ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿಂಗ್‌’ ಬಿಟ್ಟು ‘ಕಿಂಗ್‌ ಮೇಕರ್‌’ ಆಗ್ಬುಟ್ರಾ?

ನನಗೆ ವಾಚ್‌ ಕಟ್ಟುತ್ತಿರುವ ಫೋಟೊ ಇದೆಯೇ: ಸಿದ್ದರಾಮಯ್ಯ ಪ್ರಶ್ನೆ
Last Updated 8 ಮೇ 2018, 13:57 IST
ಅಕ್ಷರ ಗಾತ್ರ

ಮೈಸೂರು: ‘ಇಷ್ಟು ದಿನ ಕಿಂಗ್‌– ಕಿಂಗ್‌ ಎಂದು ಹೇಳಿಕೊಂಡು ಓಡಾಡುತ್ತಿದ್ದ ಕುಮಾರಸ್ವಾಮಿ ಈಗ ಕಿಂಗ್‌ ಅಲ್ವಾ? ಮತ್ತೆ ಕಿಂಗ್‌ ಮೇಕರ್‌ ಆಗ್ಬುಟ್ರಾ‌’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸೋಮವಾರ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿ– ಮುಖ್ಯಮಂತ್ರಿ ಎಂದು ಯಡಿಯೂರಪ್ಪ ನಿತ್ಯ ಕನವರಿಸುತ್ತಿದ್ದಾರೆ. ಯಾರು ಏನೇ ಹೇಳಿದರೂ ಗೆಲ್ಲುವುದು ನಾವೇ. ಸ್ಪಷ್ಟ ಬಹುಮತ ನಮಗೆ ಸಿಗಲಿದೆ. ನಾನೇ ಸೇನಾಧಿಪತಿ, ನಾನೇ ಮುಖ್ಯಮಂತ್ರಿ. ಯುದ್ಧದಲ್ಲಿ ಸೇನಾಧಿಪತಿ ಮುನ್ನುಗ್ಗಿದರೆ ಸೈನಿಕರು ಧೈರ್ಯದಿಂದ ಜೊತೆಗೆ ಬರುತ್ತಾರೆ’ ಎಂದರು.‌

‘ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಸಿದ್ದರಾಮಯ್ಯನ ವರ್ಚಸ್ಸು ಕಂಡು ಭಯದಿಂದ ಈ ರೀತಿ ಮಾತನಾಡುತ್ತಿ ದ್ದಾರೆ. ಪದೇಪದೇ ನನ್ನ ಹೆಸರು ಪ್ರಚಾರ ಮಾಡುತ್ತಿರುವುದಕ್ಕೆ ನನಗೂ ಒಂಥರಾ ಖುಷಿ’ ಎಂದರು.

‘ಒಬ್ಬ ಪ್ರಧಾನಿ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು. ಅವರ ನಾಲಿಗೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಹಿಂದಿನ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಮನಮೋಹನ್‌ ಸಿಂಗ್‌ ಈ ರೀತಿ ಮಾತ ನಾಡುತ್ತಿದ್ದರೇ’ ಎಂದು ಕೇಳಿದರು.

ಮತ್ತೆ ವಾಚ್‌ ವಿಚಾರ ಪ್ರಸ್ತಾಪವಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ‘ಉದ್ಯಮಿ ವಿಜಯ್‌ ಈಶ್ವರನ್‌ ಯಾರು ಎಂಬುದೇ ನನಗೆ ಗೊತ್ತಿಲ್ಲ. ಆ ಫೋಟೊದಲ್ಲಿ ಆತ ನನಗೆ ವಾಚ್‌ ಕಟ್ಟುವುದು ಇದೆಯೇ? ಮೋದಿ, ಅಮಿತ್‌ ಶಾ ಸುಳ್ಳು ಹೇಳಿದಷ್ಟೂ ಕಾಂಗ್ರೆಸ್‌ ಅಲೆ ಹೆಚ್ಚುತ್ತದೆ. ನೂರು ಸುಳ್ಳುಗಳಿಗೆ ನಾನು ನೂರು ಬಾರಿ ಉತ್ತರ ಕೊಡುವುದಿಲ್ಲ. ನನ್ನದು ಒಂದೇ ಉತ್ತರ’ ಎಂದರು.

‘ನಾನು ವಾಚ್‌ ಕಟ್ಟಿಕೊಂಡಿದ್ದು ನಿಜ. ಈ ಬಗ್ಗೆ ಸುಳ್ಳು ಹೇಳಿದ್ದೇನೆಯೇ? ಡಾ.ವರ್ಮ ಎಂಬುವರು ನನಗೆ ವಾಚ್‌ ಕೊಟ್ಟಿದ್ದರು. ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪ್ರಮಾಣಪತ್ರ ಕೂಡ ಸಲ್ಲಿಸಿದ್ದಾರೆ. ದುಬೈನಲ್ಲಿ ವಾಚ್‌ ಖರೀದಿಸಿದ್ದಕ್ಕೆ ರಸೀದಿ ಕೂಡ ನೀಡಿದ್ದಾರೆ’ ಎಂದು ಹೇಳಿದರು.

‘ಏನಾದರೂ ಮಾಡಿ ಗೆಲ್ಲಲು ಬಿಜೆಪಿಯವರು ಕೊನೆಯ ಯತ್ನ ನಡೆಸುತ್ತಿದ್ದಾರೆ. ಏನಾದರೂ ಸುಳ್ಳು ಹೇಳಿದರೆ ನಡೆಯುತ್ತಾ ಎಂಬ ಚಿಂತೆಯಲ್ಲಿದ್ದಾರೆ’ ಎಂದು ಲೇವಡಿ ಮಾಡಿದರು.

‘ಸೋಲಿನ ಭಯದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಜೆಡಿಎಸ್‌ನವರು ಹಲ್ಲೆ ನಡೆಸುತ್ತಿದ್ದಾರೆ. ಕೈಲಾಗದವರು ಮೈ ಪರಚಿಕೊಂಡರು ಎಂಬ ಗಾದೆ ಇದೆ. ನಟ ದರ್ಶನ್‌ ಪ್ರಚಾರ ನಡೆಸಿದರೆ ಅವರಿಗೇನು ಕಷ್ಟ? ಕಲ್ಲು ಎಸೆಯುವುದು ಏಕೆ’ ಎಂದು ಪ್ರಶ್ನಿಸಿದರು.

ಸುದೀಪ್‌ ಪ್ರಚಾರ: ಕ್ರಿಕೆಟ್‌ ಟೂರ್ನಿ ಉದ್ಘಾಟನೆಗೆ ಆಹ್ವಾನ ಪತ್ರಿಕೆ ನೀಡಲು ಬಂದಾಗ ಮೇ 9ರಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡುವುದಾಗಿ ನಟ ಸುದೀಪ್‌ ಹೇಳಿದ್ದರು. ಆಮೇಲೆ ಅವರ ಜೊತೆ ನಾನು ಮಾತನಾಡಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT