ಭಾನುವಾರ, ಆಗಸ್ಟ್ 1, 2021
26 °C
ಪಿಎಸಿಗೆ ಆರೋಗ್ಯ ಇಲಾಖೆ ವರದಿ

ಪಿಪಿಇ ಕಿಟ್‌ಗೆ ದುಪ್ಪಟ್ಟು ದರ: ಲಾಕ್‌ಡೌನ್ ಕಾರಣಕ್ಕೆ ಪರಿಷ್ಕರಣೆ -ಆರೋಗ್ಯ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಪಿಪಿಇ ಕಿಟ್ ಖರೀದಿ ಮಾಡಲಾಗಿದೆ. ಆದರೆ, ಅಕ್ರಮ ನಡೆದಿಲ್ಲ..!’

ಕೋವಿಡ್‌ ನಿರ್ವಹಣೆಗಾಗಿ ಖರೀದಿರಿಸುವ ಉಪಕರಣಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿಚಾರಣೆ ಕೈಗೆತ್ತಿಕೊಂಡಿರುವ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ (ಪಿಎಸಿ)  ಆರೋಗ್ಯ ಇಲಾಖೆ ಸಲ್ಲಿಸಿರುವ ವರದಿಯಲ್ಲಿ ಹೀಗೆ ಪ್ರತಿಪಾದಿಸಲಾಗಿದೆ. ವರದಿಯ ಪ್ರತಿ ಆರೋಗ್ಯ ಇಲಾಖೆ ಮೂಲಗಳಿಂದ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

‘ಕರ್ನಾಟಕ ರಾಜ್ಯ ಡ್ರಗ್ಸ್‌ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿ(ಕೆಎಸ್‌ಡಿಎಸ್‌ಡಬ್ಲ್ಯೂಎಸ್‌) ಈ ಹಿಂದೆ ಯಾವತ್ತೂ ಪಿಪಿಇ ಕಿಟ್‌ಗಳನ್ನು ಖರೀದಿಸಿರಲಿಲ್ಲ. ಅವುಗಳ ವೈಶಿಷ್ಟ್ಯತೆ ಮತ್ತು ಅಂದಾಜು ಮೌಲ್ಯದ ಬಗ್ಗೆ ಸಂಸ್ಥೆಗೆ ಮಾಹಿತಿ ಇರಲಿಲ್ಲ. ₹330.40 ದರದಲ್ಲಿ ಪಿಪಿಇ ಕಿಟ್‌ಗಳ ಖರೀದಿಗೆ ಆದೇಶ ನೀಡಲಾಗಿತ್ತು. ಲಾಕ್‌ಡೌನ್ ಕಾರಣದಿಂದ ಮಾನವ ಸಂಪನ್ಮೂಲ ಕೊರತೆ, ಕಚ್ಚಾ ವಸ್ತುಗಳ ಕೊರತೆಯಿಂದಾಗಿ ದರವನ್ನು ₹725ಕ್ಕೆ ಪರಿಷ್ಕರಿಸಬೇಕಾಯಿತು’ ಎಂದು ಆರೋಗ್ಯ ಇಲಾಖೆ ಸಮರ್ಥಿಸಿಕೊಂಡಿದೆ.

‘ಬೇರೆ ಬೇರೆ ಸಂಸ್ಥೆಗಳಿಂದ 10 ಲಕ್ಷ ಪಿಪಿಇ ಕಿಟ್‌ಗಳ ಖರೀದಿಗೆ ಆದೇಶಿಸಲಾಗಿತ್ತು. ಯಾವ ಸಂಸ್ಥೆಗಳೂ ಸಮರ್ಪಕವಾಗಿ ಸರಬರಾಜು ಮಾಡಲಿಲ್ಲ. ಹೀಗಾಗಿ, ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ನಿಂದ ಪರಿಷ್ಕೃತ ದರದಲ್ಲಿ ಖರೀದಿಸಲಾಯಿತು. ಅವುಗಳು ಗುಣಮಟ್ಟದಿಂದ ಕೂಡಿಲ್ಲ ಎಂಬ ಆರೋಪಗಳು ಬಂದವು. ಅಷ್ಟರಲ್ಲಿ ಕಿಟ್‌ಗಳು ಸ್ಥಳೀಯವಾಗಿಯೇ ಲಭ್ಯವಾದ ಕಾರಣ ಪ್ಲಾಸ್ಟಿ ಇಂಡಸ್ಟ್ರೀಸ್‌ನಿಂದ 1.5 ಲಕ್ಷ ಕಿಟ್‌ಗಳ ಖರೀದಿ ಆದೇಶ ರದ್ದುಪಡಿಸಲಾಯಿತು’ ಎಂದು ಹೇಳಿದೆ.

‘ಚೀನಾದ ಎರಡು ಕಂಪನಿಗಳಿಂದ ಖರೀದಿಸಿದ ಕೊರೊನಾ ಪರೀಕ್ಷಾ ಕಿಟ್‌ಗಳು ಕಳಪೆಯಿಂದ ಕೂಡಿವೆ ಎಂಬ ಆರೋಪವಿದೆ.  ಕೋವಿಡ್‌–19 ನೋಡಲ್ ಅಧಿಕಾರಿ ಸಿ.ಎನ್. ಮಂಜುನಾಥ್ ಅವರ ಶಿಫಾರಸಿನಂತೆ ಚೀನಾದ ಒಂದು ಕಂಪನಿಯಿಂದ ಖರೀದಿಸಲು ಉದ್ದೇಶಿಸಲಾಗಿತ್ತು. ಆ ಕಂಪನಿ ವೇಳಾಪಟ್ಟಿಯಂತೆ ಸರಬರಾಜು ಮಾಡಲಿಲ್ಲ. ಎರಡೂ ಕಂಪನಿಗಳಿಗೆ ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್‌) ಅನುಮೋದನೆ ನೀಡಿ ನಂತರ ರದ್ದುಗೊಳಿಸಿರುವ ವಿಷಯ ತಿಳಿಯಿತು. ಹೀಗಾಗಿ, ಖರೀದಿ ಆದೇಶ ಹಿಂಪಡೆಯಲಾಗಿದ್ದು, ಯಾರಿಗೂ ಹಣ ಪಾವತಿ ಮಾಡಿಲ್ಲ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘2014–15ರಲ್ಲಿ 144 ಡಯಾಲಿಸಿಸ್ ಉಪಕರಣ ಖರೀದಿಸಲಾಗಿದೆ. 18 ಉಪಕರಣಗಳು ಹಾಳಾಗಿದ್ದ ಕಾರಣ ಸವಕಳಿ ಕಳೆದ ಬಳಿಕ ಅದರ ಮೌಲ್ಯ ₹21 ಲಕ್ಷ ಎಂದು ಅಂದಾಜಿಸಲಾಗಿತ್ತು. ಆದರೆ, ₹24 ಲಕ್ಷಕ್ಕೆ ಮಾರಾಟ ಮಾಡಲಾಗಿದೆ’ ಎಂದು ತಿಳಿಸಿದೆ.

‘ಕಡಿಮೆ ದರ ನಮೂದಿಸಿದ ಎರಡು ಕಂಪನಿಗಳನ್ನು ಬಿಟ್ಟು ಮೂರನೇ ಕಂಪನಿಯಿಂದ ಗ್ಲೂಕೋಸ್‌ ಖರೀದಿಸಲಾಗಿದೆ ಎಂಬ ಆರೋಪವಿದೆ. ಕಡಿಮೆ ದರ ನಮೂದಿಸಿದ್ದ ಮೊದಲನೇ(ಎಲ್‌–1) ಕಂಪನಿ ಬ್ರೇಕ್‌ಡೌನ್ ಆದ ಕಾರಣ ಸರಬರಾಜು ಮಾಡಲಿಲ್ಲ. ಎರಡನೇ ಕಂಪನಿ ಮೂರು ತಿಂಗಳ ಕಾಲವಕಾಶ ಕೇಳಿತ್ತು. ಅನಿವಾರ್ಯವಾಗಿ ಮೂರನೇ ಕಂಪನಿಯಿಂದ ಖರೀದಿಸಲಾಗಿದೆ. ಆದರೆ, ಎಲ್‌–1 ದರಕ್ಕಿಂತ ಕಡಿಮೆ ದರ ಪಾವತಿಸಲಾಗಿದೆ’ ಎಂದು ತಿಳಿಸಿದೆ.

‘ದೆಹಲಿಯ ಸಂಸ್ಥೆಯೊಂದರಿಂದ ವೆಂಟಲೇಟರ್‌ ಖರೀದಿಸಲಾಯಿತು. ರವಾನೆ ಮಾಡಿಕೊಳ್ಳುವ ಮುನ್ನ ತಜ್ಞರ ತಂಡ ಪರಿಶೀಲನೆ ನಡೆಸಿ ಸುಸ್ಥಿತಿಯಲ್ಲಿ ಇಲ್ಲ ಎಂಬ ವರದಿ ನೀಡಿದ ಬಳಿಕ ಖರೀದಿ ಆದೇಶ ರದ್ದು ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದೆ.

₹250 ದರದಲ್ಲಿ ಸ್ಯಾನಿಟೈಸರ್ ಖರೀದಿ

500 ಎಂ.ಎಲ್ ‍ಪ್ರಮಾಣದ‌ ಸ್ಯಾನಿಟೈಸರ್ ಬಾಟಲಿಯನ್ನು ₹250 ಮತ್ತು ₹244.94 ದರದಲ್ಲಿ ಖರೀದಿ ಮಾಡಿರುವುದನ್ನು ಕೆಎಸ್‌ಡಿಎಸ್‌ಡಬ್ಲ್ಯೂಎಸ್ ಒಪ್ಪಿಕೊಂಡಿದೆ.

‘1.25 ಲಕ್ಷ ಬಾಟಲಿ ಖರೀದಿಸಲಾಗಿದೆ. ಚೀನಾದಿಂದ ಕಚ್ಚಾ ವಸ್ತುಗಳು ಆಮದಾಗದ ಕಾರಣ ಟೆಂಡರ್ ದರದಲ್ಲಿ ಸ್ಯಾನಿಟೈಸರ್ ಪೂರೈಸಲು ಎರಡು ಕಂಪನಿಗಳು ನಿರಾಕರಿಸಿದವು. ಸ್ಯಾನಿಟೈಸರ್ ತುರ್ತಾಗಿ ಅಗತ್ಯ ಇದ್ದ ಕಾರಣ ಬೇರೆ ಎರಡು ಕಂಪನಿಗಳಿಂದ ಖರೀದಿಸಲಾಗಿದೆ. ಅವ್ಯವಹಾರದ ಆರೋಪ ಸುಳ್ಳು’ ಎಂದೂ ತಿಳಿಸಿದೆ. ‘ಸಿರಿಂಜ್‌, ಸಿರಿಂಜ್ ಪಂಪ್ ಮತ್ತು ಇತರೆ ಪರಿಕರಗಳನ್ನು ಮಾರುಕಟ್ಟೆಯ ದರಕ್ಕಿಂತಲೂ ಕಡಿಮೆ ದರದಲ್ಲಿ ಖರೀದಿಸಲಾಗಿದೆ’ ಎಂದು ವರದಿ ಸ್ಪಷ್ಟಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು