ಬುಧವಾರ, ಏಪ್ರಿಲ್ 8, 2020
19 °C
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಹಕಾರ ಸಂಸ್ಥೆ

ಚಿಕ್ಕಮಗಳೂರು: ರಸ್ತೆಗಿಳಿಯದ ‘ಸಹಕಾರ ಸಾರಿಗೆ’ ಬಸ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು/ಕೊಪ್ಪ: ಮಲೆನಾಡಿನಲ್ಲಿ ಮನೆಮಾತಾಗಿರುವ ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸಹಕಾರ ಸಾರಿಗೆ ಬಸ್ಸುಗಳು ಭಾನುವಾರ ರಸ್ತೆಗಿಳಿಯಲಿಲ್ಲ. ಬಸ್ಸುಗಳಿಲ್ಲದೇ ಕೆಲವು ಕಡೆ ತೊಂದರೆಯಾಯಿತು.

ಆಡಳಿತ ಮಂಡಳಿಯು ಸಂಸ್ಥೆಯ ಸಿಬ್ಬಂದಿ ಮತ್ತು ಸಾರ್ವಜನಿಕರ ಜೊತೆ ಭಾನುವಾರ ಸಮಾಲೋಚನಾ ಸಭೆ ನಡೆಸಿದೆ. ರಾಜ್ಯ ಸರ್ಕಾರವು ಬೇಡಿಕೆಗೆ ಸ್ಪಂದಿಸುವವರಗೆ ತಹಶೀಲ್ದಾರ್‌ ಕಚೇರಿ ಮುಂದೆ ಧರಣಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಇಂಧನ ದರ, ವಿಮೆ, ವಾಹನ ತೆರಿಗೆ, ಬಿಡಿ ಭಾಗಗಳ ದರಗಳ ಹೆಚ್ಚಳದಿಂದಾಗಿ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿಗೆನೀಡುವ ಸವಲತ್ತುಗಳನ್ನು ಸಹಕಾರ ಸಾರಿಗೆ ಸಂಸ್ಥೆಗೂ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಸ್ಥೆ ಈಚೆಗೆ ಮನವಿ ಸಲ್ಲಿಸಿತ್ತು.

ಮನವಿಗೆ ಯಡಿಯೂರಪ್ಪ ಸ್ಪಂದಿಸಿ, ಕ್ರಮ ವಹಿಸುವಂತೆ ಸೂಚನೆ ನೀಡಿದ್ದರು. ಆದರೆ, ಹಣಕಾಸು ಇಲಾಖೆ ಮಾತ್ರ ಬೇರೆ ಕಾರಣ ನೀಡಿ ನಿರಾಕರಿಸಿದೆ. ತಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಸಂಸ್ಥೆಯ ಪದಾಧಿಕಾರಿಗಳು ಪಟ್ಟು ಹಿಡಿದಿದ್ದಾರೆ.

‘10 ವರ್ಷಗಳಿಂದ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ಸಹಕಾರ ತತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಏಷ್ಯಾ ಖಂಡದಲ್ಲೇ ಪ್ರಸಿದ್ಧಿ ಪಡೆದಿದೆ. ಇಂತಹ ಸಂಸ್ಥೆಯನ್ನು ಉಳಿಸಲು ಸರ್ಕಾರ ನೆರವಾಗಬೇಕು. ಇಲ್ಲದಿದ್ದರೆ 300ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳುತ್ತವೆ’ ಎಂದು ನಿರ್ವಾಹಕರೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ಕೊಪ್ಪದಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆಯು ಸಹಕಾರ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ. ಸಂಸ್ಥೆಯ ಬಸ್ಸುಗಳು ಚಿಕ್ಕಮಗಳೂರು, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಚರಿಸುತ್ತವೆ.

ಈಗ ಒಟ್ಟು 73 ಬಸ್ಸುಗಳಿದ್ದು, ಸುಮಾರು 300 ನೌಕರರು ಇದ್ದಾರೆ. ಗುಡ್ಡಗಾಡು, ಮಲೆನಾಡಿನ ಊರುಗಳಲ್ಲಿ ಈ ಬಸ್ಸುಗಳ ಸಂಚರಿಸುತ್ತವೆ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ವಿವಿಧ ಸಂಸ್ಥೆಗಳ ನೌಕರರು ಸಹಕಾರ ಸಾರಿಗೆಯ ಬಸ್‌ಗಳನ್ನು
ಅವಲಂಬಿಸಿದ್ದಾರೆ.

*
ಬೇಡಿಕೆ ಈಡೇರುವವರೆಗೆ ಬಸ್ಸುಗಳನ್ನು ರಸ್ತೆಗಿಳಿಸಲ್ಲ. ಮುಖ್ಯಮಂತ್ರಿ ನೀಡಿದ್ದ ಸೂಚನೆ ಜಾರಿಗೊಳಿಸಬೇಕು ಎಂಬುದು ನಮ್ಮ ಆಗ್ರಹ.
-ಈ.ಎಸ್‌.ಧರ್ಮಪ್ಪ ಅಧ್ಯಕ್ಷ, ಸಹಕಾರ ಸಾರಿಗೆ ಸಂಸ್ಥೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು