ಕಟ್ಟಡ ಕುಸಿತ ಪ್ರಕರಣ: 5 ಸಾವು, ಯುದ್ಧೋಪಾದಿಯಲ್ಲಿ ಸಾಗಿದ ಕಾರ್ಯಾಚರಣೆ

ಶನಿವಾರ, ಏಪ್ರಿಲ್ 20, 2019
32 °C

ಕಟ್ಟಡ ಕುಸಿತ ಪ್ರಕರಣ: 5 ಸಾವು, ಯುದ್ಧೋಪಾದಿಯಲ್ಲಿ ಸಾಗಿದ ಕಾರ್ಯಾಚರಣೆ

Published:
Updated:

ಧಾರವಾಡ: ನಗರದಲ್ಲಿ ಕುಸಿದು ಬಿದ್ದಿರುವ ಬಹುಮಹಡಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯು ಯುದ್ಧೋಪಾದಿಯಲ್ಲಿ ಸಾಗಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ತುಷಾರ ಗಿರಿನಾಥ ಹೇಳಿದರು.

ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ವಿಚಾರದಲ್ಲಿ ಅಧಿಕಾರಿಗಳ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಕ್ಷಣಕ್ಕೆ ಮಾನವೀಯತೆ ಆಧಾರದಲ್ಲಿ ಮೃತರ ಕುಟುಂಬಕ್ಕೆ ತಲಾ ₹ 2 ಲಕ್ಷ ರುಪಾಯಿ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಅಂತ್ಯ ಸಂಸ್ಕಾರಕ್ಕೂ ತಲಾ ₹ 5 ಸಾವಿರ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹ 1ಲಕ್ಷ ನೆರವು ನೀಡಲಾಗುವುದು. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕಟ್ಟಡದ ಮಾಲೀಕರ ಮೇಲೆ ಈಗಾಗಲೆ ದೂರು ದಾಖಲಾಗಿದೆ. ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಷ್ಟೇ ಪ್ರಭಾವಿಯಾಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಕೈಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಕಟ್ಟಡದ ಮಾಲೀಕರು ಯಾರು, ಏನು ಎಂಬುದು ನಮಗೆಲ್ಲ ಗೊತ್ತಿದೆ. ಮೃತರು ಮತ್ತು ಗಾಯಾಳುಗಳಿಗೆ ಅಗತ್ಯವಿರುವ ಹಣವನ್ನು ಅವರಿಂದ ವಸೂಲಿ ಮಾಡಲಾಗುವುದು ಎಂದೂ ಭರವಸೆ ನೀಡಿದರು.

ರಾಜ್ಯ ಗೃಹ ರಕ್ಷಕ ದಳ ಡಿಜಿಪಿ ಎಂಎನ್‌ ರೆಡ್ಡಿ ಸುದ್ದಿಗೋಷ್ಠಿ
ಪ್ರಕರಣ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಗ್ನಿಶಾಮಕ ಇಲಾಖೆ ಡಿಜಿಪಿ ಎಂ.ಎನ್‌. ರೆಡ್ಡಿ, ದುರಂತದಿಂದಾಗಿ 5 ಜನರು ಮೃತಪಟ್ಟಿದ್ದು, ಇದುವರೆಗೆ 55 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದರು.

ಇನ್ನೂ ಸುಮಾರು 20 ರಿಂದ 25 ಜನ ಸಿಲುಕಿರುವ ಸಾಧ್ಯತೆ ಇದೆ. ಸಂಪೂರ್ಣ ಕಾಂಕ್ರೀಟ್ ಮೆಟಿರಿಯಲ್ ತುಂಬಿರುವುದರಿಂದ, ಅವರನ್ನು ರಕ್ಷಿಸುವುದು ಸವಾಲಿನ ಕೆಲಸವಾಗಿದೆ. ಎನ್‌ಡಿಆರ್‌ಎಫ್‌ ನೇತೃತ್ವದಲ್ಲಿ ತಾಂತ್ರಿಕವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್‌, ಎಸ್‌ಡಿಆರ್‌ಎಫ್‌ ಡಿಐಜಿ ರವೀಕಾಂತೇಗೌಡ, ಪೊಲೀಸ್‌ ಕಮೀಷನರ್‌ ಎಂ.ಎನ್.ನಾಗರಾಜ ಉಪಸ್ಥಿತರಿದ್ದರು.

ಮೃತಪಟ್ಟವರು
1) ಸಲೀಂ ಮಕಾಂದರ್(35): ಹುಬ್ಬಳ್ಳಿ ಆನಂದನಗರ ನಿವಾಸಿ.
2) ಅಶೀತ್ ಹಿರೇಮಠ(32): ಧಾರವಾಡ ಮರಾಠಾ ಕಾಲನಿ ನಿವಾಸಿ.
3) ಮಾಬುಸಾಬ್ ರಾಯಚೂರ(48): ಹುಬ್ಬಳ್ಳಿಯ ಶಿವಶಕ್ತಿ ನಗರ ನಿವಾಸಿ.
4) ಮೆಹಬುಸಾಬ್ ದೇಸಾಯಿ(55): ಹುಬ್ಬಳ್ಳಿಯ ಆನಂದನಗರ ನಿವಾಸಿ. ಇನ್ನೊಬ್ಬ ಮೃತ ವ್ಯಕ್ತಿಯ ವಿವರ ಇನ್ನಷ್ಟೇ ತಿಳಿಯಬೇಕಿದೆ.

ಮೃತರ ಸಂಬಂಧಿಕರಿಂದ ದಾಖಲೆ ಪಡೆದುಕೊಂಡು, ಶವ ಪರೀಕ್ಷೆಯ ನಂತರ ಶವ ಹಸ್ತಾಂತರ ಮಾಡುವುದಾಗಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 6

  Sad
 • 0

  Frustrated
 • 0

  Angry

Comments:

0 comments

Write the first review for this !