ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆಗೆ ಬಸ್‌: 30 ಸಾವು

ಕರಾಳ ಶನಿವಾರ * ಮೃತಪಟ್ಟವರಲ್ಲಿ ಏಳು ಮಕ್ಕಳು * 15 ಮಹಿಳೆಯರು
Last Updated 24 ನವೆಂಬರ್ 2018, 20:46 IST
ಅಕ್ಷರ ಗಾತ್ರ

ಮಂಡ್ಯ: ‘ರಾಜಕುಮಾರ‌’ ಹೆಸರಿನ ಯಮರೂಪಿ ಬಸ್‌ ಶನಿವಾರ ಪಾಂಡವಪುರ ಪಟ್ಟಣ ಬಿಟ್ಟು ಕೇವಲ 45 ನಿಮಿಷವಾಗಿತ್ತು. ಇನ್ನು ನಾಲ್ಕೈದು ನಿಮಿಷದಲ್ಲಿ ವದೇಸಮುದ್ರ ಗ್ರಾಮ ತಲುಪಬೇಕಿದ್ದ ಬಸ್‌, ಕನಗನಮರಡಿ ಗ್ರಾಮದ ಬಳಿಯ ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿತ್ತು. ಕಣ್ಣು ಮಿಟುಕಿಸುವುದರಲ್ಲಿ 30 ಮಂದಿ ಜಲಸಮಾಧಿಯಾದರು.

ಬಸ್‌ ವದೇಸಮುದ್ರ ಗ್ರಾಮ ತಲುಪಿದ್ದರೆ ಅರ್ಧದಷ್ಟು ಜನರು ಕೆಳಗಿಳಿಯುತ್ತಿದ್ದರು. ಆದರೆ ಕನಗನಮರಡಿ ಹಾಗೂ ಕುರಹಟ್ಟಿ ಗ್ರಾಮದ ಗೇಟ್‌ನ ಮಧ್ಯೆ ಯಮರಾಯ ಕಾದು ಕುಳಿತಿದ್ದ. ಬಸ್‌ ನೀರಿನೊಳಗೆ ಉರುಳುವುದಕ್ಕೆ ಮೊದಲೇ ಚಾಲಕ, ನಿರ್ವಾಹಕ ಜಿಗಿದು ಜೀವ ಉಳಿಸಿಕೊಂಡಿದ್ದಾರೆ. ಚೆನ್ನಾಗಿ ಈಜು ಅರಿತಿದ್ದ 26 ವರ್ಷದ ಗಿರೀಶ್‌, ಬಸ್‌ ನೀರಿನೊಳಗೆ ಬಿದ್ದೊಡನೆ ಕಿಟಕಿ ಒಡೆದು ಹೊರಬಂದಿದ್ದಾರೆ. ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ 13 ವರ್ಷದ ರೋಹಿತ್‌ ಹೊರ ಬರಲು ಯತ್ನಿಸುತ್ತಿರುವುದನ್ನು ಕಂಡು, ಗಿರೀಶ್‌ ರಕ್ಷಿಸಿದ್ದಾರೆ.

ಒಟ್ಟು ಎಂಟು ಪುರುಷರು, 15 ಮಹಿಳೆಯರು, ಏಳು ಮಕ್ಕಳು ಮೃತಪಟ್ಟಿದ್ದಾರೆ. ಇವರಲ್ಲಿ ಎಂಟು ಮಂದಿ ವದೇಸಮುದ್ರ ನಿವಾಸಿಗಳು. ಉಳಿದವರು, ಚಿಕ್ಕಮರಳಿ, ಕೋಡಿಶೆಟ್ಟಿಪುರ, ಡಾಮಡಹಳ್ಳಿ, ಚಿಕ್ಕಕೊಪ್ಪಲು, ಕೆ.ಆರ್‌.ಪೇಟೆ ತಾಲ್ಲೂಕಿನ ತೆಂಡೇಕೆರೆ, ಬೂಕನಕೆರೆ ಗ್ರಾಮದವರು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವದೇಸಮುದ್ರ ಗ್ರಾಮದ ಕೆಲ ರೈತರು, ಬಸ್‌ ನಾಲೆಗೆ ಉರುಳಿದ್ದನ್ನು ಕಂಡು ಸ್ಥಳಕ್ಕೆ ಧಾವಿಸಿ ರಕ್ಷಣೆಗೆ ಯತ್ನಿಸಿದರು. ತುಂಬುಗಾಲುವೆಯಲ್ಲಿ ಬಸ್‌ ಮುಳುಗಿ ಮೇಲೆ ನಾಲ್ಕು ಅಡಿ ನೀರು ಹರಿಯುತ್ತಿದ್ದ ಕಾರಣ ರಕ್ಷಣೆ ಸಾಧ್ಯವಾಗಲಿಲ್ಲ. ಆದರೂ ಮಗುವೊಂದನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು. ಆದರೆ ಆ ಮಗು ಬದುಕುಳಿಯಲಿಲ್ಲ.

‘ಇಳಿಜಾರಿನಲ್ಲಿ ಬಸ್‌ ವೇಗವಾಗಿ ಬರುತ್ತಿತ್ತು. ನೇರವಾಗಿ ಕಾಲುವೆಯೊಳಗೆ ಇಳಿಯಿತು. ಏನಾಯಿತು ಎಂಬುದೇ ತಿಳಿಯಲಿಲ್ಲ. ತಕ್ಷಣ ಕಿಟಕಿಯಿಂದ ಹೊರಬಂದೆ. ಅಣ್ಣನೊಬ್ಬ ಬಂದು ಎಳೆದುಕೊಂಡ. ಬಸ್‌ನಲ್ಲಿ ಜನರು ಕಾಪಾಡಿ, ಕಾಪಾಡಿ ಎಂದು ಕಿರುಚುತ್ತಿದ್ದರು. ಭಯದಿಂದ ಮನೆಗೆ ಓಡಿ ಹೋದೆ’ ಎಂದು ಆತಂಕಕ್ಕೊಳಗಾಗಿದ್ದ ಬಾಲಕ ರೋಹಿತ್‌ ಹೇಳಿದ.

ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್‌ ನೇತೃತ್ವದಲ್ಲಿ 30 ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿತು.

ಚಾಲಕ ಶಿವಪ್ಪ: ಬಸ್‌ ಚಾಲಕನನ್ನು ಮಂಡ್ಯ ತಾಲ್ಲೂಕು, ಹೊಳಲು ಗ್ರಾಮದ ಶಿವಪ್ಪ ಎಂದು ಗುರುತಿಸಲಾಗಿದೆ. ಆತ ತಲೆಮರೆಸಿಕೊಂಡಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

ಪೊಲೀಸರ ಎರಡು ತಂಡ ರಚಿಸಲಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ತಿಳಿಸಿದರು.

ಚಾಲಕನ ನಿರ್ಲಕ್ಷ್ಯ: ಆರೋಪ

ರಸ್ತೆಗೂ, ನಾಲೆಗೂ 30 ಅಡಿ ಅಂತರವಿತ್ತು. ಸಮತಟ್ಟಾದ ಜಾಗ, ಅಪಘಾತ ನಡೆಯುವಂತಹ ಅಪಾಯಕಾರಿ ಸ್ಥಳವೂ ಅಲ್ಲ. ಬ್ರೇಕ್‌, ಸ್ಟೇರಿಂಗ್‌ ಎಲ್ಲವೂ ಸುಸ್ಥಿತಿಯಲ್ಲಿವೆ. ಹೀಗಾಗಿ ಅಪಘಾತಕ್ಕೆ ಚಾಲಕನ ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

₹ 5 ಲಕ್ಷ ಪರಿಹಾರ

ಮೃತರ ಕುಟುಂಬಗಳ ಸದಸ್ಯರಿಗೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗುವುದು. ರಾಜ್ಯದಾದ್ಯಂತ ಖಾಸಗಿ ಬಸ್‌ಗಳ ಚಾಲನೆಗೆ ಕಡಿವಾಣ ಹಾಕಲಾ ಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಚಾಲಕನ ನಿರ್ಲಕ್ಷ್ಯ: ರಸ್ತೆಗೂ, ನಾಲೆಗೂ 30 ಅಡಿ ಅಂತರವಿತ್ತು. ಸಮತಟ್ಟಾದ ಜಾಗ, ಅಪಘಾತ ನಡೆಯುವಂತಹ ಅಪಾಯಕಾರಿ ಸ್ಥಳವೂ ಅಲ್ಲ. ಬ್ರೇಕ್‌, ಸ್ಟೇರಿಂಗ್‌ ಎಲ್ಲವೂ ಸುಸ್ಥಿತಿಯಲ್ಲಿವೆ. ಹೀಗಾಗಿ ಅಪಘಾತಕ್ಕೆ ಚಾಲಕನ ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಶನಿ ಕತೆ ಕೇಳಲು ಹೊರಟಿದ್ದರು...

ವದೇಸಮುದ್ರದಲ್ಲಿ ಶನಿವಾರ ರಾತ್ರಿ ನಡೆಯಬೇಕಿದ್ದ ಶನಿಮಹಾರಾಜನ ಕತೆ ಕೇಳಲು ಹೊರಟಿದ್ದ ಒಂದೇ ಕುಟುಂಬದ ಆರು ಜನರು ಮೃತಪಟ್ಟಿದ್ದಾರೆ. ಅದರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. ‘ನಾನು, ಪತ್ನಿ, ಮೊಮ್ಮಗಳು ಬೈಕ್‌ನಲ್ಲಿ ಬರಬೇಕಾಗಿತ್ತು. ಮೈಸೂರಿನಲ್ಲಿ ಸಂಬಂಧಿಕರು ತೀರಿಕೊಂಡ ಕಾರಣ ನಾನು ಅಂತ್ಯಸಂಸ್ಕಾರಕ್ಕೆ ತೆರಳಿದ್ದೆ. ಮನೆಯವರೆಲ್ಲಾ ಬಸ್‌ನಲ್ಲಿ ಹೊರಟರು. ನಾನು ಮೈಸೂರಿನಿಂದ ವದೇ ಸಮುದ್ರಕ್ಕೆ ಹೊರಟಿದ್ದೆ. ಬಂದು ನೋಡಿದರೆ ಪತ್ನಿ, ಇಬ್ಬರು ಮೊಮ್ಮಕ್ಕಳೂ ಇಲ್ಲ’ ಎಂದು ಮೃತ ಮಂಜುಳಾ (55) ಪತಿ ನಾಗರಾಜ್‌ ಕಣ್ಣೀರಾದರು. ನಾಗರಾಜ್‌ ಸೋದರಿ, ಆಕೆಯ ಪುತ್ರಿ ಹಾಗೂ ಸೋದರ ಸಂಬಂಧಿ ಕೂಡ ಜಲಸಮಾಧಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT