ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗುಂದಿದ ದುರ್ಗದ ದನಗಳ ಜಾತ್ರೆ

Last Updated 28 ಫೆಬ್ರುವರಿ 2018, 9:23 IST
ಅಕ್ಷರ ಗಾತ್ರ

ಚಿತ್ರದುರ್ಗ: ನಾಲ್ಕೈದು ವರ್ಷಗಳ ಹಿಂದೆ ಕಣ್ಣಾಯಿಸಿದಷ್ಟೂ ದೂರ ಜಾತ್ರೆಯಲ್ಲಿ ಎತ್ತ ನೋಡಿದರೂ ದನಗಳು ಕಾಣುತ್ತಿದ್ದವು. ನಡೆದಾಡಲೂ ಕೆಲವೊಮ್ಮೆ ಜಾಗ ಇರುತ್ತಿರಲಿಲ್ಲ. ಅಂತಹ ಜಾತ್ರೆ ಈ ಬಾರಿ ಕಳೆಗುಂದಿದೆ. ಅಲ್ಲಿ ಸಂಭ್ರಮವೇ ಇರಲಿಲ್ಲ... ಇದು ಕಂಡು ಬಂದಿದ್ದು ತಾಲ್ಲೂಕಿನ ಸೀಬಾರದ ಬಳಿ ವರ್ಷಕ್ಕೊಮ್ಮೆ ನಡೆಯುವ ದನಗಳ ಜಾತ್ರೆಯಲ್ಲಿ.

ಮಹಾಶಿವರಾತ್ರಿ ಹಬ್ಬದ ಆಚರಣೆ ನಂತರ ರಾಸುಗಳನ್ನು ಜಾತ್ರೆಗೆ ವ್ಯಾಪಾರಕ್ಕಾಗಿ ತರುವ ರೈತರು, ವ್ಯಾಪಾರ ಮಾಡಿ ತಮಗೆ ಬೇಕಾದ ಉತ್ತಮ ರಾಸುಗಳನ್ನು ಕೊಂಡುಕೊಳ್ಳುವ ವಾಡಿಕೆ ಅನೇಕ ವರ್ಷಗಳಿಂದ ಇಲ್ಲಿ ನಡೆದುಕೊಂಡು ಬಂದಿದೆ.

ಅತಿದೊಡ್ಡ ದನಗಳ ಜಾತ್ರೆ ಎಂದೇ ಈ ಹಿಂದೆ ತಾಲ್ಲೂಕಿನಲ್ಲಿ ಪ್ರಸಿದ್ಧಿ ಪಡೆದಿರುವ ಜಾತ್ರೆಯಲ್ಲಿ ದನಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ರೈತರ ಬಳಿ ರಾಸುಗಳಿಲ್ಲ ಎಂಬ ಮಾತು ಕೂಡ ರೈತರಿಂದಲೇ ಕೇಳಿಬರುತ್ತಿದೆ.

ರಾಷ್ಟ್ರೀಯ ಹೆದ್ದಾರಿ 4ರ ಮಾರ್ಗವಾಗಿ ಚಿತ್ರದುರ್ಗದಿಂದ ದಾವಣಗೆರೆಗೆ ತೆರಳುವ ಮಾರ್ಗ ಮಧ್ಯೆ ಸಿಗುವಂಥ ಸೀಬಾರ ಸಮೀಪದ ಎಡಭಾಗದ ವಿಶಾಲ ಪ್ರದೇಶದಲ್ಲಿ ಗುಂಪು–ಗುಂಪಾಗಿ ಎತ್ತುಗಳನ್ನು ಜಾತ್ರೆ ಅಂಗವಾಗಿ ಕಟ್ಟಲಾಗಿದೆ. ಕೊಳ್ಳುವ ಭರಾಟೆಯೂ ತಕ್ಕಮಟ್ಟಿಗೆ ಸಾಗಿದೆ.

ರಾಸುಗಳ ಸಂಖ್ಯೆ ಕ್ಷೀಣ: ದನಗಳ ಜಾತ್ರೆಯಲ್ಲಿ ದಾವಣಗೆರೆ, ಚಿತ್ರದುರ್ಗ, ಭರಮಸಾಗರ, ತುಮಕೂರು, ಮಧುಗಿರಿ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಜವಾರಿ, ನಾಟಿ, ಸೀಮೆವಾರಿ ರಾಸುಗಳು ಬಂದಿವೆ. ಪ್ರತಿ ವರ್ಷವೂ ಈ ಜಾತ್ರೆ ನೋಡಲು ನಾವು ಬರುತ್ತೇವೆ. ಮೂರು ವರ್ಷಗಳ ಹಿಂದೆ ಸುಮಾರು 3 ಸಾವಿರ ಎತ್ತುಗಳು ಬಂದಿದ್ದವು. ಆಗ ಕಾಲಿಡುವುದು ಕಷ್ಟಕರವಾಗಿತ್ತು. ಈ ಬಾರಿ ಸಾವಿರ ಕೂಡ ದಾಟಿಲ್ಲ. ಅಲ್ಲದೆ, ಪ್ರತಿ ವಾರ ಚಿತ್ರದುರ್ಗದಲ್ಲಿ ಸಂತೆ ನಡೆಯುವುದರಿಂದ ಜಾತ್ರೆಯಲ್ಲಿ ರಾಸುಗಳ ಸಂಖ್ಯೆ ಕ್ಷೀಣಿಸಿದೆ ಎನ್ನುತ್ತಾರೆ ತಾಲ್ಲೂಕಿನ ಯಳಗೋಡು ಮುದ್ದಾಪುರದ ರೈತರಾದ ಪಾಲಯ್ಯ, ಬಸವರಾಜಪ್ಪ.

ಕಳೆದ ವರ್ಷ ಜಾತ್ರೆ ಇರಲಿಲ್ಲ: ದನಗಳ ಜಾತ್ರೆಗೆ ಮುಖ್ಯವಾಗಿ ಬೇಕಾಗಿರುವುದೇ ನೀರು. ಜಿಲ್ಲೆಯಲ್ಲಿ ಕಳೆದ 2017ರಲ್ಲಿ ಬರದಿಂದಾಗಿ ನೀರಿನ ಸಮಸ್ಯೆಯಿತ್ತು. ಇಲ್ಲಿಗೆ ಬರುವ ಜನ ಮತ್ತು ಜಾನುವಾರುಗಳಿಗೆ ನೀರಿಲ್ಲದಿದ್ದರೆ ತುಂಬಾ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕಾಗಿ ದನಗಳ ಜಾತ್ರೆಯನ್ನು ನಿಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಮೇವು ಬ್ಯಾಂಕ್ ತೆರೆಯಲಾಗಿತ್ತು. ಹಿಂದಿನ ವರ್ಷ ಜಾತ್ರೆ ನಡೆಯದ ಕಾರಣ ಈ ಬಾರಿ ಎತ್ತುಗಳ ಸಂಖ್ಯೆ ಕಡಿಮೆಯಾಗಿದೆ ಎಂಬುದು ರೈತರ ಅಭಿಪ್ರಾಯ.

ಬಡ ರೈತರಿಗೆ ಎತ್ತುಗಳು ಅನಿವಾರ್ಯ. ಅವರು ಮಾತ್ರ ಕೊಳ್ಳಲು ಮುಂದಾಗುತ್ತಾರೆ. ದುಡ್ಡಿದ್ದವರು ಯಂತ್ರೋಪಕರಣಗಳ ಮೊರೆ ಹೋಗುತ್ತಾರೆ. ಜಮೀನ್ದಾರರು ಮನೆ ಮುಂದೆ ಜೋಡೆತ್ತು ಇರಲಿ ಎಂಬ ಕಾರಣಕ್ಕಾಗಿ ಕೊಂಡುಕೊಳ್ಳುವುದು ಸಹಜ. ಆದರೆ, ಸತತ ಬರದ ಹಿನ್ನೆಲೆಯಲ್ಲಿ ರಾಸುಗಳ ಪೋಷಣೆ ಸಾಧ್ಯವಾಗದೆ, ಕೆಲ ರೈತರು ತಮ್ಮ ಎತ್ತುಗಳನ್ನು ಮಾರಿದ್ದರು. ಹೀಗಾಗಿ ಈ ಬಾರಿ ಸಂಖ್ಯೆ ತುಂಬಾ ವಿರಳ ಎನ್ನುತ್ತಾರೆ ಭರಮಸಾಗರದ ರೈತರಾದ ರಾಜಪ್ಪ, ಬಸಪ್ಪ.

ಜಾತ್ರೆಯಲ್ಲಿ ತಮಗೆ ಬೇಕಾದ ಜಾನುವಾರು ಕೊಂಡುಕೊಳ್ಳುವ ಅವಕಾಶ ಇರುತ್ತದೆ. ವ್ಯಾಪಾರಸ್ಥರ ಬಳಿ ಕೊಳ್ಳುವುದಕ್ಕಿಂತ ನೇರವಾಗಿ ರೈತರ ಬಳಿ ಕೊಂಡರೆ ₹ 5 ಸಾವಿರ ಉಳಿಯುತ್ತದೆ ಎಂದು ಕೆಲ ರೈತರು ಅನಿಸಿಕೆ ವ್ಯಕ್ತಪಡಿಸಿದರು. ದನಗಳ ಜಾತ್ರೆಯಲ್ಲಿ ವ್ಯಾಪಾರ ಆಗದಿದ್ದರೆ, ಏಪ್ರಿಲ್‍ನಲ್ಲಿ ಜಗಳೂರು ತಾಲ್ಲೂಕಿನ ಕಲ್ಲೇದೇವರ ಪುರದಲ್ಲಿ ನಡೆಯುವ ಜಾತ್ರೆವರೆಗೂ ಕಾಯಬೇಕು. ಅಲ್ಲಿಯವರೆಗೂ ದನಗಳ ಪೋಷಣೆಗೆ ₹ 10 ಸಾವಿರಕ್ಕಿಂತ ಹೆಚ್ಚು ಖರ್ಚಾಗಲಿದೆ ಎಂದು ವ್ಯಾಪಾರಸ್ಥರು ಹೇಳಿದರು.

ವ್ಯಾಪಾರ ಕುಂಠಿತ

ಜಾತ್ರೆಯಲ್ಲಿ ವ್ಯಾಪಾರಕ್ಕಾಗಿ ಬಂದು ಈಗಾಗಲೇ ಹತ್ತು ದಿನಗಳಾಗಿವೆ. ಎತ್ತುಗಳ ಸಂಖ್ಯೆಯಷ್ಟೇ ಅಲ್ಲ; ಜನರ ಸಂಖ್ಯೆಯೂ ಕ್ಷೀಣಿಸಿದೆ. ಹೀಗಾಗಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ನಡೆದಿಲ್ಲ ಎನ್ನುತ್ತಾರೆ ಹೋಟೆಲ್ ಹಾಕಿಕೊಂಡಿದ್ದ ಸೀಬಾರ ಗುತ್ತಿನಾಡು ಗ್ರಾಮಸ್ಥರಾದ ಮುರುಘೇಶ್, ಜಗದೀಶ್.

ಬಿಸಿಲಿನ ತಾಪಕ್ಕೆ ಜನತೆ ದಣಿವಾರಿಸಿಕೊಳ್ಳಲು ಕಬ್ಬಿನ ಹಾಲು ಮಾರಾಟಗಾರರು ಹಾಗೂ ಹೊರಭಾಗದಲ್ಲಿ ಎತ್ತುಗಳಿಗೆ ಕಟ್ಟಲು ಉಪಯೋಗಿಸುವ ಅನೇಕ ಪರಿಕರಗಳನ್ನು ಮಾರುವವರಿದ್ದರೂ ಅಲ್ಲಿಯೂ ವ್ಯಾಪಾರವಿಲ್ಲದೆ ಕಂಗಾಲಾಗಿದ್ದರು.

* * 

ನಿಗದಿತ ಪ್ರದೇಶ ಹೊರತು ಪಡಿಸಿ ಹೊರ ಭಾಗದಲ್ಲೂ ಎತ್ತುಗಳನ್ನು ಸಾಲಾಗಿ ಕಟ್ಟಲಾಗುತ್ತಿತ್ತು. ಈ ಬಾರಿ ಅಂತಹ ವಾತಾವರಣವಿಲ್ಲ.  
ರಮೇಶ್,  ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT