ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಯೋಜನಾ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ

Last Updated 14 ಮೇ 2020, 16:47 IST
ಅಕ್ಷರ ಗಾತ್ರ

ಬೆಂಗಳೂರು: ಬಡಾವಣೆಗಳಲ್ಲಿ ಮೂಲ ಸೌಕರ್ಯ ಭಾಗಶಃ ಪೂರ್ಣಗೊಳಿಸಿದ್ದರೂ ನಿವೇಶನ ಮಾರಾಟಕ್ಕೆ ಅವಕಾಶ ನೀಡಲು ನಗರ ಯೋಜನಾ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಇಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ಮೂಲ ಸೌಕರ್ಯ ಕಲ್ಪಿಸಿದ ನಂತರವೇ ನಿವೇಶನ ಮಾರಾಟಕ್ಕೆ ಒಪ್ಪಿಗೆ ನೀಡಲಾಗುತ್ತಿತ್ತು ಎಂದು ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

ಬಿಲ್ಡರ್‌ಗಳು ಮೂಲ ಸೌಕರ್ಯವನ್ನು ಒದಗಿಸದೇ ನಿವೇಶನದಾರರಿಗೆ ಆಟವಾಡಿಸುತ್ತಿದ್ದರು. ಅದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕಠಿಣ ನಿಯಮ ಜಾರಿಗೆ ತರಲಾಗಿತ್ತು. ಈಗ ಪರಿಸ್ಥಿತಿ ಬೇರೆಯೇ ಆಗಿರುವುದರಿಂದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಷರತ್ತು ಬದ್ಧವಾಗಿ ಅವಕಾಶ ನೀಡಲು ತೀರ್ಮಾನಿಸಿದ್ದೇವೇ ಎಂದರು.

ಹೊಸ ನಿಯಮದ ಪ್ರಕಾರ, ಒಟ್ಟು ನಿವೇಶನಗಳ ಪೈಕಿ ಮೊದಲ ಹಂತದಲ್ಲಿ ಶೇ 40 ರಷ್ಟು ಮೂಲ ಸೌಕರ್ಯ ಕಲ್ಪಿಸಿ ಮಾರಬಹುದು. ಆ ಬಳಿಕ ಎರಡು ಹಂತಗಳಲ್ಲಿ ಶೇ 30 ರಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ನಿವೇಶನಗಳನ್ನು ಮಾರಾಟ ಮಾಡಬಹುದು. ಯೋಜನೆ ಅನುಮತಿ ಪಡೆಯುವುದು ಕಡ್ಡಾಯ ಎಂದು ಮಾಧುಸ್ವಾಮಿ ತಿಳಿಸಿದರು.

ಪ್ರಮುಖ ಅಂಶಗಳು:
* ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020ಕ್ಕೆ ಘಟನೋತ್ತರ ಅನುಮೋದನೆ
* ಹೊಳೆನರಸೀಪುರ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆಗೆ ಸೇರಿದ 9194.56 ಚ.ಮೀ.ವಿಸ್ತೀರ್ಣವುಳ್ಳ ಜಮೀನನ್ನು ಮಹಿಳಾ ಪಾಲಿಟೆಕ್ನಿಕ್ ನಿರ್ಮಿಸಲು ತಾಂತ್ರಿಕ ಶಿಕ್ಷಣ ಇಲಾಖೆಗೆ ಹಸ್ತಾಂತರಕ್ಕೆ ಒಪ್ಪಿಗೆ.
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಸಾಮಾನ್ಯ ಸೇವೆ (ವೃಂದ ಮತ್ತು ನೇಮಕಾತಿ) ನಿಯಮಗಳು 2020ಕ್ಕೆ ಅನುಮೋದನೆ.
* ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು, ವಸತಿ ಶಾಲೆ ವಿದ್ಯಾರ್ಥಿಗಳಿಗೆ ಆಹಾರ ಪದಾರ್ಥ, ಸಮವಸ್ತ್ರ, ಶುಚಿ ಸಂಭ್ರಮ ಕಿಟ್ ಖರೀದಿಗೆ ಒಪ್ಪಿಗೆ.
*ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ₹ 445 ಕೋಟಿ ಅಂದಾಜು ವೆಚ್ಚದಲ್ಲಿ ಮಂಗಳೂರಿನ ಪಂಪ್‌ವೆಲ್ ವೃತ್ತದ ಸಮೀಪ ಸಮಗ್ರ ಸಾರ್ವಜನಿಕ ಸಾರಿಗೆ ಕೇಂದ್ರವನ್ನು ನಿರ್ಮಿಸಲು ಒಪ್ಪಿಗೆ.
* ಶೇ.100 ಕೇಂದ್ರ ಅನುದಾನಿತ ರಾಷ್ಟ್ರೀಯ ಜಲ ವಿಜ್ಞಾನ ಯೋಜನೆ ಅಡಿ ₹110 ಕೋಟಿ ಕಾಮಗಾರಿಗಳನ್ನು ಕೈಗೊಳ್ಳಲು ಒಪ್ಪಿಗೆ.
* ತುಂಗಭದ್ರಾ ಜಲಾಶಯದ ಸಂಗ್ರಹಣಾ ಸಾಮರ್ಥ್ಯದ ಸಮಸ್ಯೆ ನೀಗಿಸುವ ಸಲುವಾಗಿ ನವಲೆ ಗ್ರಾಮದ ಸಮೀಪ ಸಮತೋಲನಾ ಜಲಾಶಯ ನಿರ್ಮಿಸಲು ₹14.30 ಕೋಟಿ ಡಿಪಿಆರ್‌ಗೆ ಒಪ್ಪಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT