ಹುಬ್ಬಳ್ಳಿಯಲ್ಲಿ ಬಂದ್ ಯಶಸ್ವಿ

7
ಪ್ರಧಾನಿ ನರೇಂದ್ರ ಮೋದಿ ಅಣಕು ಶವ ಯಾತ್ರೆ

ಹುಬ್ಬಳ್ಳಿಯಲ್ಲಿ ಬಂದ್ ಯಶಸ್ವಿ

Published:
Updated:
Deccan Herald

ಹುಬ್ಬಳ್ಳಿ: ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‌ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೋಮವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ– ಮುಂಗಟ್ಟುಗಳು, ಹೋಟೆಲ್, ಚಿತ್ರಮಂದಿರ ಸಂಪೂರ್ಣ ಬಂದ್ ಆಗಿದ್ದವು. ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಸಂಚರಿಸಿದ ಕಾರಣ ಪ್ರಯಾಣಿಕರು ಪರದಾಡಿದರು. ಆಟೊಗಳ ಸಂಖ್ಯೆಯೂ ತೀರಾ ಕಡಿಮೆ ಇತ್ತು.

ಶಾಲಾ ಕಾಲೇಜುಗಳಿಗೆ ಮೊದಲೇ ರಜೆ ಘೋಷಿಸಲಾಗಿತ್ತು. ಕೆಲ ಹೋಟೆಲ್‌ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸಿದರು. ಬ್ಯಾಂಕ್‌ಗಳು ಸೇವೆ ನೀಡಿದರೂ ಮುಂಬಾಗಿಲು ಮುಚ್ಚಿದ್ದು ಕಂಡುಬಂತು. ಗ್ರಾಹಕರ ಸಂಖ್ಯೆ ಸಹ ಕಡಿಮೆ ಇತ್ತು. ಕಲ್ಲು ತೂರಾಟ ನಡೆಸಬಹುದು ಎಂಬ ಕಾರಣಕ್ಕೆ ಕೆಲವು ಎಟಿಎಂಗಳ ಬಾಗಿಲು ಸಹ ಮುಚ್ಚಲಾಗಿತ್ತು.

ಬೆಳಿಗ್ಗೆ ಎಂಟು ಗಂಟೆಯಿಂದಲೇ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು, ಆಟೊ ರಿಕ್ಷಾ ಮಾಲೀಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಸಿಐಟಿಯು, ಎಸ್‌ಯುಸಿಐ, ಕಳಸಾ ಬಂಡೂರಿ ಹೋರಾಟ ಸಮಿತಿ ಮುಂತಾದ ಸಂಘಟನೆಗಳ ಸದಸ್ಯರು ನಗರದಲ್ಲಿ ಮೆರವಣಿಗೆ ನಡೆಸಿದರು. ಜೆಡಿಎಸ್ ಕಾರ್ಯರ್ತರು ಮಾಜಿ ಶಾಸಕ ಕೋನರೆಡ್ಡಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘದ ಸದಸ್ಯರು ನಗರದ ಹೊರ ವಲಯದ ಗಬ್ಬೂರು ತಿರುವಿನಲ್ಲಿ ಪ್ರತಿಭಟನೆ ಮಾಡಿದರು. ಜನ– ಜಂಗುಳಿ, ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಚನ್ನಮ್ಮ ವೃತ್ತದಲ್ಲಿ ಹೋರಾಟಗಾರರು ಹಾಗೂ ಪೊಲೀಸರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ.

ನಗರದ ದುರ್ಗದ ಬೈಲ್ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜನ ವಿರೋಧಿಯಾಗಿರುವ ಸರ್ಕಾರ ತೊಲಗಲೇ ಬೇಕು ಎಂದು ಆಗ್ರಹಿಸಿದರು. ಚನ್ನಮ್ಮ ವೃತ್ತಕ್ಕೆ ಬಂದ ಅವರು ಪ್ರತಿಮೆ ಎದುರು ನಿಂತು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ವಿರುದ್ಧ ಘೋಷಣೆ ಕೂಗಿದರು. ಅದೇ ಸಮಯಕ್ಕೆ ಮೆರವಣಿಗೆಯಲ್ಲಿ ಬಂದ ಜೆಡಿಎಸ್ ಕಾರ್ಯಕರ್ತರು ಸಹ ಅವರೊಂದಿಗೆ ಸೇರಿಕೊಂಡರು. ಎರಡೂ ಪಕ್ಷದ ಕಾರ್ಯಕರ್ತರು ಬೆಲೆ ಏರಿಕೆ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ, ಸಿಐಟಿಯು, ಎಸ್‌ಯುಸಿಐ ಸಂಘಟನೆಯ ಸದಸ್ಯರು ಸಿಲಿಂಡರ್‌ಗೆ ಹಾರ ಹಾಕಿ ಬೆಲೆ ಏರಿಕೆ ಖಂಡಿಸಿದರು. ಟ್ರಾಕ್ಟರ್‌ಗೆ ಹಗ್ಗ ಕಟ್ಟಿ ಎಳೆದರು. ಹುಬ್ಬಳ್ಳಿ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಅಣಕು ಶವ ಯಾತ್ರೆ ನಡೆಸಿ, ಪ್ರತಿಕೃತಿ ದಹಿಸಿದರು.

ಜೆಡಿಎಸ್ ಕಾರ್ಯಕರ್ತರು ಸಂಸದ ಪ್ರಹ್ಲಾದ ಜೋಶಿ ಅವರ ಕಚೇರಿಗೆ ಮುತ್ತಿಗೆ ಹಾಕಿದರು. ಪೊಲೀಸರು ಅಡ್ಡ ಹಾಕಿದ್ದ ಬ್ಯಾರಿಕೇಡ್ ಅನ್ನು ನೂಕಿ ಅವರು ಕಚೇರಿ ಆವರಣ ಪ್ರವೇಶಿಸಿದರು. ಆ ನಂತರ ಪೊಲೀಸರು ಎಲ್ಲರನ್ನೂ ಹೊರಗೆ ಕಳುಹಿಸಿದರು.

ಪೊಲೀಸ್ ಬಂದೋಬಸ್ತ್; ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಪೊಲೀಸ್, ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !