ಶನಿದೇವರ ಕಥೆ ಕೇಳಲು ಹೋದವರ ದುರಂತಗಾಥೆ

7
ವದೇಸಮುದ್ರ ಗ್ರಾಮದಲ್ಲಿ ಶನಿವಾರ ಸಂಜೆ ನಡೆಯಬೇಕಿದ್ದ ಕಥೆ

ಶನಿದೇವರ ಕಥೆ ಕೇಳಲು ಹೋದವರ ದುರಂತಗಾಥೆ

Published:
Updated:

ಮಂಡ್ಯ: ‘ಇಂದು ಶನಿವಾರ. ಸ್ವಾಮಿ ಶನೇಶ್ವರನ ಕಥೆ ಕೇಳಲು ಹೋಗಿದ್ದಕ್ಕೆ ಆತನೇ ಕರೆದುಕೊಂಡು ಬಿಟ್ಟ...’ ಎಂದು ಡಾಮರಹಳ್ಳಿಯ ಗ್ರಾಮಸ್ಥರೊಬ್ಬರು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಗ್ರಾಮದ ಡಿ.ಎ.ನಾಗರಾಜು ಕುಟುಂಬದ 6 ಮಂದಿ ಸದಸ್ಯರು ವದೇಸಮುದ್ರ ಗ್ರಾಮದಲ್ಲಿ ಶನಿವಾರ ಸಂಜೆ ನಡೆಯಬೇಕಿದ್ದ ‘ಶನಿದೇವರ ಕಥೆ’ ಕೇಳಲು ಹೋಗುತ್ತಿದ್ದರು. ಆದರೆ, ಬಸ್‌ ದುರಂತದಲ್ಲಿ ನೀರಿನಲ್ಲಿ ಸಿಲುಕಿ ಮೃತಪಟ್ಟರು.

ನಾಗರಾಜು ಅವರು ಒಂದುಕಡೆ ಸುಮ್ಮನೇ ಕುಳಿತು ಮರವೊಂದನ್ನು ದಿಟ್ಟಿಸುತ್ತಾ ಕಣ್ಣೀರು ಸುರಿಸುತ್ತಿದ್ದರು. ಇವರ ಪತ್ನಿ ಮಂಜುಳಾ (54), ಮಗಳ ಮಗಳು ಅನುಷಾ (17), ಮಗನ ಮಗಳು ಪ್ರೇಕ್ಷಾ (2), ತಮ್ಮನ ಮಗಳು ರಾಧಾ (30), ದೊಡ್ಡಪ್ಪನ ಮಗಳು ಕಮಲಾ (60) ಯಮಸ್ವರೂಪಿ ಈ ಬಸ್‌ ಹತ್ತಿದ್ದರು.

ಒಂದೊಂದೇ ಮೃತದೇಹ ಮೇಲಕ್ಕೆ ಎತ್ತುತ್ತಿದ್ದಂತೆ ಕುಟುಂಬದವರು, ಗ್ರಾಮದವರು ಜನರ ನೂಕುನುಗ್ಗಲಿನ ಮಧ್ಯೆ ಇಣುಕಿ ನೋಡುತ್ತಿದ್ದರು. ತಮ್ಮ ಬಂಧುಗಳ ಮೃತದೇಹ ದಡಕ್ಕೆ ತಂದ ಮೇಲಂತೂ ಗೋಳಾಟ ಇಮ್ಮಡಿಗೊಳ್ಳುತ್ತಿತ್ತು.

ಮಗಳನ್ನು ನೋಡಬೇಕು: ಗುಡುಗುನಹಳ್ಳಿಯಿಂದ ಬರುತ್ತಿದ್ದ ರಾಧಾ ಹಾಗೂ ಅವರ ಪುತ್ರಿ ಲಿಖಿತ (7) ಅವರಿಗಾಗಿ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ರಾಧಾ ಅವರ ಅತ್ತೆ ಹಾಗೂ ತಾಯಿ ಇಬ್ಬರೂ ಕಾರೊಂದರ ಮುಂಭಾಗದ ಮೇಲೆ ತಲೆಚಚ್ಚಿಕೊಂಡು ಕಣ್ಣೀರು ಸುರಿಸಿದರು.

‘ಶನಿದೇವರ ಕಥೆ ಕೇಳಲು ಇವರು ವದೇಸಮುದ್ರಕ್ಕೆ ಹೋಗುತ್ತೇನೆ ಎಂದರು. ದೇವರ ಕಥೆ ಬೇಡ ಎನ್ನಲಿಲ್ಲ. ಆದರೆ, ತನ್ನ ಕಥೆ ಕೇಳಲು ಬಂದವರನ್ನೇ ದೇವರು ತನ್ನ ಬಳಿ ಕರೆದುಕೊಂಡುಬಿಟ್ಟ’ ಎಂದು ಅವರು ಮರುಗುತ್ತಿದ್ದ ದೃಶ್ಯ ಸೇರಿದ್ದ ಜನರ ಕಣ್ಣಾಲಿಗಳನ್ನು ಒದ್ದೆಗೊಳಿಸಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !