ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಗೊಂದಲ: ಸಂಪುಟ ವಿಸ್ತರಣೆ ನನೆಗುದಿಗೆ?

Last Updated 5 ಜೂನ್ 2019, 19:02 IST
ಅಕ್ಷರ ಗಾತ್ರ

ಬೆಂಗಳೂರು: ‘ದೋಸ್ತಿ’ ಪಕ್ಷಗಳ ನಾಯಕರ ಮಧ್ಯೆ ಹೆಚ್ಚುತ್ತಿರುವ ಗೊಂದಲ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರ ಅಸಮಾಧಾನ ಬಹಿರಂಗವಾಗಿರುವುದರಿಂದ ಸಚಿವ ಸಂಪುಟ ವಿಸ್ತರಣೆ ಮತ್ತೆ ನನೆಗುದಿಗೆ ಬೀಳುವ ಸಾಧ್ಯತೆ ಹೆಚ್ಚಾಗಿದೆ.

ಜೆಡಿಎಸ್–ಕಾಂಗ್ರೆಸ್‌ ವರಿಷ್ಠರ ನಿರ್ದೇಶನದ ಮೇರೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಧ್ಯೆ ನಡೆದ ಮಾತುಕತೆ ವೇಳೆ ಜೂನ್‌ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಲಾಗಿತ್ತು. ಪಕ್ಷೇತರ ಶಾಸಕರಾದ ಆರ್‌. ಶಂಕರ್‌ಗೆ ಕಾಂಗ್ರೆಸ್ ಕೋಟಾದಿಂದ ಮತ್ತು ಎಚ್‌. ನಾಗೇಶ್‌ಗೆ ಜೆಡಿಎಸ್‌ ಕೋಟಾದಿಂದ ಸಂಪುಟದಲ್ಲಿ ಅವಕಾಶ ನೀಡುವ ಬಗ್ಗೆ ತೀರ್ಮಾನ ಆಗಿತ್ತು.

ಆದರೆ, ಕಾಂಗ್ರೆಸ್‌ನ ಹಿರಿಯ ಶಾಸಕರಾದ ರೋಷನ್‌ ಬೇಗ್, ರಾಮಲಿಂಗಾರೆಡ್ಡಿ ಮುಂತಾದವರು ಸಚಿವ ಸಂಪುಟ ವಿಸ್ತರಣೆಯಲ್ಲಿ ನಿಷ್ಠರಿಗೆ ಆದ್ಯತೆ ನೀಡದಿರುವ ಬಗ್ಗೆ ಬಹಿರಂಗ ಅಸಮಾಧಾನ ತೋಡಿಕೊಂಡಿದ್ದರು. ಸಂಪುಟ ವಿಸ್ತರಣೆ ಮಾಡುವುದಾದರೆ ತಮಗೂ ಅವಕಾಶ ಕಲ್ಪಿಸಬೇಕು ಎಂದು ಕಾಂಗ್ರೆಸ್‌ನ ಅನೇಕ ಶಾಸಕರು ಬೇಡಿಕೆ ಮಂಡಿಸಿದ್ದರು. ಇದು ಸಂಪುಟ ವಿಸ್ತರಣೆ ವಿಳಂಬವಾಗಲು ಮೊದಲ ಕಾರಣ ಎನ್ನಲಾಗುತ್ತಿದೆ.

ಆದರೆ, ತಮ್ಮ ಪಕ್ಷದ ಕೋಟಾದಲ್ಲಿ ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಒಲವು ತೋರಿಸಿಲ್ಲ. ತಮ್ಮ ಪಕ್ಷದ ಶಾಸಕರಿಗೆ ನೀಡಬೇಕು ಎಂಬುದು ಅವರ ಇಂಗಿತವಾಗಿದೆ. ವಿಳಂಬಕ್ಕೆ ಇದು ಮತ್ತೊಂದು ಪ್ರಮುಖ ಕಾರಣ ಎಂದೂ ಹೇಳಲಾಗುತ್ತಿದೆ.

‘ಕಾಂಗ್ರೆಸ್‌ ಪಕ್ಷ ಈಗಾಗಲೇ ತನ್ನ ಕೋಟಾದಿಂದ ಶಂಕರ್‌ ಅವರ ಹೆಸರನ್ನು ಮುಖ್ಯಮಂತ್ರಿಯವರಿಗೆ ಕಳಿಸಿದೆ. ಜೆಡಿಎಸ್‌ ಕೋಟಾದಿಂದ ನಾಗೇಶ್‌ ಹೆಸರನ್ನು ಸೇರಿಸಿ, ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸುವುದು ಮುಖ್ಯಮಂತ್ರಿ ಜವಾಬ್ದಾರಿ. ಆದರೆ, ರಾಜ್ಯಪಾಲರಿಗೆ ಪಟ್ಟಿ ಕಳುಹಿಸಲು ಕುಮಾರಸ್ವಾಮಿ ವಿಳಂಬ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಆಪರೇಷನ್ ಕಮಲ’ ಯತ್ನವನ್ನು ಬಿಜೆಪಿ ಸದ್ಯಕ್ಕೆ ಕೈಬಿಟ್ಟಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆ ಪಕ್ಷದತ್ತ ಹೋಗಲು ಅನೇಕರಿಗೆ ಮನಸ್ಸಿಲ್ಲ. ಈ ಹೊತ್ತಿನಲ್ಲಿ ಸಂಪುಟ ವಿಸ್ತರಣೆ ಮಾಡಿ, ಅನಗತ್ಯವಾಗಿ ತೊಂದರೆಗೆ ಸಿಲುಕುವುದು ಬೇಡ. ಶಾಸಕರು ರಾಜೀನಾಮೆ ಕೊಡಲು ಮುಂದಾದರೆ ಆಗ ನೋಡೋಣ’ ಎಂಬ ಚರ್ಚೆಯೂ ಕಾಂಗ್ರೆಸ್‌ನಲ್ಲಿ ನಡೆದಿದೆ ಎಂದು ಮೂಲಗಳು ಹೇಳಿವೆ.

ರಮೇಶಗೆ ಸ್ವಾಮೀಜಿ ಸಲಹೆ: ಕಾಂಗ್ರೆಸ್‌ನ ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಬುಧವಾರ ಭೇಟಿ ಮಾಡಿದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು ‘ಸದ್ಯಕ್ಕೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ’ ಎಂದು ಸಲಹೆ ನೀಡಿದ್ದಾರೆ.

‘ರಾಜಕೀಯದಲ್ಲಿ ಉಜ್ವಲ ಭವಿಷ್ಯ ಇರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಭವಿಷ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ’ ಎಂದೂ ಸ್ವಾಮೀಜಿ ಕಿವಿ ಮಾತು ಹೇಳಿದರು ಎಂದು ಮೂಲಗಳು ಹೇಳಿವೆ.

‘ಪುನರ್‌ರಚನೆ ವೇಳೆ ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ’

‘ಸಂಪುಟ ಪುನರ್‌ರಚನೆ ಮಾಡುವಾಗ ರಾಮಲಿಂಗಾರೆಡ್ಡಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆ ನೀಡಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಈಗ ಸಂಪುಟ ವಿಸ್ತರಣೆಯಷ್ಟೇ ನಡೆಯುತ್ತಿದೆ. ಪಕ್ಷೇತರರನ್ನಷ್ಟೇ ಸೇರಿಸಿಕೊಳ್ಳುವ ಚರ್ಚೆ ನಡೆದಿದೆ. ಪುನರ್‌ರಚನೆ ವೇಳೆ ಅವರಿಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

ಪಕ್ಷದಲ್ಲಿ ಹಿರಿಯರ ಕಡೆಗಣನೆ ಹಾಗೂ ಚುನಾವಣೆ ಸೋಲಿನ ಬಗ್ಗೆ ಅಸಮಾಧಾನ ಹೊರಹಾಕಿದ್ದ ರಾಮಲಿಂಗಾರೆಡ್ಡಿ, ರಾಜ್ಯ ನಾಯಕರ ವಿರುದ್ಧ ಕಿಡಿಕಾರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT