ಉಪಚುನಾವಣೆ: ಶಿವಮೊಗ್ಗದಲ್ಲಿ ಗೆದ್ದು ಸೋತ ಬಿಜೆಪಿ!

7
ಗೆಲುವಿನ ಅಂತರ 3,11,157 ಕುಸಿತ, ಫಲಿಸದ ಕಾಂಗ್ರೆಸ್–ಜೆಡಿಎಸ್ ಒಗ್ಗಟ್ಟಿನ ಮಂತ್ರ

ಉಪಚುನಾವಣೆ: ಶಿವಮೊಗ್ಗದಲ್ಲಿ ಗೆದ್ದು ಸೋತ ಬಿಜೆಪಿ!

Published:
Updated:
Deccan Herald

ಶಿವಮೊಗ್ಗ: ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಗೆಲುವು ಕಂಡರೂ ಬಿಜೆಪಿ ನಾಯಕರನ್ನು ಸೋಲಿನ ಛಾಯೆ ಆವರಿಸಿಕೊಂಡಿದೆ. ಒಂದು ರೀತಿ ಗೆದ್ದು ಸೋತ ಅನುಭವ.

‘2014ರ ಚುನಾವಣೆಯಲ್ಲಿ ನಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರನ್ನು 3,63,305 ಮತಗಳ ಅಂತರದಿಂದ ಗೆಲ್ಲಿಸಿದ್ದರು. ಅದಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಈ ಬಾರಿ ಬಿಜೆಪಿ ಗೆಲ್ಲಲಿದೆ’ ಎಂದು ಅಭ್ಯರ್ಥಿ ರಾಘವೇಂದ್ರ ಸೇರಿದಂತೆ ಆ ಪಕ್ಷದ ಪ್ರಮುಖ ನಾಯಕರು ಚುನಾವಣಾ ಪ್ರಚಾರದ ವೇಳೆ ಪದೇಪದೇ ಹೇಳುತ್ತಿದ್ದ ಮಾತು.

ಕಾಂಗ್ರೆಸ್–ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಎಸ್‌. ಮಧು ಬಂಗಾರಪ್ಪ ಅವರ ಎದುರು ರಾಘವೇಂದ್ರ ಅವರ ಗೆಲುವಿನ ಅಂತರ 52,148 ಮತಗಳು. ಅಂದರೆ ಯಡಿಯೂರಪ್ಪ ಅವರ ಗೆಲುವಿನ ಅಂತರಕ್ಕಿಂತ 3,11,157 ಮತಗಳು. 

ಮನೆಮನೆ ತಲುಪದ ಮೈತ್ರಿ ಸಂದೇಶ:  ಬಿಜೆಪಿ ಉಪ ಚುನಾವಣೆಯ ಸುಳಿವು ದೊರೆಯುತ್ತಿದ್ದಂತೆ ಬಿ.ವೈ. ರಾಘವೇಂದ್ರ ಅವರನ್ನು ಅಭ್ಯರ್ಥಿ ಎಂದು ಘೋಷಿಸಿತ್ತು. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಗೆದ್ದ 7 ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಠಿಕಾಣಿ ಹೂಡಿ ತಳಮಟ್ಟದ ಕಾರ್ಯಕರ್ತರನ್ನು ಹುರಿದುಂಬಿಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಅನುಸರಿಸಿದ ತಂತ್ರವನ್ನೇ ಉಪ ಚುನಾವಣೆಯಲ್ಲೂ ಬಿಜೆಪಿ ಅನುಸರಿಸಿತು. 

ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆಗೆ ಎರಡೂ ಪಕ್ಷಗಳು ವಿಳಂಬ ಮಾಡಿದ್ದವು. ಕೊನೆಗೆ ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಇರುವಾಗ ಆಯ್ಕೆ ಮಾಡಲಾಗಿತ್ತು. ದಶಕಗಳಿಂದ ಪರಸ್ಪರ ವಿರುದ್ಧವಾಗಿ ಕಾದಾಟ ನಡೆಸುತ್ತಿದ್ದ ಎರಡೂ ಪಕ್ಷಗಳು ಒಟ್ಟಿಗೆ ಸಾಗಿದರೂ, ಚುನಾವಣೆ ಎದುರಿಸಬೇಕಾದ ಕಾರ್ಯತಂತ್ರ ರೂಪಿಸಲು ಇನ್ನಷ್ಟು ಸಮಯದ ಅಗತ್ಯವಿತ್ತು. ಮೈತ್ರಿ ಕುರಿತು ತಳಮಟ್ಟದ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುವಷ್ಟರಲ್ಲಿ ಚುನಾವಣೆ ಮುಗಿದೇ ಹೋಗಿತ್ತು. ಇದು ಮೈತ್ರಿಗೆ ಹಿನ್ನಡೆಯಾಗಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. 

ಕಾಂಗ್ರೆಸ್ ಮತ ಬ್ಯಾಂಕಿಗೆ ಬಿಜೆಪಿ ಲಗ್ಗೆ:  ಶಿವಮೊಗ್ಗ ಲೋಕಸಭಾ ಇತಿಹಾಸದಲ್ಲಿ ಇದೇ ಮೊದಲಬಾರಿ ಕಣದಲ್ಲಿ ಕಾಂಗ್ರೆಸ್ ಇಲ್ಲದೆ ಚುನಾವಣೆ ನಡೆದದ್ದು. ಸಾಮಾನ್ಯ ಜನರಿಗೆ ಬ್ಯಾಲೆಟ್‌ ಯೂನಿಟ್‌ನಲ್ಲಿ ಕಾಂಗ್ರೆಸ್ ಚಿಹ್ನೆ ಏಕೆ ಇಲ್ಲ. ಕಾಂಗ್ರೆಸ್ ಬದಲು ಜೆಡಿಎಸ್‌ನ ತೆನೆ ಹೊತ್ತ ಮಹಳೆಗೆ ಮತಹಾಕಿ ಎಂದು ಸರಿಯಾಗಿ ಮತದಾರರಿಗೆ ಮನವರಿಕೆಯನ್ನೇ ಮುಖಂಡರು ಮಾಡಿಕೊಟ್ಟಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಬಿಜೆಪಿ ಮುಖಂಡರು ಕಾಮಗ್ರೆಸ್ ಮತ ಬ್ಯಾಂಕಿಗೆ ನೇರವಾಗಿ ಕೈ ಹಾಕಿದ್ದಾರೆ. ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲ ಇದೊಂದು ಬಾರಿ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ. ಇದು ಬಿಜೆಪಿಗೆ ಒಂದಷ್ಟು ಲಾಭವಾಗಿದೆ.

ಕೈ ಹಿಡಿಯದ ಜಾತಿ ಲೆಕ್ಕಾಚಾರ: ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿ ಹಾಗೂ 3ರಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿವೆ. ಬೈಂದೂರು, ಶಿಕಾರಿಪುರ, ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿಯಲ್ಲಿ ಬಿಜೆಪಿ, ಸಾಗರ, ಸೊರಬ, ಭದ್ರಾವತಿಯಲ್ಲಿ ಜೆಡಿಎಸ್ ಮುನ್ನಡೆ ಪಡೆದಿವೆ. ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ತೀರ್ಥಹಳ್ಳಿ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಅಧಿಕ ಮತಗಳಿಸುವ ನಿರೀಕ್ಷೆ ಇತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಮೂರು ದಿನ ಇಲ್ಲೇ ಪ್ರಚಾರ ನಡೆಸಿದ ಪರಿಣಾಮ ಒಕ್ಕಲಿಗರು ಜೆಡಿಎಸ್ ಕೈ ಹಿಡಿಯುವ ಭರವಸೆ ಇತ್ತು. ಇತ್ತ ಬಂಗಾರಪ್ಪ ಕುಟುಂಬದ ಕಾರಣಕ್ಕೆ ದೀವರ ಮತಗಳು ಮಧು ಅವರಿಗೆ ವರದಾನವಾಗುತ್ತವೆ ಎಂದು ನಂಬಲಾಗಿತ್ತು. ಆದರೆ, ಈ ಎಲ್ಲ ಲೆಕ್ಕಾಚಾರ ತಲೆಕೆಳಗಾಗಿವೆ. ಒಕ್ಕಲಿಗರು, ದೀವರು ನಿರೀಕ್ಷೆಯಂತೆ ಜೆಡಿಎಸ್ ಬೆಂಬಲಿಸಿಲ್ಲ ಎನ್ನುವುದನ್ನು ಫಲಿತಾಂಶ ನಿರೂಪಿಸಿದೆ.

ಬಿಜೆಪಿ ಸಂಘಟಿತ ಪ್ರಯತ್ನದ ಫಲ:  ಬಿಜೆಪಿಯ ಜಿಲ್ಲಾ ಮುಖಂಡರ ಮಧ್ಯೆ ಏನೇ ವೈಮನಸ್ಸು ಇದ್ದರೂ ಚುನಾವಣೆ ಸಮಯದಲ್ಲಿ ಒಟ್ಟಾಗಿ ಸಂಘಟಿತ ಪ್ರಯತ್ನ ನಡೆಸುತ್ತಾರೆ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಲಾಗಿದೆ. ತಳಮಟ್ಟದ ಕಾರ್ಯಕರ್ತರನ್ನು ತಲುಪುವಲ್ಲಿ ಆ ಪಕ್ಷದ ಪ್ರಯತ್ನ ಯಶ ಸಿಕ್ಕಿದೆ.

ಬರಹ ಇಷ್ಟವಾಯಿತೆ?

 • 20

  Happy
 • 1

  Amused
 • 4

  Sad
 • 6

  Frustrated
 • 4

  Angry

Comments:

0 comments

Write the first review for this !