ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾವಾಸ್ಯೆ ಬಳಿಕ ಸಂಪುಟ ವಿಸ್ತರಣೆ: ಪಕ್ಷೇತರರಿಗೆ ಸಚಿವ ಸ್ಥಾನ ಗಟ್ಟಿ

ರಮೇಶ ಜಾರಕಿಹೊಳಿ ಹೆಸರು ಪ್ರಸ್ತಾಪ
Last Updated 1 ಜೂನ್ 2019, 20:19 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಬೇಕಾದರೆ ಪಕ್ಷೇತರ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇಬೇಕು ಎಂಬ ನಿರ್ಣಯಕ್ಕೆ ಬಂದಿರುವ ಮೈತ್ರಿಕೂಟದ ನಾಯಕರು, ಆರ್.ಶಂಕರ್‌ ಹಾಗೂ ಎಚ್‌. ನಾಗೇಶ್‌ ಅವರಿಗೆ ಸಚಿವ ಸ್ಥಾನ ನೀಡಲು ನಿರ್ಧರಿಸಿದ್ದಾರೆ.

ಅಮಾವಾಸ್ಯೆ (ಜೂನ್‌ 3) ಕಳೆದ ಬಳಿಕ ಸಂಪುಟ ವಿಸ್ತರಣೆ ನಡೆಯುವುದು ಬಹುತೇಕ ಖಚಿತ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ‘ಕಾವೇರಿ’ ನಿವಾಸಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಕುರಿತು ಚರ್ಚೆ ನಡೆಸಿ, ಅಂತಿಮ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಭೇಟಿಯ ಬೆನ್ನಲ್ಲೇ, ರಾಣೆಬೆನ್ನೂರು ಶಾಸಕ ಶಂಕರ್ ಹಾಗೂ ಮುಳಬಾಗಿಲು ಶಾಸಕ ನಾಗೇಶ್ ಅವರನ್ನು ತಮ್ಮ ಮನೆಗೆ ಕರೆಸಿಕೊಂಡ ಸಿದ್ದರಾಮಯ್ಯ ಅವರು, ಪಕ್ಷೇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು, ಸಚಿವ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಮೇಶಗೂ ಸಚಿವ ಸ್ಥಾನ?: ಬಿಜೆಪಿ ಹೊಗಳುತ್ತಾ ಕಾಂಗ್ರೆಸ್‌ನ ಅತೃಪ್ತ ಬಣದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಅವರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ನಾಯಕರ ಮಧ್ಯೆ ಚರ್ಚೆ ನಡೆದಿದೆ.

‘ರಮೇಶ ಅವರನ್ನು ಸೇರಿಸಿಕೊಂಡರೆ ಬಿಜೆಪಿಯ ‘ಆಟ’ ಸದ್ಯಕ್ಕೆ ಕೊನೆಯಾಗಲಿದೆ. ಆ ಅಸ್ತ್ರವನ್ನೂ ಬಳಸೋಣ’ ಎಂದು ಕುಮಾರಸ್ವಾಮಿ ಅವರೇ ಪ್ರಸ್ತಾಪಿಸಿದರು. ‘ಆತ ವಾಪಸ್ ಬರುವುದು ಅನುಮಾನ. ನೀವೇ ಕರೆದುಕೊಂಡು ಬಂದು ಸಚಿವ ಸ್ಥಾನ ನೀಡುವುದಾದರೆ ನನ್ನ ತಕರಾರಿಲ್ಲ. ಪ್ರಯತ್ನ ಪಟ್ಟು ನೋಡಿ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು’ ಎಂದು ಮೂಲಗಳು ವಿವರಿಸಿವೆ.

‘ಒಂದು ವೇಳೆ ರಮೇಶ ಒಪ್ಪದೇ ಇದ್ದರೆ ಆ ಸ್ಥಾನಕ್ಕೆ ಹಿರೇಕೆರೂರ ಶಾಸಕ ಬಿ.ಸಿ. ಪಾಟೀಲ ಅವರನ್ನು ಸೇರಿಸಿಕೊಳ್ಳಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT