಹಣ ಹೊಂದಿಸಲು ಕಸೂತಿ ಹಾಕುತ್ತಿದ್ದರು. 1,000 ಜಿನ್ಸ್‌ ಪ್ಯಾಂಟ್‌ಗಳಿಗೆ ದರದ ಚೀಟಿ ಜೋಡಿಸಿ ₹ 40 ಸಂಪಾದಿಸುತ್ತಿದ್ದರು. ಉನ್ನತ ಶಿಕ್ಷಣ ಪಡೆಯುತ್ತಲೇ ಟ್ಯೂಷನ್‌ ಹೇಳಿಕೊಡುತ್ತ ವರಲಕ್ಷ್ಮಿ ಸಹ ಅಧ್ಯಯನ ಸಾಮಗ್ರಿಗೆ ಹಣ ಕೂಡಿಸುತ್ತಿದ್ದರು. ಅವರ ಶ್ರಮ ಮತ್ತು ಆಸಕ್ತಿಯ ಓದಿಗೆ ಈಗ ಚಿನ್ನದ ಗರಿ ಮುಡಿಗೇರಿದೆ.

‘ಪಠ್ಯ ವಿಷಯದಲ್ಲಿನ ಗೊಂದಲಗಳನ್ನು ಅಧ್ಯಾಪಕರಿಂದ ತರಗತಿಯಲ್ಲಿಯೇ ಪರಿಹರಿಸಿಕೊಳ್ಳುತ್ತಿದ್ದೆ. ಪರೀಕ್ಷೆಗೆ ಮುನ್ನ ನೀಡುತ್ತಿದ್ದ ರಜೆಯಲ್ಲಿ ಆಸಕ್ತಿಯಿಂದ ಓದುತ್ತಿದೆ’ ಎಂದು ಯಶಸ್ಸಿಗೆ ಸಹಕಾರಿಯಾದ ಅಂಶ ಹಂಚಿಕೊಂಡ ವರಲಕ್ಷ್ಮಿ ಈಗ ಎಂ.ಎಸ್ಸಿ ಗಣಿತ ಓದುತ್ತಿದ್ದಾರೆ. ಅಧ್ಯಾಪಕಿಯಾಗುವ ಗುರಿ ಹೊಂದಿದ್ದಾರೆ.

ಬೆಳಿಗ್ಗೆ–ಸಂಜೆ ತಲಾ 3 ಗಂಟೆ ಆಸಕ್ತಿಯ ಓದಿನಿಂದ ಉತ್ತಮ ಅಂಕ ಗಳಿಸಿದೆ. ಲೆಕ್ಕ ಪರಿಶೋಧಕನಾಗಲು ಸದ್ಯ ಇಂಟರ್ನ್‌ಷಿಪ್‌ ಮಾಡುತ್ತಿದ್ದೇನೆ.

–ಒ.ಶಂಕರ ಭಾಷ್ಯಂ, ಬಿ.ಕಾಂ.ನಲ್ಲಿ 5 ಚಿನ್ನದ ಪದಕ, ಕೆ.ಜಿ.ಎಫ್‌.

ಪದವಿಯ ಕೊನೆಯ ವರ್ಷದಲ್ಲೇ ಮದುವೆಯಾಯಿತು. ಪತಿ ಅರುಣ್‌ ಅವರ ಪ್ರೋತ್ಸಾಹದಿಂದ ಎಂ.ಎಸ್ಸಿ ಮಾಡಿ, ಈಗ ಬಿ.ಇಡಿ ಸಹ ಪೂರೈಸಿಕೊಂಡಿದ್ದೇನೆ.

– ಎನ್‌.ಸೌಮ್ಯ, ಬಿ.ಇಡಿಯಲ್ಲಿ 3 ಚಿನ್ನದ ಪದಕ, ಬೆಂಗಳೂರು

ಕ್ಯಾಂಪಸ್‌ ಸೆಲಕ್ಷನ್‌ ಆದ ಬಳಿಕ ಜೆಮ್ಕೊನಲ್ಲಿ ಎಂಜಿನಿಯರ್‌ ಆಗಿದ್ದೇನೆ. ಎಂ.ಎಸ್‌. ಅಥವಾ ಎಂಬಿಎ ಅಧ್ಯಯನ ಮಾಡುವ ಆಸಕ್ತಿಯೂ ಇದೆ.

– ವಿ.ವರ್ಷಿತಾ, ಬಿ.ಇ.ನಲ್ಲಿ 2 ಚಿನ್ನದ ಪದಕ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT