ಬಸ್‌ ಶೆಲ್ಟರ್‌ನಲ್ಲಿ ವೈ–ಫೈ, ಕೆಫೆಟೇರಿಯಾ!

7
ಬೆಳಗಾವಿಯ ಆರ್‌ಪಿಡಿ ಕ್ರಾಸ್‌ನಲ್ಲಿ ನಿರ್ಮಾಣ, ಉದ್ಘಾಟನೆ ಇಂದು

ಬಸ್‌ ಶೆಲ್ಟರ್‌ನಲ್ಲಿ ವೈ–ಫೈ, ಕೆಫೆಟೇರಿಯಾ!

Published:
Updated:
Deccan Herald

ಬೆಳಗಾವಿ: ದೊಡ್ಡ ಬಸ್‌ ನಿಲ್ದಾಣಗಳು, ರೈಲು ನಿಲ್ದಾಣಗಳಲ್ಲಿ ವೈ–ಫೈ, ಕೆಫೆಟೇರಿಯಾ ಇರುವುದನ್ನು ನೋಡಿರಬಹುದು; ಕೇಳಿರಬಹುದು. ಆದರೆ, ಬಡಾವಣೆಗಳಲ್ಲಿರುವ ಬಸ್‌ ಶೆಲ್ಟರ್‌ನಲ್ಲಿ ಈ ವ್ಯವಸ್ಥೆಗಳಿರುವುದನ್ನು ಕಂಡಿದ್ದೀರಾ?

ಇಂಥದೊಂದು ಅತ್ಯಾಧುನಿಕ ತಂಗುದಾಣವನ್ನು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಇಲ್ಲಿನ ತಿಲಕವಾಡಿಯ ಆರ್‌ಪಿಡಿ ವೃತ್ತದಲ್ಲಿ ಕಟ್ಟಿಸಿದ್ದಾರೆ. ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ನ. 12ರ ಸಂಜೆ 6.15ಕ್ಕೆ ನೆರವೇರಿಸಲಿದ್ದಾರೆ.

‘ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿರುವ ಈ ನಿಲ್ದಾಣದೊಂದಿಗೆ ಕೆಪೆಟೆರಿಯಾ ನಿರ್ಮಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದಕ್ಕಾಗಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ₹ 9.5 ಲಕ್ಷ ವೆಚ್ಚ ಮಾಡಲಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕ ವಿಕ್ರಮ್ ಬಾತ್ರಾ ಬಸ್ ನಿಲ್ದಾಣ ಎಂದು ಹೆಸರಿಡಲಾಗಿದೆ’ ಎಂದು ಅಭಯ ಪತ್ರಕರ್ತರಿಗೆ ತಿಳಿಸಿದರು.

‘ಏಕಕಾಲಕ್ಕೆ 40 ಮಂದಿ ಲಾಗಿನ್ ಆಗಿ ಉಚಿತವಾಗಿ ವೈ–ಫೈ ಪಡೆಯಬಹುದು. ಒಬ್ಬರು ಎಷ್ಟು ಜಿಬಿಯಷ್ಟು ಇಂಟರ್‌ನೆಟ್‌ ಪಡೆಯಬಹುದು ಎನ್ನುವುದನ್ನು ಶೀಘ್ರವೇ ನಿರ್ಧರಿಸಲಾಗುವುದು. ಶೆಲ್ಟರ್‌ನಲ್ಲಿ 2 ಎಲ್‌ಇಡಿ ಟಿವಿ ಅಳವಡಿಕೆ ಮಾಡಲಾಗುವುದು. ಪ್ರಚಲಿತ ವಿದ್ಯಮಾನಗಳ ಮಾಹಿತಿ ಒದಗಿಸಲಾಗುವುದು. ಇನ್‌ಕೇಬಲ್ ಸಂಸ್ಥೆಯು ಉಚಿತವಾಗಿ ಕೇಬಲ್ ವ್ಯವಸ್ಥೆ ಮಾಡಲಿದೆ. ಮನರಂಜನೆ ಕಾರ್ಯಕ್ರಮಗಳಿಗಿಂತ ಸುದ್ದಿಗಳು ಹಾಗೂ ಈ ಭಾಗದ ಪರಂಪರೆ ಸಾರುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು. ಕೆಫೆಟೇರಿಯಾದಲ್ಲಿ ಇಬ್ಬರು ಕೆಲಸ ಮಾಡಲಿದ್ದಾರೆ. ಇದರಿಂದ ಉದ್ಯೋಗ ಸೃಷ್ಟಿಗೂ ಆದ್ಯತೆ ನೀಡಿದಂತಾಗಿದೆ. ಇಂಥ ಬಸ್‌ ಶೆಲ್ಟರ್ ದೇಶದಲ್ಲಿಯೇ ಮೊದಲನೆಯದು ಎನ್ನಬಹುದು’ ಎಂದು ಹೇಳಿದರು.

ಜನರನ್ನು ಆಕರ್ಷಿಸಲು ರಾತ್ರಿ ವೇಳೆ, ವಿದ್ಯುತ್‌ ದೀಪಾಲಂಕಾರವೂ ಇಲ್ಲಿರುತ್ತದೆ. ಏಕಕಾಲಕ್ಕೆ 20 ಮಂದಿ ಕುಳಿತುಕೊಳ್ಳಬಹುದು. 40ರಿಂದ 50 ಮಂದಿ ನಿಲ್ಲಬಹುದಾಗಿದೆ.

‘ಇಲ್ಲಿರುವ ಕೆಫೆಗೆ ತಿಂಗಳಿಗೆ ₹ 1ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ. ಈ ಮೊತ್ತ ಲೋಕೋಪಯೋಗಿ ಇಲಾಖೆಗೆ ಹೋಗಲಿದೆ. ಇಲ್ಲಿ ಕೈಗೆಟುಕುವ ದರದಲ್ಲಿ ಕಾಫಿ, ಟೀ ಮತ್ತು ಆಹಾರ ಪದಾರ್ಥ ದೊರೆಯುತ್ತದೆ. ತಂಬಾಕು ಉತ್ಪನ್ನಗಳನ್ನು ಮಾರದಂತೆ ಸೂಚಿಸಲಾಗಿದೆ. ಕೆಫೆ ನಡೆಸುವವರೇ ಶೆಲ್ಟರ್ ನಿರ್ವಹಿಸುತ್ತರೆ. ಜಾಹೀರಾತು ಫಲಕ ಅಳವಡಿಕೆಗೆ ವ್ಯವಸ್ಥೆ ಮಾಡಲಾಗಿದೆ. ಅದರಿಂದ ಬರುವ ಆದಾಯ ಪಾಲಿಕೆಗೆ ಸೇರುತ್ತದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !