ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹14,581 ಕೋಟಿ ಹೆಚ್ಚುವರಿ ವೆಚ್ಚ!

ಲೋಕಸಭೆ ಚುನಾವಣೆ ರಹಸ್ಯ ಸೇವೆಗೆ ₹5 ಕೋಟಿ: ರೈತರ ಸಾಲಮನ್ನಾಕ್ಕೆ ₹5,241 ಕೋಟಿ
Last Updated 14 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು:ಹಿಂದಿನ ಸಾಲಿನ ಬಜೆಟ್‌ನಲ್ಲಿ ಒದಗಿಸಿದ್ದ ಅನುದಾನಕ್ಕಿಂತ ಹೆಚ್ಚುವರಿ ಹೊರೆಯಾಗಿರುವ ಬಂದಿರುವ ಖರ್ಚುಗಳಿಗಾಗಿ₹14,581 ಕೋಟಿ ಮೊತ್ತದ ಎರಡನೇ ಕಂತಿನ ಪೂರಕ ಅಂದಾಜಿಗೆ ಸರ್ಕಾರ ಒಪ್ಪಿಗೆ ಪಡೆದಿದ್ದು, ರೈತರ ಬೆಳೆ ಸಾಲಮನ್ನಾಕ್ಕೆ ₹5,241 ಕೋಟಿ ಒದಗಿಸಲಾಗಿದೆ.

ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಡಿಸಿದ ಪೂರಕ ಅಂದಾಜಿಗೆ ಎರಡೂ ಸದನಗಳು ಗುರುವಾರ ಅನುಮೋದನೆ ನೀಡಿವೆ.

ವಾಣಿಜ್ಯ ಬ್ಯಾಂಕುಗಳಲ್ಲಿನ ರೈತರ ಸಾಲಗಳ ಮನ್ನಾಕ್ಕಾಗಿ ₹2,500 ಕೋಟಿ ಒದಗಿಸಲಾಗಿದೆ. ಈ ಹಿಂದೆ ಅಪೆಕ್ಸ್‌ ಬ್ಯಾಂಕ್‌ಗೆ ಸಾಲದ ರೂಪದಲ್ಲಿ ನೀಡಲಾಗಿದ್ದ ₹2,741 ಕೋಟಿಗಳನ್ನು ಸಾಲಮನ್ನಾಕ್ಕೆ ಹೊಂದಾಣಿಕೆ ಮಾಡಲಾಗಿದೆ. ಹೀಗಾಗಿ ಈ ಮೊತ್ತವನ್ನು ಸರ್ಕಾರದ ಅನುದಾನವಾಗಿ ಪರಿವರ್ತಿಸಲಾಗಿದೆ ಎಂದು ಪೂರಕ ಅಂದಾಜು ವಿವರಿಸಿದೆ.

ಬೆಳಗಾವಿ ಅಧಿವೇಶನದಲ್ಲಿ ₹6,980 ಕೋಟಿ ಮೊತ್ತದ ಮೊದಲಕಂತಿನ ಪೂರಕ ಅಂದಾಜಿಗೆ ಅನುಮೋದನೆ ಪಡೆಯಲಾಗಿತ್ತು. ಈಗ ಎರಡನೇ ಕಂತಿನ ಪೂರಕ ಅಂದಾಜಿಗೆ ಅನುಮೋದನೆ ಪಡೆದಿರುವುದರಿಂದಾಗಿ ಬಜೆಟ್ ಅಂದಾಜಿಗಿಂತ ₹21,561 ಕೋಟಿ ಹೆಚ್ಚುವರಿ ಖರ್ಚನ್ನು ಸರ್ಕಾರ ಮಾಡಿದಂತಾಗಿದೆ.

ಚುನಾವಣೆಗೆ ₹105 ಕೋಟಿ: ಇನ್ನೆರಡು ತಿಂಗಳಿನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗಾಗಿ ₹105 ಕೋಟಿಗಳನ್ನು ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ.

ಚುನಾವಣೆ ಪೂರ್ವ ಸಿದ್ಧತೆಗಾಗಿ ₹75 ಕೋಟಿ ನೀಡಲಾಗಿದೆ. ಚುನಾವಣೆಯ ರಹಸ್ಯ ಸೇವೆಗಳ ವೆಚ್ಚ ಭರಿಸಲು ₹5 ಕೋಟಿ ಹೆಚ್ಚುವರಿಯಾಗಿ ಒದಗಿಸಲಾಗಿದೆ. ಸಾರಿಗೆ ವೆಚ್ಚಕ್ಕಾಗಿ ₹25 ಕೋಟಿ ನೀಡಲಾಗಿದೆ.

ಯಾರಿಗೆ ವೆಚ್ಚ:

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿರುವ ಬಾಬ್ತಿನಲ್ಲಿ ಕೆಎಸ್ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ವಿವಿಧ ಸಾರಿಗೆ ಸಂಸ್ಥೆಗಳಿಗೆ ₹58.86 ಕೋಟಿ ನೀಡಲಾಗಿದೆ.

*ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದ್ದರಿಂದಾಗಿ ವಿಶ್ವವಿದ್ಯಾಲಯಗಳು, ಸರ್ಕಾರಿ ಸಂಸ್ಥೆಗಳ ಸಿಬ್ಬಂದಿಗಳ ವೇತನ ಹೆಚ್ಚಳವಾಗಿದೆ. ಇದನ್ನು ಭರಿಸಲು ₹746 ಕೋಟಿ ಒದಗಿಸಲಾಗಿದೆ.

*ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮದ ಆರಂಭಕ್ಕೆ ₹13.80 ಲಕ್ಷ ನೀಡಲಾಗಿದೆ.

*ಹುಬ್ಬಳ್ಳಿ ವಿದ್ಯುತ್‌ ಸರಬರಾಜು ನಿಗಮಕ್ಕೆ ₹1,500 ಕೋಟಿ ಸಾಲವಾಗಿ ನೀಡಲು ಪೂರಕ ಅಂದಾಜು ಅವಕಾಶ ಕಲ್ಪಿಸಿದೆ.

*ಬಸವ ವಸತಿ ಯೋಜನೆ ಅನುಷ್ಠಾನಕ್ಕಾಗಿ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ₹1,000 ಕೋಟಿಯನ್ನು ಸಾಲದ ರೂಪದಲ್ಲಿ ಒದಗಿಸಲಾಗಿದೆ.

*ಅಂಬೇಡ್ಕರ್‌ ನಿವಾಸ್ ಯೋಜನೆಗೆ ಹೆಚ್ಚುವರಿಯಾಗಿ ₹500 ಕೋಟಿ ನೀಡಲಾಗಿದೆ.

ರೇವಣ್ಣ ಇಲಾಖೆಗೆ ₹50 ಲಕ್ಷ, ಡಿಕೆಶಿ ಇಲಾಖೆಗೆ ₹200 ಕೋಟಿ

ಮೊದಲ ಕಂತಿನ ಪೂರಕ ಅಂದಾಜಿನಲ್ಲಿಬಾಕಿ ಬಿಲ್ಲುಗಳ ಪಾವತಿಗಾಗಿ ₹1,979 ಕೋಟಿ ಮೊತ್ತವನ್ನು ಲೋಕೋ‍ಪಯೋಗಿ ಇಲಾಖೆಗೆ ದಕ್ಕಿಸಿಕೊಳ್ಳುವಲ್ಲಿ ಸಚಿವ ಎಚ್.ಡಿ. ರೇವಣ್ಣ ಯಶಸ್ವಿಯಾಗಿದ್ದರು. ಈ ಬಾರಿ ತದಡಿ ಬಂದರು ಅಭಿವೃದ್ಧಿಗಾಗಿ ₹50 ಲಕ್ಷ ಮಾತ್ರ ನೀಡಲಾಗಿದೆ.

ಆದರೆ, ಸರ್ಕಾರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಬಾಕಿ ಬಿಲ್ಲುಗಳ ಪಾವತಿಗಾಗಿ ₹200 ಕೋಟಿ ಹೆಚ್ಚುವರಿ ಅನುದಾನ ಪಡೆಯುವಲ್ಲಿ ಯಶ ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT