ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಉಪ ಚುನಾವಣೆಗಳ ‘ಮೆಲುಕು’

ಉಪ ಸಮರದಲ್ಲಿ ರಾಜಕೀಯ ಭವಿಷ್ಯ ಭದ್ರಪಡಿಸಿಕೊಂಡ ನಾಯಕರು
Last Updated 28 ನವೆಂಬರ್ 2019, 12:15 IST
ಅಕ್ಷರ ಗಾತ್ರ

ಬೆಳಗಾವಿ: ಶಾಸಕರ ರಾಜೀನಾಮೆಯಿಂದಾಗಿ ಅಥಣಿ, ಕಾಗವಾಡ ಮತ್ತು ಗೋಕಾಕ ವಿಧಾನಸಭಾ ಕ್ಷೇತ್ರಗಳಿಗೆ ಈಗ ಉಪ ಚುನಾವಣೆ ನಡೆಯುತ್ತಿದೆ. 1967ರಿಂದ ಜಿಲ್ಲೆಯ ರಾಜಕೀಯ ಇತಿಹಾಸ ಗಮನಿಸಿದರೆ, ಹಲವರು ಉಪ ಚುನಾವಣೆಗಳ ಮೂಲಕವೇ ರಾಜಕೀಯ ಭವಿಷ್ಯ ಕಂಡುಕೊಂಡ ಉದಾಹರಣೆಗಳಿವೆ.

1967ರಿಂದ ಈವರೆಗೆ ಅಥಣಿ, ಗೋಕಾಕದಲ್ಲಿ ಇದೇ ಮೊದಲಿಗೆ ಉಪ ಚುನಾವಣೆ ನಡೆಯುತ್ತಿದೆ. ಕಾಗವಾಡದಲ್ಲಿ ಈಗಿನದು 2ನೇ ಉಪ ಚುನಾವಣೆ. ಪ್ರಸ್ತುತ ಕಾಗವಾಡದಲ್ಲಿ ಕಾಂಗ್ರೆಸ್‌ನಿಂದ ಕಣದಲ್ಲಿರುವ ಭರಮಗೌಡ (ರಾಜು) ಕಾಗೆ 2ನೇ ಬಾರಿಗೆ ಉಪ ಚುನಾವಣೆ ಎದುರಿಸುತ್ತಿದ್ದಾರೆ.

1999ರಲ್ಲಿ ಮೊದಲ ಬಾರಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರು ಸೋಲನುಭವಿಸಿದ್ದರು. ಆಗ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪಾಸಗೌಡ (ಪೋಪಟ್) ಅಪ್ಪಗೌಡ ಪಾಟೀಲ 31,462 ಮತಗಳಿಂದ ಗೆದ್ದಿದ್ದರು. ಅವರ ನಿಧನದಿಂದಾಗಿ 2000ನೇ ಇಸವಿಯಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಜೆಡಿಯುನಿಂದ ಕಣಕ್ಕಿಳಿದು ಕಾಂಗ್ರೆಸ್‌ನ ವಿಜಯಾ ಪಾಸಗೌಡ ಪಾಟೀಲ ವಿರುದ್ಧ 1,019 ಮತಗಳ ಕಡಿಮೆ ಅಂತರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಬಳಿಕ ಅಲ್ಲಿ ಬಿಜೆಪಿಯಿಂದಲೇ ‘ಹ್ಯಾಟ್ರಿಕ್‌ ಗೆಲುವು’ ಸಾಧಿಸಿದ್ದು ಇತಿಹಾಸ. ಈಗ ಕಾಂಗ್ರೆಸ್‌ ಅಭ್ಯರ್ಥಿ.

ಹಿಂದಣ ಹೆಜ್ಜೆ:ಬೆಳಗಾವಿ ಉತ್ತರ ಮತ ಕ್ಷೇತ್ರದಲ್ಲಿ 1989ರಲ್ಲಿ ಬಿ.ಆರ್. ಮಹಗಾಂವಕರ ಪಕ್ಷೇತರಾಗಿ (ಎಂಇಎಸ್) ಗೆದ್ದಿದ್ದರು. ಅವರ ನಿಧನದಿಂದ ತೆರವಾದ ಸ್ಥಾನಕ್ಕೆ 1992ರಲ್ಲಿ ನಡೆದ ಚುನಾವಣೆಯಲ್ಲಿ ಎಂಇಎಸ್‌ನ ಅರ್ಜನರಾವ್‌ ಹಿಶೋಬಕರ ಆಯ್ಕೆಯಾಗಿದ್ದರು. ಆಗ ಅವರಿಗೆ ಕನ್ನಡ ಹೋರಾಟಗಾರ ಸಿದ್ದನಗೌಡ ಪಾಟೀಲ ಪೈಪೋಟಿ ನೀಡಿದ್ದರು.

ಅರಭಾವಿ ಕ್ಷೇತ್ರದಲ್ಲಿ 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಬಿಜೆಪಿಯ ವಿವೇಕರಾವ್ ಪಾಟೀಲ ವಿರುದ್ಧ ಗೆದ್ದಿದ್ದ ಬಾಲಚಂದ್ರ ಜಾರಕಿಹೊಳಿ ‘ಆಪರೇಷನ್‌ ಕಮಲ’ದಿಂದಾಗಿ ಬಿಜೆಪಿ ಸೇರಿದರು. ಅದೇ ವರ್ಷ ನಡೆದ ಉಪ ಸಮರದಲ್ಲಿ ಈ ಇಬ್ಬರ ಪಕ್ಷ ಅದಲು–ಬದಲಾಗಿತ್ತು. ಬಾಲಚಂದ್ರ ಬಿಜೆಪಿ ಹಾಗೂ ವಿವೇಕರಾವ್‌ ಪಾಟೀಲ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಆಗ, ಬಾಲಚಂದ್ರ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದರು.

ಕತ್ತಿ ಸಾಧನೆ:ಹುಕ್ಕೇರಿ ಕ್ಷೇತ್ರವು 2 ಉಪ ಚುನಾವಣೆಗಳನ್ನು ಕಂಡಿದೆ. ಆ ಎರಡರಲ್ಲೂ ಉಮೇಶ ಕತ್ತಿ ಅವರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆದ್ದಿರುವುದು ವಿಶೇಷ. 1985ರಲ್ಲಿ ಜನತಾ ಪಕ್ಷದಿಂದ ಪ್ರಭಾವಿ ನಾಯಕ ವಿಶ್ವನಾಥ ಮಲ್ಲಪ್ಪ ಕತ್ತಿ ಕಾಂಗ್ರೆಸ್‌ನ ಬಿ.ಜಿ. ಪಾಟೀಲ ವಿರುದ್ಧ ಗೆದ್ದಿದ್ದರು. ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅದೇ ವರ್ಷ ಉಪ ಚುನಾವಣೆ ನಡೆದಿತ್ತು. ಆಗ, ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ವಿಶ್ವನಾಥ ಅವರ ಪುತ್ರ ಉಮೇಶ ಕತ್ತಿ ಕಾಂಗ್ರೆಸ್‌ನ ಎಸ್.ಎಸ್. ಮಹಾಜನಶೆಟ್ಟಿ ವಿರುದ್ಧ ಜಯ ಸಾಧಿಸಿದ್ದರು. ಅನುಕಂಪ ಅಲೆ ಉಮೇಶಗೆ ವಿಜಯದ ಮಾಲೆ ತಂದಿತ್ತು.

ಅವರು 1989, 1994ರಲ್ಲಿ (ಎರಡು ಬಾರಿಯೂ ಜನತಾದಳ) ಹಾಗೂ 1999ರಲ್ಲಿ ಜೆಡಿಯುನಿಂದ ಕಣಕ್ಕಿಳಿದು ಗೆಲುವಿನ ಯಾತ್ರೆ ಮುಂದುವರಿಸಿದ್ದರು. 2004ರಲ್ಲಿ ಪಕ್ಷಾಂತರ ಮಾಡಿ ಕಾಂಗ್ರೆಸ್‌ನಿಂದ ನಿಂತಿದ್ದ ಅವರು ಬಿಜೆಪಿಯ ಶಶಿಕಾಂತ ನಾಯಿಕ ವಿರುದ್ಧ ಸೋತಿದ್ದರು. 2008ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದರು. ಆಪರೇಷನ್ ಕಮಲದ ಪರಿಣಾಮ, ಅದೇ ವರ್ಷ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅವರು, ಕಾಂಗ್ರೆಸ್‌ನ ಜಯಪ್ರಕಾಶ್ ನೆಲವಡೆ ವಿರುದ್ಧ ಭಾರಿ ಅಂತರದಿಂದ ಗೆದ್ದಿದ್ದರು. 2013, 2018ರಲ್ಲಿ ಬಿಜೆಪಿಯಿಂದಲೇ ಗೆದ್ದು ಹಿರಿಯ ರಾಜಕಾರಣಿ ಎನಿಸಿದ್ದಾರೆ. ವೈಯಕ್ತಿಕ ವರ್ಚಸ್ಸು ವೃದ್ಧಿಸಿಕೊಳ್ಳಲು ಅವರಿಗೆ ನೆರವಾದುದು ಉಪ ಚುನಾವಣೆ.

ಗಣೇಶ ಹುಕ್ಕೇರಿಗೆ ಅವಕಾಶ:ಚಿಕ್ಕೋಡಿ–ಸದಲಗಾ ಕ್ಷೇತ್ರದಲ್ಲಿ ಒಮ್ಮೆ ಉಪ ಚುನಾವಣೆ ನಡೆದಿದೆ. 2013ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಪ್ರಕಾಶ ಹುಕ್ಕೇರಿ, ಅವರದೇ ಸರ್ಕಾರ ಬಂದಿದ್ದರಿಂದ ಮಂತ್ರಿಯೂ ಆಗಿದ್ದರು. ಅವರನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಡಲು ಕಾಂಗ್ರೆಸ್ ವರಿಷ್ಠರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದರು. ಅದೇ ವರ್ಷ ಅಂದರೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಅವರ ಪುತ್ರ ಗಣೇಶ ಹುಕ್ಕೇರಿ ಅವರು ಬಿಜೆಪಿಯ ಮಹಾಂತೇಶ ಕವಟಗಿಮಠ ವಿರುದ್ಧ ಗೆದ್ದು ವಿಧಾನಸಭೆ ಪ್ರವೇಶಿಸಿ ಯುವ ನಾಯಕನಾಗಿ ಹೊರಹೊಮ್ಮಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ ಹುಕ್ಕೇರಿಯೂ ಗೆದ್ದಿದ್ದರು.

2018ರಲ್ಲಿ ವಿಧಾನಸಭೆಯಿಂದ ಪುತ್ರ ಗಣೇಶ ಹುಕ್ಕೇರಿ ಗೆದ್ದರೆ, 2019ರ ಲೋಕಸಭಾ ಚುನಾವಣೆಯಲ್ಲಿ ತಂದೆ ಪ್ರಕಾಶ ಹುಕ್ಕೇರಿ ಸೋಲು ಅನುಭವಿಸಿದರು.

ಉಳಿದಂತೆ, ರಾಮದುರ್ಗ, ಪರಸಗಡ/ಸವದತ್ತಿ–ಯಲ್ಲಮ್ಮ, ಬೈಲಹೊಂಗಲ, ಕಿತ್ತೂರ, ಖಾನಾಪುರ, ಉಚಗಾಂವ/ ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ನಿಪ್ಪಾಣಿ, ರಾಯಬಾಗದಲ್ಲಿ ಉಪ ಚುನಾವಣೆ ನಡೆದಿಲ್ಲ. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ನಂತರ ರಚನೆಯಾಗಿ ಮೂರು ಚುನಾವಣೆಗಳಿಗೆ ಸಾಕ್ಷಿಯಾದ ಕುಡಚಿ ಹಾಗೂ ಯಮಕನಮರಡಿ ಕ್ಷೇತ್ರಗಳೂ ಉಪ ಚುನಾವಣೆ ಕಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT