ಮಂಗಳವಾರ, ನವೆಂಬರ್ 19, 2019
26 °C
50 ವರ್ಷದ ವ್ಯಕ್ತಿಯಿಂದ ದೂರು

ವೇಶ್ಯಾವಾಟಿಕೆಗೆ ಕರೆದು ಹಣ ಕಿತ್ತರು !

Published:
Updated:

ಬೆಂಗಳೂರು: ವೇಶ್ಯಾವಾಟಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರನ್ನು ಮನೆಗೆ ಕರೆಸಿ ಹಣ ಕಿತ್ತುಕೊಂಡು ಹಲ್ಲೆ ಮಾಡಿರುವ ಆರೋಪದಡಿ ಮೂವರನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ವೇದಾ ಅಲಿಯಾಸ್ ಜ್ಯೋತಿ, ವಿಜಯ್ ಹಾಗೂ ಅರುಣ್ ಬಂಧಿತರು. ಮೂವರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಮುಖ ಆರೋಪಿ ಜಾಕ್ಲಿನ್ ಮೇರಿ ಎಂಬಾಕೆ ತಲೆಮರೆಸಿಕೊಂಡಿದ್ದಾಳೆ.

‘ತಮ್ಮದೇ ಗ್ಯಾಂಗ್‌ ಕಟ್ಟಿಕೊಂಡಿದ್ದ ಆರೋಪಿಗಳು, ಹುಡುಗಿಯರ ಆಸೆ ತೋರಿಸಿ 50 ವರ್ಷದ ವ್ಯಕ್ತಿಯೊಬ್ಬರು ಮನೆಗೆ ಕರೆಸಿ ಹಣ ಸುಲಿಗೆ ಮಾಡಿದ್ದರು. ಆ ಸಂಬಂಧ ದಾಖಲಾಗಿದ್ದ ದೂರು ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಪ್ಪೊಪ್ಪಿಕೊಂಡರು’ ಎಂದು ಪೊಲೀಸರು ಹೇಳಿದರು.

ಮೊಬೈಲ್‌ನಲ್ಲಿ ಸಂಪರ್ಕ: ‘ದೂರುದಾರ ವ್ಯಕ್ತಿಯ ಮೊಬೈಲ್‌ಗೆ 15 ದಿನಗಳ ಹಿಂದಷ್ಟೇ ಕರೆ ಮಾಡಿದ್ದ ಜಾಕ್ಲಿನ್ ಮೇರಿ, ‘ನಮ್ಮಲ್ಲಿ ಸುಂದರವಾದ ಹುಡುಗಿಯರು ಇದ್ದಾರೆ. ನೀವು ಮನೆಗೆ ಬಂದರೆ ಒಳ್ಳೆಯ ಸೇವೆ ಕೊಡಿಸುತ್ತೇನೆ’ ಎಂಬುದಾಗಿ ಹೇಳಿದ್ದಳು’ ಎಂದು ಪೊಲೀಸರು ತಿಳಿಸಿದರು. 

‘ಮೇರಿ ಮಾತು ನಂಬಿದ್ದ ದೂರುದಾರ, ಇದೇ 12ರಂದು ಮಧ್ಯಾಹ್ನ ಆಕೆಯ ಮನೆಗೆ ಹೋಗಿದ್ದರು. ಅವರನ್ನು ಬರಮಾಡಿಕೊಂಡಿದ್ದ ಮೇರಿ, ಮನೆಯ ಕೊಠಡಿಯೊಂದಕ್ಕೆ ಕರೆದೊಯ್ದು ಬಾಗಿಲು ಹಾಕಿಕೊಂಡಿದ್ದಳು. ಅದಾಗಿ ಕೆಲವೇ ಹೊತ್ತಿನಲ್ಲಿ ಕೊಠಡಿಯೊಳಗೆ ನುಗ್ಗಿದ್ದ ವಿಜಯ್ ಹಾಗೂ ಅರುಣ್, ‘ಸಂಸಾರಸ್ಥರ ಮನೆಗೆ ಬಂದು ಈ ರೀತಿ ಮಾಡುತ್ತಿದ್ದಿಯಾ. ನಿನಗೆ ಒಂದು ಗತಿ ಕಾಣಿಸುತ್ತೇವೆ. ನಿನ್ನ ಮರ್ಯಾದೆಯನ್ನೂ ತೆಗೆಯುತ್ತೇವೆ’ ಎಂದು ಹೇಳಿ ಜಗಳ ತೆಗೆದಿದ್ದರು.’

‘ದೂರುದಾರರ ಬಳಿ ಇದ್ದ ಪರ್ಸ್, ಮೊಬೈಲ್ ಹಾಗೂ ₹ 4,400 ನಗದು ಕಸಿದುಕೊಂಡಿದ್ದರು. ಮೊಬೈಲ್‌ನಲ್ಲಿದ್ದ ಗೂಗಲ್‌ ಪೇ ಆ್ಯಪ್‌ ಮೂಲಕ ₹ 5,000 ನಗದನ್ನೂ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ದೂರುದಾರರ ಐಸಿಐಸಿಐ ಬ್ಯಾಂಕ್‌ ಎಟಿಎಂ ಸಹ ಕಸಿದುಕೊಂಡು ₹ 20 ಸಾವಿರ ಡ್ರಾ ಮಾಡಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ದೂರುದಾರರನ್ನು ಪುನಃ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ ಆರೋಪಿಗಳು, ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿದ್ದರು. ಅದನ್ನು ಪ್ರಶ್ನಿಸಿದ್ದ ದೂರುದಾರರ ತಲೆಗೆ ಮರದ ದೊಣ್ಣೆಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡಿದ್ದ ದೂರುದಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)