ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಕಚೇರಿ ಮಾದರಿಯಲ್ಲಿ ಹೊಸ ವ್ಯವಸ್ಥೆ: ಸಿಎಂ ಕಚೇರಿಗೆ ಚುರುಕು

Last Updated 18 ಅಕ್ಟೋಬರ್ 2019, 19:00 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನ ಮಂತ್ರಿ ಕಚೇರಿ ಕೆಲಸ ನಿರ್ವಹಿಸುವ ಮಾದರಿಯಲ್ಲೇ ಮುಖ್ಯಮಂತ್ರಿ ಸಚಿವಾಲಯಕ್ಕೆ ಆಧುನಿಕ ಸ್ಪರ್ಶ ನೀಡಿ, ಕಾರ್ಯವೈಖರಿಗೆ ವೇಗ ತರುವ ವ್ಯವಸ್ಥೆ ಸದ್ಯವೇ ಜಾರಿಯಾಗಲಿದೆ.

ಮುಖ್ಯಮಂತ್ರಿ ಕಚೇರಿಗೆ ಬರುವ ಕಡತಗಳು, ಪತ್ರಗಳು ಮತ್ತು ಸಾರ್ವಜನಿಕರ ಮನವಿಗಳನ್ನು ತ್ವರಿತಗತಿ
ಯಲ್ಲಿ ವಿಲೇವಾರಿ ಮಾಡಿ, ಕೊನೆಯ ಹಂತದವರೆಗೆ ಅದರ ಮೇಲೆ ನಿಗಾ ಇಡುವ ಡಿಜಿಟಲ್‌ ವ್ಯವಸ್ಥೆ ಅನುಷ್ಠಾನಕ್ಕೆ ಸಚಿವಾಲಯ ಸಿದ್ಧತೆ ನಡೆಸಿದೆ.

ಮುಖ್ಯಮಂತ್ರಿ ಕಚೇರಿಯಲ್ಲಿ ಯಾವುದೇ ಕೆಲಸಗಳು ಬೇಗನೇ ಆಗುತ್ತಿಲ್ಲ ಎಂಬ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ, ಪ್ರಧಾನಿ ಕಚೇರಿ ಮಾದರಿಯಲ್ಲಿ ತಮ್ಮ ಕಚೇರಿಯನ್ನೂ ಸಜ್ಜುಗೊಳಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಕಡತಗಳು ಮತ್ತು ಪತ್ರಗಳನ್ನು ಎರಡೇ ದಿನಗಳಲ್ಲಿ ವಿಲೇವಾರಿ ಮಾಡಬೇಕು.

ಯಾವುದನ್ನೂ ಬಾಕಿ ಉಳಿಸಿಕೊಳ್ಳಬಾರದು ಎಂದು ಅವರು ಆದೇಶಿಸಿದ್ದರು. ಈ ಬೆನ್ನಲ್ಲೇ ಅಧಿಕಾರಿಗಳು ಹೊಸ ವ್ಯವಸ್ಥೆ ರೂಪಿಸುವ ಕಾಯಕಕ್ಕೆ ಮುಂದಾಗಿದ್ದಾರೆ.

ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರು ಗುರುವಾರಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ್ದು, ಒಂದು ವಾರದಲ್ಲಿ ಹೊಸ ವ್ಯವಸ್ಥೆಯರೂಪುರೇಷೆ ಸಿದ್ಧವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಯ ಸಹಿ ಹಾಕಿದ ಬಳಿಕ ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿ, ಇಲಾಖೆ ಅಥವಾ ವ್ಯಕ್ತಿಗಳಿಗೆ ಕಡತಗಳನ್ನು ಕಳುಹಿಸಲಾಗುವುದು. ಈ ಹಂತದಲ್ಲಿ ಎಲ್ಲೂ ವಿಳಂಬವಾಗದಂತೆ ನೋಡಿಕೊಳ್ಳಲಾಗುವುದು. ವಿಲೇವಾರಿ ಪ್ರಕ್ರಿಯೆ ಹೇಗೆ ತ್ವರಿತಗೊಳಿಸಬೇಕು. ಅದಕ್ಕೆ ಯಾವ ಕ್ರಮ ಅನುಸರಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಇದಕ್ಕೆ ಎನ್‌ಐಸಿ (ನ್ಯಾಷನಲ್‌ ಇನ್‌ಫರ್ಮೆಟಿಕ್ಸ್‌ ಸೆಂಟರ್‌) ನೆರವು ಪಡೆಯಲಾಗುತ್ತದೆ.

ಅಲ್ಲದೇ ಕಾಗದ ರಹಿತ ವ್ಯವಸ್ಥೆ ಮತ್ತು ಪತ್ರ ನಿಗಾ ವ್ಯವಸ್ಥೆ (ಲೆಟರ್‌ ಮಾನಿಟರಿಂಗ್‌ ಸಿಸ್ಟಂ) ಜಾರಿ ತರಲು ಎನ್‌ಐಸಿ ನೆರವಾಗಲಿದೆ.

‘ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಅಥವಾ ಯೋಜನೆ ಜಾರಿಗೆ ಕೋರಿ ಶಾಸಕರು ಪತ್ರ ಬರೆದರೆ, ಅದಕ್ಕೆ ಸಹಿ ಮಾಡಿ ಎರಡು ದಿನಗಳಲ್ಲಿ ವಿಲೇವಾರಿ ಮಾಡಬಹುದು. ಆದರೆ, ಅದು ಸಂಬಂಧಪಟ್ಟ ಇಲಾಖೆಗೆ ತಲುಪಲು 15 ಕ್ಕೂ ಹೆಚ್ಚು ದಿನಗಳು ಬೇಕಾಗುತ್ತವೆ. ಈ ಹಂತದಲ್ಲಿ ವಿಳಂಬ ಆಗದಂತೆ ನೋಡಿಕೊಳ್ಳುವುದು ಹೊಸ ವ್ಯವಸ್ಥೆಯ ಉದ್ದೇಶವಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮುಖ್ಯಮಂತ್ರಿ ಕಚೇರಿಗೆ ಪತ್ರ ಅಥವಾ ಕಡತಗಳು ಬಂದ ತಕ್ಷಣವೇ ಅವುಗಳನ್ನು ಡಿಜಿಟಲೀಕರಣ ಮಾಡಲಾಗುವುದು. ಅದಕ್ಕೆ ಸಹಿ ಆದ ಮರುಕ್ಷಣವೇ ಸಂಬಂಧಪಟ್ಟ ಇಲಾಖೆಗೆ ರವಾನೆಯಾಗಲಿದೆ. ಪತ್ರದ ಪ್ರಗತಿಯನ್ನು ಕಚೇರಿಯಲ್ಲೇ ಕುಳಿತು ನೋಡಲಾಗುತ್ತದೆ ಎಂದು ಹೇಳಿದರು.

ಅಧಿಕಾರಿಗಳ ಕರ್ತವ್ಯ ಮರು ಹಂಚಿಕೆ

ಮುಖ್ಯಮಂತ್ರಿ ಸಚಿವಾಲಯದಲ್ಲಿ ಕೆಲಸಗಳು ತ್ವರಿತಗತಿಯಲ್ಲಿ ನಡೆಸುವ ಉದ್ದೇಶದಿಂದ ಅಧಿಕಾರಿಗಳ ಕರ್ತವ್ಯ ಮರುಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಕಾರ್ಯದರ್ಶಿ ಶಿವಯೋಗಿ ಸಿ.ಕಳಸದ್‌ ಮತ್ತು ಇತರ ಅಧಿಕಾರಿಗಳಾದ ಎಂ.ಕೆ.ಶ್ರೀರಂಗಯ್ಯ, ರಾಜಪ್ಪ, ಪಿ.ಎ.ಗೋಪಾಲ್, ವಿಶ್ವನಾಥ್ ಪಿ.ಹಿರೇಮಠ, ರವಿ.ಎ.ಆರ್, ಡಾ.ಎ.ಲೋಕೇಶ್‌, ವಿಜಯ ಮಹಾಂತೇಶ್‌, ಚನ್ನಬಸವೇಶ, ಎಚ್‌.ಎಸ್.ಸತೀಶ್‌ ಅವರಿಗೆ ವಿವಿಧ ಇಲಾಖೆಗಳ ಜವಾಬ್ದಾರಿ ನೀಡಲಾಗಿದೆ. ಮುಖ್ಯಮಂತ್ರಿಯವರ ಕಾರ್ಯದರ್ಶಿ–2 ಆಗಿ ವಿಶ್ವನಾಥ್‌ ಹಿರೇಮಠ ಅವರಿಗೆ ಜವಾಬ್ದಾರಿ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT