ಸಚಿವ ಸಂಪುಟ ವಿಸ್ತರಣೆ: ಅತೃಪ್ತಿ ಶಮನಕ್ಕೆ ಯತ್ನ

ಮಂಗಳವಾರ, ಜೂನ್ 25, 2019
30 °C
ಶಾಸಕರೊಂದಿಗೆ ವೇಣುಗೋಪಾಲ್‌ ಚರ್ಚೆ ಸಾಧ್ಯತೆ

ಸಚಿವ ಸಂಪುಟ ವಿಸ್ತರಣೆ: ಅತೃಪ್ತಿ ಶಮನಕ್ಕೆ ಯತ್ನ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ‘ಮೈತ್ರಿ’ ಸರ್ಕಾರವನ್ನು ಉಳಿಸಿಕೊಳ್ಳಲು ಪಕ್ಷೇತರರಿಗೆ ಮಣೆ ಹಾಕುವ ‘ದೋಸ್ತಿ’ ಪಕ್ಷಗಳ ನಡೆಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಅತೃಪ್ತರನ್ನು ಸಮಾಧಾನಪಡಿಸಲು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಬೆಂಗಳೂರಿಗೆ ಬರಲಿದ್ದಾರೆ. 

ರೋಷನ್‌ ಬೇಗ್‌, ರಾಮಲಿಂಗಾ ರೆಡ್ಡಿ ಹಾಗೂ ಬಿ.ಸಿ.ಪಾಟೀಲ ಸೇರಿದಂತೆ ಡಜನ್‌ಗೂ ಹೆಚ್ಚು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಅತೃಪ್ತರು ಪದೇ ಪದೇ ಪಕ್ಷಕ್ಕೆ ಮುಜುಗರವಾಗುವಂತೆ ಹೇಳಿಕೆಗಳನ್ನು ನೀಡುವ ಮೂಲಕ ಅಸಮಾಧಾನವನ್ನು ಹೊರ ಹಾಕುತ್ತಿರುವುದು ಪಕ್ಷದ ವರಿಷ್ಠರಿಗೆ ತಲೆನೋವಾಗಿದೆ.

ಅತೃಪ್ತ ಶಾಸಕರನ್ನು ಕರೆಸಿ ಮಾತನಾಡುವ ಮೂಲಕ ಕೋಪ ಶಮನ ಮಾಡಲು ವೇಣುಗೋಪಾಲ್‌ ಸೋಮವಾರ ಇಲ್ಲವೆ ಮಂಗಳವಾರ ಬೆಂಗಳೂರಿಗೆ ಬರಲಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರ ಜತೆ ಚರ್ಚಿಸಲಿದ್ದಾರೆ. ಈ ಸಂದರ್ಭದಲ್ಲಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಜೊತೆಗೆ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೋಷನ್‌ ಬೇಗ್‌, ರಾಮಲಿಂಗಾರೆಡ್ಡಿ ಅವರು ಪಕ್ಷಕ್ಕೆ ಮುಜುಗರ ಉಂಟು ಮಾಡುವಂತಹ ಹೇಳಿಕೆ ನೀಡಿದ್ದರಿಂದ ಒಂದಿಬ್ಬರು ಸಚಿವರನ್ನು ಕೈಬಿಟ್ಟು, ಇಬ್ಬರು ಹಿರಿಯ ಶಾಸಕರಿಗೆ ಮುಂಬರುವ ದಿನಗಳಲ್ಲಿ ಸಂಪುಟದಲ್ಲಿ ಅವಕಾಶ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ.

ಶಾಸಕ ಬಿ.ಸಿ.ಪಾಟೀಲ ಪಕ್ಷದ ಮೇಲೆ ಒತ್ತಡ ಹೇರುವ ತಂತ್ರವಾಗಿ ಪಕ್ಷದಲ್ಲಿ ಲಿಂಗಾಯತ ಸಮುದಾಯವನ್ನು ಕಡೆ
ಗಣಿಸಲಾಗಿದೆ ಎಂದು ಶನಿವಾರ ಆಕ್ರೋಶ ಹೊರಹಾಕಿದ್ದರು.

ಈ ಮಧ್ಯೆ ಶಾಸಕ ರಮೇಶ ಜಾರಕಿಹೊಳಿ ನಡೆ ನಿಗೂಢವಾಗಿದ್ದು, ಅವರ ಸಂಪರ್ಕದಲ್ಲಿರುವ ಶಾಸಕರಾದ ಮಹೇಶ್‌ ಕುಮಠಳ್ಳಿ, ಬಿ.ನಾಗೇಂದ್ರ, ಭೀಮಾನಾಯ್ಕ್‌, ಜೆ.ಎನ್‌.ಗಣೇಶ್‌ ಕೈಕೊಡುವ ಸಾಧ್ಯತೆ ಇರುವ ಕಾರಣ, ಇವರಲ್ಲಿ ಕೆಲವರನ್ನು ಕರೆಸಿ ಮಾತನಾಡಬಹುದು. ಇಲ್ಲವಾದರೆ, ರಮೇಶ ಅತೃಪ್ತರನ್ನು ಬಳಸಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸುವ ಸಾಧ್ಯತೆ ಇದೆ ಎಂಬ ಭೀತಿಯೂ ವರಿಷ್ಠರಿಗಿದೆ.

 ಎಚ್‌ಡಿಕೆ–ಎಚ್‌ಡಿಡಿ ಸಮಾಲೋಚನೆ

ಇದೇ 12ರಂದು ನಡೆಯಲಿರುವ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಎಚ್‌.ಡಿ.ದೇವೇಗೌಡ ಭಾನುವಾರ ಸಮಾಲೋಚನೆ ನಡೆಸಿದರು.

ಇಬ್ಬರು ಪಕ್ಷೇತರರು ಬುಧವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಸ್ಲಿಂ ಕೋಟಾದಡಿ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್‌ ಅವರಿಗೆ ಸಚಿವ ಸ್ಥಾನ ನೀಡಬೇಕೆ ಎಂಬ ವಿಚಾರ ಇನ್ನೂ ತೀರ್ಮಾನವಾಗಿಲ್ಲ. ಸೋಮವಾರ ಈ ಬಗ್ಗೆ ತೀರ್ಮಾನ ತೆಗೆದುಕೊಂಡರೂ ಅಚ್ಚರಿ ಇಲ್ಲ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಬಿ.ಎಂ.ಫಾರೂಕ್‌ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಈವರೆಗೆ ನನಗೆ ಮಾಹಿತಿ ಇಲ್ಲ. ಸೋಮವಾರ ತಮ್ಮ ಜೊತೆ ಮಾತನಾಡುವಂತೆ ದೇವೇಗೌಡರು ಹೇಳಿದ್ದಾರೆ’ ಎಂದರು.

**

ಆಪರೇಷನ್ ಕಮಲಕ್ಕೆ ಕೈ ಹಾಕುವುದಿಲ್ಲ. ಆಪರೇಷನ್ ಕಮಲದಿಂದ ದೂರವಿರುವಂತೆ ಹೈ ಕಮಾಂಡ್ ಹೇಳಿದೆ

- ಬಿ.ಶ್ರೀರಾಮುಲು, ಶಾಸಕ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !