ಜೆಡಿಎಸ್‌–ಕಾಂಗ್ರೆಸ್ ಸರ್ಕಾರ: ದೋಸ್ತಿ ‘ಸಮನ್ವಯ’ಕ್ಕೆ ಬಿದ್ದ ಹುಳಿ

7
ಬಜೆಟ್‌ ಮಂಡನೆ: ಜೆಡಿಎಸ್‌–ಕಾಂಗ್ರೆಸ್ ನಾಯಕರ ಮಧ್ಯೆ ಭಿನ್ನಮತ

ಜೆಡಿಎಸ್‌–ಕಾಂಗ್ರೆಸ್ ಸರ್ಕಾರ: ದೋಸ್ತಿ ‘ಸಮನ್ವಯ’ಕ್ಕೆ ಬಿದ್ದ ಹುಳಿ

Published:
Updated:

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದಿರುವ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಬಜೆಟ್‌ ಮಂಡನೆ ಕುರಿತ ಭಿನ್ನಮತ, ಉಭಯ ಪಕ್ಷಗಳ ಮಧ್ಯದ ಸಮನ್ವಯಕ್ಕೆ ಹುಳಿ ಹಿಂಡಿದೆ.

ಆಪ್ತ ವಲಯದಲ್ಲಿ ಸಿದ್ದರಾಮಯ್ಯ ಭಾನುವಾರ ಆಡಿರುವ ಮಾತು ಮತ್ತು ಅದಕ್ಕೆ ಕುಮಾರಸ್ವಾಮಿ ಸೋಮವಾರ ನೀಡಿರುವ ತೀಕ್ಷ್ಣ ತಿರುಗೇಟಿನ ವೈಖರಿಯು ಇದೇ 5ರಂದು ನಿಗದಿಯಾಗಿರುವ ಬಜೆಟ್‌ ಮಂಡನೆ ಮೇಲೆ ತೂಗುಗತ್ತಿಯನ್ನು ಇಳಿಬಿಟ್ಟಿದೆ.

‘ಇದು ಸಮ್ಮಿಶ್ರ ಸರ್ಕಾರ. ಕಾಂಗ್ರೆಸ್‌ ಸರ್ಕಾರವೇ ಮಂಡಿಸಿದ ಬಜೆಟ್‌ ಇದೆ. ಅದನ್ನೇ ಮುಂದುವರಿಸಲಿ’ ಎಂಬ ಸಿದ್ದರಾಮಯ್ಯ ಮಾತಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ‘ನಾನು ಬಜೆಟ್ ಮಂಡನೆ ಮಾಡುತ್ತೇನೋ ಇಲ್ಲವೊ ಗೊತ್ತಿಲ್ಲ. ನಾನು ಯಾರ ಹಂಗಿನಲ್ಲೂ ಇಲ್ಲ. ಈ ಅಧಿಕಾರವು ಭಿಕ್ಷೆ ಅಲ್ಲ. ಈ ಸ್ಥಾನದಲ್ಲಿ ಎಷ್ಟು ದಿನ ಇರುತ್ತೇನೆ ಎಂಬುದು ಮುಖ್ಯವಲ್ಲ. ಇರುವಷ್ಟು ದಿನ ಏನು ಮಾಡಬಹುದು ಎಂಬುದು ಮುಖ್ಯ’ ಎಂದು ಹೇಳಿದ್ದಾರೆ. ಆ ಮೂಲಕ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ರೈತರ ಸಾಲ ಮನ್ನಾ ಕುರಿತು ವಿಧಾನಸೌಧದಲ್ಲಿ ಸೋಮವಾರ ನಡೆದ ಸಹಕಾರ ಬ್ಯಾಂಕ್‌ಗಳ ಪ್ರಮುಖರ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ, ‘ಲೋಕಸಭಾ ಚುನಾವಣೆ ಬಳಿಕ ಈ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿ ಎಂಬುದಾಗಿ ಕೆಲವರು ಹೇಳುತ್ತಿದ್ದಾರೆ. ಈ ಹಿಂದಿನ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಿತ್ತು. ಈಗ ಮತ್ಯಾಕೆ ಬಜೆಟ್‌ ಮಂಡನೆ ಎಂದು ಪ್ರಶ್ನಿಸುವವರೂ ಇದ್ದಾರೆ. ಆ ಬಜೆಟ್‌ ಮಂಡಿಸಿದ್ದು ಫೆಬ್ರುವರಿಯಲ್ಲಿ. ಅದಕ್ಕೆ ಆಗ ಲೇಖಾನುದಾನ ಪಡೆಯಲಾಗಿತ್ತು. ಈಗ ನೂರಕ್ಕೂ ಅಧಿಕ ಹೊಸ ಶಾಸಕರು ಬಂದಿದ್ದಾರೆ. ಅದೇ ಬಜೆಟ್‌ ಮುಂದುವರಿಸಿದರೆ ಈ ಶಾಸಕರಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ. ಅವರ ಹಕ್ಕುಚ್ಯುತಿ ಆಗುವುದಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಸಾಲ ಮನ್ನಾ ಮಾಡಿದರೆ ನನಗೆ ಕಮಿಷನ್‌ ಬರುವುದಿಲ್ಲ. ಕಮಿಷನ್‌ ಯಾರಿಗೆ ಹೋಗುತ್ತದೆ ಎಂಬುದೂ ಗೊತ್ತಿದೆ. ನಾನು ಬೇರೆಯವರ ರೀತಿ ಗದರಿಸಿ ಕೆಲಸ ಮಾಡುವುದಿಲ್ಲ. ನಾನು ದುರಂಹಕಾರಿ ಅಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕುಟುಂಬದ ರೀತಿ ಕೆಲಸ ಮಾಡುವವನು’ ಎಂದೂ ಪ್ರತಿಪಾದಿಸಿದರು.

ಕಾರ್ಯಕ್ರಮವೊಂದರಲ್ಲಿ ಸಂಜೆ ಮಾತನಾಡಿದ ಅವರು, ‘ಸಾಲಮನ್ನಾದಿಂದ ರೈತರ ಆತ್ಮಹತ್ಯೆ ನಿಲ್ಲುತ್ತದೆ ಎನ್ನುವ ನಂಬಿಕೆ ಇಲ್ಲ. ಆತ್ಮಹತ್ಯೆ ಯಾವ ಯಾವ ಕಾರಣಕ್ಕೆ ಆಗುತ್ತಿದೆ ಎನ್ನುವ ಬಗ್ಗೆ ಅಧ್ಯಯನ ನಡೆಸಬೇಕಿದೆ. ಒಂದೊಂದೇ ಸಮಸ್ಯೆ ಬಗೆಹರಿಸುತ್ತೇನೆ. 5ರಂದು ಬಜೆಟ್ ಮಂಡನೆ ಮಾಡುತ್ತೇನೆ. ಅಂದು ಎಲ್ಲರಿಗೂ ಉತ್ತರ ಸಿಗುತ್ತದೆ’ ಎಂದರು.

ಹೊನ್ನಾವರದಲ್ಲಿ ಮಾತನಾಡಿದ ಜೆಡಿಎಸ್‌ ವರಿಷ್ಠ ದೇವೇಗೌಡ, ‘ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ಸರ್ಕಾರ ಹೊಂದಾಣಿಕೆಯಿಂದ ನಡೆಯುತ್ತಿದೆ. ಕುಮಾರಸ್ವಾಮಿ ಬಜೆಟ್‌ ಮಂಡಿಸಲಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಇಲ್ಲ’ ಎಂದರು.

‘ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಬಜೆಟ್‌ ಮಂಡನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲ’ ಎಂಬ ಪ್ರಶ್ನೆಗೆ, ‘ಬೇರೆಯವರ ಸುದ್ದಿ ನಮಗ್ಯಾಕೆ?’ ಎಂದಷ್ಟೇ ಅವರು ಪ್ರತಿಕ್ರಿಯಿಸಿದರು.

ಬಜೆಟ್ ಮಂಡನೆ ವಿಷಯದಲ್ಲಿ ಅಭಿಪ್ರಾಯ ವ್ಯತ್ಯಾಸ ಇದೆ ಎಂಬುದನ್ನು ಒಪ್ಪಿಕೊಂಡಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ‘ಸಿದ್ದರಾಮಯ್ಯನವರಿಗೆ ಅಸಮಾಧಾನ ಇದೆಯೋ, ಮುಖ್ಯಮಂತ್ರಿಗೆ ಇದೆಯೋ ಅಥವಾ ನನಗೆ ಇದೆಯೋ ಎಂಬ ಬಗ್ಗೆ ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡುತ್ತೇವೆ’ ಎಂದರು.

‘ಬಜೆಟ್ ಬೇಡ ಎಂದು ಸಿದ್ದರಾಮಯ್ಯ ಹೇಳಿರುವುದು ತಪ್ಪು ಗ್ರಹಿಕೆ. ಎಲ್ಲರಿಗೂ ತಮ್ಮದೇ ಆದ ಅಭಿಪ್ರಾಯಗಳಿರುತ್ತವೆ. ಎಲ್ಲರ ಅಭಿಪ್ರಾಯಗಳು ಒಂದೇ ಆಗಿರಬೇಕು ಎಂದೇನಿಲ್ಲ’ ಎಂದೂ ಹೇಳಿದರು.

ಬೆಳಗಾವಿಯಲ್ಲಿ ಮಾತನಾಡಿರುವ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ, ‘ಬಜೆಟ್ ಮಂಡಿಸುವುದು ಕುಮಾರಸ್ವಾಮಿ ಅವರ ಹಕ್ಕು. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಘೋಷಿಸಿದ ಮಹತ್ವದ ಯೋಜನೆಗಳನ್ನು ನಿಲ್ಲಿಸಬಾರದು’ ಎಂದರು.

* ಇದು ದೇವರು ಕೊಟ್ಟಿರುವ ಅಧಿಕಾರ. ಅಷ್ಟು ಸುಲಭವಾಗಿ ಹೋಗುವುದಿಲ್ಲ – ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !