ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ–ವಿಜ್ಞಾನ ಶಿಕ್ಷಕ ಒಂದೇ ಹುದ್ದೆ: ಜೀವವಿಜ್ಞಾನ ಪದವೀಧರರಿಗೆ ಇಕ್ಕಟ್ಟು

ವೃಂದ ನೇಮಕಾತಿ ನಿಯಮಕ್ಕೆ ತಿದ್ದುಪಡಿಯಿಂದ ಬಿಕ್ಕಟ್ಟು
Last Updated 12 ಮಾರ್ಚ್ 2019, 18:18 IST
ಅಕ್ಷರ ಗಾತ್ರ

ಬೆಂಗಳೂರು: ಗಣಿತ ಮತ್ತು ವಿಜ್ಞಾನ ವಿಷಯಗಳ ಬೋಧನೆಗೆ ‘ಗಣಿತ–ವಿಜ್ಞಾನ ಶಿಕ್ಷಕ’ ಎಂಬ ಒಂದೇ ಹುದ್ದೆ ಸೃಷ್ಟಿ ಮಾಡಿರುವುದು ವಿಜ್ಞಾನ ವಿಷಯಗಳ ಪದವೀಧರರಲ್ಲಿ ಆತಂಕ ಸೃಷ್ಟಿಸಿದೆ.

ಇದರಿಂದಾಗಿ, 10,116 ಪದವೀಧರ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪಿಸಿಎಂಯೇತರ ಅಭ್ಯರ್ಥಿಗಳಿಗೆ ಸಾಧ್ಯವಿಲ್ಲ. ಈ ಸಮಸ್ಯೆಗೆ ರಾಜ್ಯ ಸರ್ಕಾರ 2017ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ಮಾಡಿರುವ ತಿದ್ದುಪಡಿಯೇ ಕಾರಣ.

ಹೊಸ ನೇಮಕಾತಿ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಇದೇ 6ರಂದು ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಸೋಮವಾರದಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಈ ನಿಯಮದಿಂದಾಗಿ ಗಣಿತ ಮತ್ತು ವಿಜ್ಞಾನ ಶಿಕ್ಷಕ ಹುದ್ದೆಗಳಿಗೆ ಪಿಸಿಎಂ ಪದವೀಧರರನ್ನು ಹೊರತುಪಡಿಸಿ ಬೇರೆಯವರಿಗೆ ಅವಕಾಶ ಇಲ್ಲ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ನೇಮಕಾತಿ ಪ್ರಕ್ರಿಯೆಗೆ ತಡೆ ತರಲು ನ್ಯಾಯಾಲಯದ ಮೆಟ್ಟಿಲು ಹತ್ತಲುಅಭ್ಯರ್ಥಿಗಳು ತೀರ್ಮಾನಿಸಿದ್ದಾರೆ.

ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ಅನುಗುಣವಾಗಿ ಈ ನೇಮಕಾತಿ ನಡೆಯಲಿದೆ. ತಿದ್ದುಪಡಿಯಾದ ನಿಯಮಾವಳಿಯಲ್ಲಿ ನಮೂದಿಸಿರುವ ವಿದ್ಯಾರ್ಹತೆ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ತಿದ್ದುಪಡಿಯಾದ ನಿಯಮಾವಳಿಗಳ ಪ್ರಕಾರ, ಗಣಿತ ಮತ್ತು ವಿಜ್ಞಾನ ವಿಷಯಗಳ ಬೋಧನೆಗೆ ‘ಗಣಿತ ಮತ್ತು ವಿಜ್ಞಾನ ಶಿಕ್ಷಕ’ ಎಂಬ ಹುದ್ದೆಯನ್ನು ಸೃಜಿಸಲಾಗಿದೆ. ಎರಡೂ ವಿಷಯಗಳನ್ನು ಬೋಧಿಸಲು ಒಂದೇ ಹುದ್ದೆ ಸೃಷ್ಟಿಸಲಾಗಿದೆ.

ಈ ಮೊದಲಿನಂತೆ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಪ್ರತ್ಯೇಕ ‘ಗಣಿತ ಶಿಕ್ಷಕ’ ಮತ್ತು ‘ವಿಜ್ಞಾನ ಶಿಕ್ಷಕ’ ಎಂಬ ಹುದ್ದೆಗಳು ಇಲ್ಲವಾಗಿವೆ. ಇಂತಹ ನಿಯಮಗಳು ದೇಶದ ಇತರ ಯಾವುದೇ ರಾಜ್ಯಗಳಲ್ಲೂ ಇಲ್ಲ. ಎನ್‌ಸಿಇಆರ್‌ಟಿ ಕೂಡ ಈ ರೀತಿಯ ನಿಯಮಗಳನ್ನು ಹೊಂದಿಲ್ಲ ಎಂಬುದು ಅಭ್ಯರ್ಥಿಗಳ ವಾದ.

ಜೀವವಿಜ್ಞಾನ ಪದವೀಧರರಿಗೆ ಬೆಲೆ ಇಲ್ಲ: ಗಣಿತ ಮತ್ತು ವಿಜ್ಞಾನ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಪದವಿಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತ (ಪಿಸಿಎಂ) ಸಂಯೋಜನೆಯಲ್ಲಿ ಅಧ್ಯಯನ ಮಾಡಿರಬೇಕು ಎಂದು ವೃಂದ ನೇಮಕಾತಿ ನಿಯಮಾವಳಿಯಲ್ಲಿ ಉಲ್ಲೇಖಿಸಿಲಾಗಿದೆ.

ಪಿಸಿಎಂ ಸಂಯೋಜನೆಯನ್ನು ಹೊರತುಪಡಿಸಿ ಸಿಬಿಝಡ್‌, ಪಿಎಂಸಿಎಸ್‌, ಪಿಎಂಇ, ಪಿಎಂಜಿ ಸಂಯೋಜನೆಗಳಲ್ಲಿ ಅಧ್ಯಯನ ಮಾಡಿದವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಪಿಸಿಎಂ ಅಲ್ಲದ, ಇತರ ಸಂಯೋಜನೆಯಲ್ಲಿ ಅಧ್ಯಯನ ಮಾಡಿರುವ ಸಾವಿರಾರು ಅಭ್ಯರ್ಥಿಗಳು ಶಿಕ್ಷಕರಾಗುವ ಕನಸು ಇಟ್ಟುಕೊಂಡು ಬಿ.ಇಡಿ ಪದವಿ ಪೂರೈಸಿ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲೂ (ಟಿಇಟಿ) ತೇರ್ಗಡೆ ಆಗಿದ್ದಾರೆ. ಇವರ ಪಾಡೇನು ಎಂಬುದು ಅಭ್ಯರ್ಥಿಗಳ ಪ್ರಶ್ನೆ.

ಈ ಹಿಂದೆ ನೇಮಕಾತಿ ಸಂದರ್ಭದಲ್ಲಿ ಪಿಸಿಎಂ ಅಲ್ಲದ ವಿಜ್ಞಾನದ ಇತರ ವಿಷಯಗಳ ಪದವೀಧರರು ಆಯ್ಕೆ ಆಗಿದ್ದರೆ ಅವರಿಗೆ ಬಡ್ತಿಯೂ ಸಿಗುವುದಿಲ್ಲ. ನಿವೃತ್ತಿ ಹೊಂದುವವರೆಗೆ ಶಿಕ್ಷಕರಾಗಿಯೇ ಇರುತ್ತಾರೆ ಎಂದು ವಿಜ್ಞಾನ ಉಪನ್ಯಾಸಕ ಕೆ.ಎಲ್‌. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮಗೂ ಅವಕಾಶ ನೀಡಿ’
ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಸಮಿತಿ ಮತ್ತು ಸೈನಿಕ ಶಾಲೆಗಳ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಂತೆ, ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಪ್ರತ್ಯೇಕ ಶಿಕ್ಷಕ ಹುದ್ದೆಗಳನ್ನು ಸೃಷ್ಟಿಸಿ, ಗಣಿತ ಶಿಕ್ಷಕರ ಹುದ್ದೆಗೆ ಪಿಸಿಎಂ ಮಾತ್ರವಲ್ಲದೆ ಪಿಎಂಇ, ಪಿಎಂಸಿಎಸ್‌, ಪಿಎಂಜಿ ಇತ್ಯಾದಿ ಹಾಗೂ ವಿಜ್ಞಾನ ಶಿಕ್ಷಕ ಹುದ್ದೆಗೆ ಸಿಬಿಝಡ್‌ ಅಧ್ಯಯನ ಮಾಡಿರುವ ಅಭ್ಯರ್ಥಿಗಳನ್ನೂ ಪರಿಗಣಿಸಬೇಕು. ಈ ಬಾರಿಯ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT