ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಗೆ ಸ್ಥಾನ ಸಿಗುವ ವಿಶ್ವಾಸವಿದೆ

ಭಾರತ ಕ್ರೀಡಾ ಪ್ರಾಧಿಕಾರದ ಕೋಚ್‌ ಲಕ್ಷ್ಮೀಶ ಹೇಳಿಕೆ
Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತದ 4X400 ಮೀಟರ್ಸ್‌ ರಿಲೆ ತಂಡದಲ್ಲಿ ಜಿ.ಕೆ.ವಿಜಯಕುಮಾರಿಗೆ ಸ್ಥಾನ ಸಿಗಲಿದೆ ಎಂಬ ಆಶಾಭಾವನೆ ನನ್ನಲ್ಲಿದೆ. ಆ ಕ್ಷಣವನ್ನು ಎದುರು ನೋಡುತ್ತಿದ್ದೇನೆ’ ಎಂದು ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಕೋಚ್‌ ಲಕ್ಷ್ಮೀಶ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ವಿಜಯಕುಮಾರಿ ಅವರು ಪಟಿಯಾಲದಲ್ಲಿ ನಡೆದಿದ್ದ ಫೆಡರೇಷನ್‌ ಕಪ್‌ನ ಮಹಿಳೆಯರ 400 ಮೀಟರ್ಸ್‌ ಓಟದಲ್ಲಿ ಬೆಳ್ಳಿ ಗೆದ್ದಿದ್ದರು. 53.03 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಹೀಗಿದ್ದರೂ ಅವರನ್ನು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ) ಮತ್ತು ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಕಾಮನ್‌ವೆಲ್ತ್‌ ತಂಡದಿಂದ ಕೈಬಿಟ್ಟಿವೆ.

ತಂಡದಲ್ಲಿ ಹಿಮಾ ದಾಸ್‌, ಕರ್ನಾಟಕದ ಎಂ.ಆರ್‌.ಪೂವಮ್ಮ, ಸೋನಿಯಾ ವೈಶ್ಯ, ಮತ್ತು ಸರಿತಾಬೆನ್‌ ಗಾಯಕವಾಡ್‌ ಇದ್ದಾರೆ. ಸೋನಿಯಾ ಮತ್ತು ಸರಿತಾಬೆನ್‌, ಫೆಡರೇಷನ್‌ ಕಪ್‌ನಲ್ಲಿ ಕ್ರಮವಾಗಿ ನಾಲ್ಕು ಮತ್ತು ಆರನೇ ಸ್ಥಾನ ಗಳಿಸಿದ್ದರು. ಇವರಿಗೆ ಅವಕಾಶ ನೀಡಿರುವ ಫೆಡರೇಷನ್‌ನ ಕ್ರಮಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ರಿಲೇ ತಂಡದಲ್ಲಿ ಕಾಯ್ದಿಟ್ಟ ಅಥ್ಲೀಟ್‌ ಇಲ್ಲದಿರುವುದೂ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕುರಿತು ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಲಕ್ಷ್ಮೀಶ  ‘ವಿಜಯಕುಮಾರಿ ಪ್ರತಿಭಾನ್ವಿತ ಓಟಗಾರ್ತಿ. ಆಕೆಗೆ ಈಗ ಅನ್ಯಾಯವಾಗಿದೆ. ಅವಳನ್ನು ತಂಡದಿಂದ ಹೊರಗಿಟ್ಟ ಸುದ್ದಿ ತಿಳಿದಾಗ ಆಘಾತವಾಗಿತ್ತು. ತಂಡದಲ್ಲಿ ಸೇರಿಸಿಕೊಳ್ಳುವಂತೆ ಕೋರಿ ಫೆಡರೇಷನ್‌ಗೆ ಮೂರು ಬಾರಿ ಪತ್ರ ಬರೆದಿದ್ದೆವು. ಇದಕ್ಕೆ ಎಎಫ್‌ಐನಿಂದ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ’ ಎಂದರು.

‘ಹೋದ ವಾರ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಬೆಂಗಳೂರಿನ ಸಾಯ್‌ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆಗ ಅವರೇ ನಮ್ಮನ್ನು ಕರೆದು ಈ ಸಂಬಂಧ ವಿಚಾರಿಸಿದ್ದರು. ವಿಜಯ ಕುಮಾರಿಗೆ ಆದ ಅನ್ಯಾಯವನ್ನು ವಿವರಿಸಿದ ಮೇಲೆ ತಂಡದಲ್ಲಿ ಹೆಸರು ಸೇರಿಸುವ ಭರವಸೆ ನೀಡಿದ್ದರು. ಅದರಂತೆ ಸೋಮವಾರ ಕ್ರೀಡಾ ಸಚಿವಾಲಯ ಪ್ರಕಟಿಸಿದ್ದ ತಂಡದಲ್ಲಿ ವಿಜಯ ಕುಮಾರಿ ಹೆಸರು ಇತ್ತು. ಆದರೆ ಎಎಫ್‌ಐ ಬಿಡುಗಡೆ ಮಾಡಿರುವ ತಂಡದಲ್ಲಿ ಹೆಸರಿರಲಿಲ್ಲ’ ಎಂದು ತಿಳಿಸಿದರು.

‘ಕಾಮನ್‌ವೆಲ್ತ್‌ಗೆ ಪ್ರಕಟಿಸಿದ ರಿಲೇ ತಂಡದ ಪಟ್ಟಿ ನೋಡಿದ ನಂತರ ವಿಜಯ ಕುಮಾರಿ ಎಎಫ್ಐಗೆ ಪತ್ರ ಬರೆದಿದ್ದಳು. ಪಟಿಯಾಲದಲ್ಲಿ ಬೆಳ್ಳಿ ಗೆದ್ದಿದ್ದರೂ ತನಗೆ ಅವಕಾಶ ನೀಡಿಲ್ಲ. ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಕಾಮನ್‌ವೆಲ್ತ್‌ನಲ್ಲಿ ದೇಶಕ್ಕೆ ಪದಕ ಗೆದ್ದುಕೊಡುವ ಛಲ ಇದೆ. ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ ಎಂಬ ಕಾರಣದಿಂದ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಆಗುವುದಿಲ್ಲ ಎಂದು ಹೇಳಿದ್ದೆ. ಇದಕ್ಕಾಗಿ ಕ್ಷಮೆಕೋರುತ್ತೇನೆ. ಕಾಮನ್‌ವೆಲ್ತ್‌ ತಂಡದಲ್ಲಿ ಅವಕಾಶ ನೀಡಿದರೆ ತಂಡದೊಂದಿಗೆ ತರಬೇತಿ ನಡೆಸುತ್ತೇನೆಂದು ಪತ್ರದಲ್ಲಿ ವಿವರಿಸಿದ್ದರು. ಹೀಗಿದ್ದರೂ ಅವಕಾಶ ನೀಡಿಲ್ಲ’ ಎಂದು ಲಕ್ಷ್ಮೀಶ ವಿವರಿಸಿದರು.

‘ಏಪ್ರಿಲ್ 6ರವರೆಗೆ ಸಮಯ ಇದೆ. ಅಷ್ಟರೊಳಗೆ ಎಎಫ್‌ಐ ಅಧಿಕಾರಿಗಳು ಮನಸ್ಸು ಬದಲಿಸಿ ತಂಡದಲ್ಲಿ ಸ್ಥಾನ ನೀಡಬಹುದು ಎಂದು ಭಾವಿಸಿದ್ದೇನೆ. ಹೀಗಾಗಿ ಭರವಸೆ ಕಳೆದುಕೊಂಡಿಲ್ಲ.  ಒಂದೊಮ್ಮೆ ಅವಕಾಶ ಸಿಗದೆ ಹೋದರೆ ನೋವು ಮರೆತು ಸುಮ್ಮನಿದ್ದುಬಿಡುತ್ತೇವೆ. ಫೆಡರೇಷನ್‌ ಪ್ರಕಟಿಸಿರುವ ತಂಡ ಉತ್ತಮವಾಗಿದೆ. ತಂಡದಲ್ಲಿರುವವರು ದೇಶಕ್ಕೆ ಪದಕ ಗೆದ್ದುಕೊಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT