ಗುರುವಾರ , ಮಾರ್ಚ್ 4, 2021
18 °C
ಸಂಪುಟ ಸಭೆ ನಿರ್ಧಾರಕ್ಕೆ ಸ್ವಾಗತ

ಬೆಂಗಳೂರಿನಿಂದ ಆಲಮಟ್ಟಿಗೆ ಕಚೇರಿಗಳು ಸ್ಥಳಾಂತರ; ಸ್ಥಳೀಯರಲ್ಲಿ ಹರ್ಷೋದ್ಗಾರ

ಚಂದ್ರಶೇಖರ ಕೋಳೇಕರ Updated:

ಅಕ್ಷರ ಗಾತ್ರ : | |

Deccan Herald

ಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್ಎಲ್) ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಹಾಗೂ ನೋಂದಾಯಿತ ಕಚೇರಿ ಎರಡನ್ನೂ ಆಲಮಟ್ಟಿಗೆ ಮತ್ತೆ ಸ್ಥಳಾಂತರ ಮಾಡಲು, ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದು ಈ ಭಾಗದ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲೇ ನಡೆಸಬೇಕೆಂಬ ಉದ್ದೇಶದಿಂದ 1994ರಲ್ಲೇ ಕೆಬಿಜೆಎನ್‌ಎಲ್‌ ಸ್ಥಾಪನೆಯಾಗಿತ್ತು. ಆರಂಭದಲ್ಲಿ ಆಲಮಟ್ಟಿಯಲ್ಲೇ ಕಾರ್ಯ ನಿರ್ವಹಿಸಿತ್ತು. ನಂತರ ಹಂತ ಹಂತವಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡಿತ್ತು. ಇದೀಗ ಮತ್ತೆ ಆಲಮಟ್ಟಿಗೆ ಸ್ಥಳಾಂತರಗೊಳ್ಳುವುದರಿಂದ ಮೂಲ ಆಶಯ ಈಡೇರಲಿದೆ ಎಂಬ ಅನಿಸಿಕೆ ಈ ಭಾಗದ ಜನರದ್ದಾಗಿದೆ.

‘ಕೆಲ ಕಚೇರಿಗಳನ್ನು ಸ್ಥಳಾಂತರಗೊಳಿಸಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ. ಇದರ ಸಾಧಕ ಬಾಧಕ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸಂಪುಟದ ಉಪ ಸಮಿತಿ ರಚಿಸಲು ಉದ್ದೇಶಿಸಿದೆ. ಈ ಸಮಿತಿ ಶೀಘ್ರವೇ ರಚನೆಗೊಂಡು, ವರದಿ ಸಲ್ಲಿಸಲಿ. ಆದಷ್ಟು ಬೇಗ ಎಂಡಿ ಕಚೇರಿ ಆಲಮಟ್ಟಿಗೆ ಸ್ಥಳಾಂತರವಾಗಲಿ’ ಎಂದು ನಿಡಗುಂದಿ ಪಿಕೆಪಿಎಸ್‌ ಅಧ್ಯಕ್ಷ ಸಂಗಣ್ಣ ಕೋತಿನ ತಿಳಿಸಿದರು.

ಮೊದಲಿನಂತಾಗದಿರಲಿ

‘ಧರ್ಮಸಿಂಗ್ ಮುಖ್ಯಮಂತ್ರಿಯಿದ್ದ ಸಂದರ್ಭ 2004ರಲ್ಲಿ ಕೆಬಿಜೆಎನ್‌ಎಲ್‌ ಎಂಡಿ ಕಚೇರಿಯನ್ನು ಭೀಮರಾಯನಗುಡಿಗೆ ಹಾಗೂ ಕೆಎನ್‌ಎನ್‌ಎಲ್‌ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾಂತರಗೊಳಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಐಎಎಸ್‌ ಲಾಬಿಗೆ ಈ ಎರಡೂ ಕಚೇರಿಗಳು ಬೆಂಗಳೂರಿನಲ್ಲಿಯೇ ಮುಂದುವರೆದವು. ಈ ಬಾರಿಯೂ ಇದೇ ರೀತಿ ಆಗದಿರಲಿ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಾನಂದ ಅವಟಿ.

‘ನ್ಯಾಯಾಧೀಕರಣದ ತೀರ್ಪು ಬಂದು 8 ವರ್ಷ ಗತಿಸಿದೆ, ಜಲಾಶಯದ ಮಟ್ಟ ಎತ್ತರಿಸಬೇಕಿದೆ, ಯುಕೆಪಿ ಮೂರನೇ ಹಂತದಲ್ಲಿ ನೀರಾವರಿಗೊಳಪಡುವ 6.57 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಬೇಕಿದೆ. ಹೀಗಾಗಿ ಶೀಘ್ರವೇ ಎಂ.ಡಿ.ಕಚೇರಿ ಆಲಮಟ್ಟಿಯಲ್ಲಿ ಪುನರ್‌ ಆರಂಭಗೊಳ್ಳಲಿ’ ಎಂದು ಬೇನಾಳ ಪಿಕೆಪಿಎಸ್ ಅಧ್ಯಕ್ಷ ಶಾಂತಪ್ಪ ಮನಗೂಳಿ ಒತ್ತಾಯಿಸಿದರು.

ನಿಗಮ

ಯುಕೆಪಿ ಕಾಮಗಾರಿಗಳಿಗೆ ಅಗತ್ಯವಿರುವ ಸಂಪನ್ಮೂಲ ಕ್ರೋಢೀಕರಿಸಲಿಕ್ಕಾಗಿಯೇ 1993ರಲ್ಲಿ ಆಗಿನ ಮುಖ್ಯಮಂತ್ರಿ ವೀರಪ್ಪ ಮೊಯಲಿ ನಿಗಮ ಸ್ಥಾಪಿಸುವುದಾಗಿ ಪ್ರಕಟಿಸಿದರು. ಇದರ ಮೂಲಕ ಬಾಂಡ್‌ ಬಿಡುಗಡೆಗೊಳಿಸಿ, ಹಣ ಸಂಗ್ರಹಿಸುವ ಉದ್ದೇಶ ಹೊಂದಿದ್ದರು.

ಇದರಂತೆ 19/8/1994ರಲ್ಲಿ ನಿಗಮ ಆರಂಭಗೊಂಡಿತು. ನಿಗಮದ ಎಂಡಿ ಕಚೇರಿ ಪೂರ್ಣ ಪ್ರಮಾಣದಲ್ಲಿ ಆಲಮಟ್ಟಿಯಲ್ಲಿಯೇ ಚಾಲನೆ ಪಡೆಯಿತು. ಸುಂದರ ಕಟ್ಟಡ, ಎಂಡಿ ವಾಸ್ತವ್ಯಕ್ಕೆ ವಸತಿಗೃಹವೂ ನಿರ್ಮಾಣಗೊಂಡಿತು. ಕ್ಯಾಪ್ಟನ್ ಎಸ್.ರಾಜಾರಾವ್ ಆಲಮಟ್ಟಿಯಲ್ಲಿಯೇ ಮೊದಲ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.

ಆರಂಭದಲ್ಲಿ ಮುಖ್ಯ ಎಂಜಿನಿಯರ್‌ಗಳೇ ವ್ಯವಸ್ಥಾಪಕ ನಿರ್ದೇಶಕರಾಗಿ ಪದೋನ್ನತಿ ಹೊಂದುತ್ತಿದ್ದರು. ಐಎಎಸ್‌ ಅಧಿಕಾರಿಗಳು ಈ ಹುದ್ದೆಗೆ ಬರುತ್ತಿದ್ದಂತೆ ಕಚೇರಿಯೂ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಪ್ರಸ್ತುತ ಹಣಕಾಸು, ವಿವಿಧ ಯೋಜನೆಗಳ ಜಾರಿಯ ತಾಂತ್ರಿಕ ವಿಭಾಗ, ಬಾಂಡ್‌ ಹಣ ನಿಭಾಯಿಸುವ ಶಾಖೆ, ಕಾನೂನು ವಿಭಾಗ ಸೇರಿದಂತೆ ಬಹುತೇಕ ಎಲ್ಲಾ ಆಡಳಿತಗಳು ಬೆಂಗಳೂರಿನಿಂದಲೇ ನಿರ್ವಹಣೆಯಾಗುತ್ತಿವೆ.

ವ್ಯವಸ್ಥಾಪಕ ನಿರ್ದೇಶಕರ ಆಡಳಿತ ಸರಾಗವಾಗಿ ಸಾಗಲು ಪ್ರಧಾನ ವ್ಯವಸ್ಥಾಪಕ (ಜಿ.ಎಂ, ಆಡಳಿತ), ಜಿ.ಎಂ. (ಹಣಕಾಸು), ಕೆಎಎಸ್ ಅಧಿಕಾರಿಗಳ ಹುದ್ದೆ ಸೇರಿ 80ಕ್ಕೂ ಹೆಚ್ಚು ನೌಕರರು ಅಲ್ಲಿಯೇ ಕಾರ್ಯ ನಿರ್ವಹಿಸುತ್ತಾರೆ. ಆಲಮಟ್ಟಿ ಕೇವಲ ನೌಕರರ ಸಂಬಳ, ವರ್ಗಾವಣೆ, ದೂರುಗಳ ಕಡತ ವಿಲೇವಾರಿ ಕಚೇರಿಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.